
ಹೊಸಕೋಟೆ ಕುಗ್ರಾಮಗಳಿಗೆ ತಲುಪದ ‘ಶಕ್ತಿ’ ಯೋಜನೆ ಲಾಭ
ಹೊಸಕೋಟೆ: ‘ಸಿದ್ದರಾಮಯ್ಯ ಜಾರಿಗೆ ತಂದ ‘ಶಕ್ತಿ’ ಯೊಜನೆಯನ್ನು ಇಡೀ ರಾಜ್ಯದ ಮಹಿಳೆಯರು ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಆದರೆ ನಮ್ಮ ಊರಿನ ಮಹಿಳೆಯರಿಗೆ ಆ ಭಾಗ್ಯ ಇನ್ನೂ ಸಿಕ್ಕಿಲ್ಲ. ಬಸ್ ಬಾರದ ನಮ್ಮ ಊರುಗಳಲ್ಲಿ ಜನರು ಅನುಭವಿಸುವ ತೊಂದರೆ ಹೇಳತೀರದು...’
ಇದು ತಾಲ್ಲೂಕಿನ 25 ಕುಗ್ರಾಮಗಳ ಗ್ರಾಮಸ್ಥರ ಮಾತು. ಹೆದ್ದಾರಿ ಪಕ್ಕದಲ್ಲಿ ಇದ್ದರೂ ಈ ಊರುಗಳು ಬಸ್ ಮುಖವನ್ನೇ ಕಂಡಿಲ್ಲ. ನಗರಕ್ಕೆ ಹೋಗಬೇಕಾದರೆ ಪಕ್ಕದೂರಿಗೆ ಹೋಗಿ ಬಸ್ ಹಿಡಿಯಬೇಕು. ಅಲ್ಲಿಗೆ ಹೋಗಲು ಆಟೊ ₹300 ನೀಡಬೇಕು. ಹಣ ಇಲ್ಲದಿದ್ದರೆ ನಡೆದುಕೊಂಡು ಹೋಗಬೇಕು. ಬಸ್ ಬಾರದ ಕಾರಣದಿಂದ ರೈತರು, ಮಹಿಳೆಯರು ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ಕೂಲಿಕಾರರ ಎದುರಿಸುವ ಸಮಸ್ಯೆ ಒಂದಲ್ಲ ಎರಡಲ್ಲ.
ವಿದ್ಯಾರ್ಥಿನಿಯರು, ಕೂಲಿ ಕೆಲಸಕ್ಕೆ ಇತರೆಡೆಗೆ ತೆರಳುವ ಹೆಣ್ಣುಮಕ್ಕಳು, ಪಡಿತರ, ಆರೋಗ್ಯ ತಪಾಸಣೆ, ಕೋರ್ಟು ಕಚೇರಿ ಹೀಗೆ ನೂರೆಂಟು ಕೆಲಸ ಕಾರ್ಯಗಳಿಗೆ ತೆರಳಲು ದುಬಾರಿ ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ.
ಒಟ್ಟು ಏಳು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ತಾಲ್ಲೂಕಿನಲ್ಲಿ ಮೂಲಕ ಹಾದುಹೋಗಿವೆ. ಇದರ ಸಮೀಪ ಇರುವ ಗ್ರಾಮಗಳಲ್ಲಿ ಬಸ್ ಸಂಚಾರ ಕನಸಾಗಿಯೇ ಉಳಿದಿದೆ. ಹೆದ್ದಾರಿ ಪಕ್ಕದ ಹಳ್ಳಿಗಳ ಸಮೀಪ ಸಾಕಷ್ಟು ಸರ್ಕಾರಿ ಬಸ್ ಓಡಾಡುತ್ತವೆ. ಆದರೆ ಯಾವುದು ನಿಲ್ಲಿಸುವುದಿಲ್ಲ. ಇದರಿಂದ ಇಲ್ಲಿನ ಮಹಿಳೆಯರಿಗೆ ಶಕ್ತಿಯ ಫಲ ಸಿಗುತ್ತಿಲ್ಲ.
ತಾವರೆಕೆರೆಯಿಂದ ಹೊಸಕೋಟೆಗೆ ಬಸ್‌ನಲ್ಲಿ 18 ಕಿ.ಮೀ. ಪ್ರಯಾಣಕ್ಕೆ ₹35 ನೀಡುವ ಜನ, ತಾವರೆಕೆರೆಯಿಂದ ನಾಲ್ಕೈದು ಕಿ.ಮೀ. ಅಂತರದಲ್ಲಿರುವ ಸತ್ತಿಗೆನಹಳ್ಳಿ, ಕೊಂಡ್ರಹಳ್ಳಿ, ಭೀಮಕನಹಳ್ಳಿ ಮತ್ತಿತರ ತಮ್ಮ ಸ್ವಗ್ರಾಮಗಳಿಗೆ ತೆರಳಲು ದಿನಪೂರ್ತಿ ಕಷ್ಟಪಟ್ಟು ದುಡಿದ ಹಣದಲ್ಲಿ ₹150 ರಿಂದ ₹200 ನೀಡಬೇಕು. ರಾತ್ರಿಯಾದರೆ ಈ ಬೆಲೆ ₹400 ರಿಂದ ₹500ಕ್ಕೆ ಏರಿಕೆಯಾಗುತ್ತದೆ.
‘ದೇಶದ ತಂತ್ರಜ್ಞಾನ ಮಂಗಳ ಮತ್ತು ಚಂದ್ರನ ಅಂಗಳಕ್ಕೆ ಉಪಗ್ರಹ ಉಡಾವಣೆ ಮಾಡಿದೆ. ಆದರೂ ನಮ್ಮೂರಿಗಳಿಗೆ ಬಸ್ ಬಂದಿಲ್ಲ. ನಂದಗುಡಿಯಿಂದ ಹಳೆಊರು, ರಾಮಗೊವಿಂದಪುರ ಸೇರಿದಂತೆ ನೆರೆಯ ಗ್ರಾಮಗಳಿಗೆ ಬೆಳಗ್ಗೆ, ಸಂಜೆಯ ನಿತ್ಯ ಚಳಿ, ಗಾಳಿ, ಮಳೆ ಮತ್ತು ಬಿಸಿಲಿನ ನಡುವೆ ನಡೆದುಕೊಂಡು ಹೋಗುವುದು ಅಭ್ಯಾಸವಾಗಿದೆ’ ಎನ್ನುತ್ತಾರೆ ವಿದ್ಯಾರ್ಥಿಗಳು.
ಅಂತರರಾಷ್ಟೀಯ ವಿಮಾನ ನಿಲ್ದಾಣ ಸಮೀಪ ಇರುವ ಸೂಲಿಬೆಲೆ ಸರ್ಕಾರಿ ಕಾಲೇಜಿಗೆ ಬರುವ ಬಾಲೆನಹಳ್ಳಿ, ದ್ಯಾವಸಂದ್ರ, ಭಾವಪುರ, ಬೆಟ್ಟಹಳ್ಳಿ, ಗಿಡ್ಡಪ್ಪನಹಳ್ಳಿಯ ವಿದ್ಯಾರ್ಥಿನಿಯರು ಇದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರಿಂದ ತಾಲ್ಲೂಕಿನ ಬಹುತೇಕ ಹಳ್ಳಿಗಳ ಪೋಷಕರು ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು ಶಾಲೆ ಬಿಡಿಸುತ್ತಿದ್ದಾರೆ. ಬಹುತೇಕರು ವಸತಿ ಶಾಲೆಗೆ ಸೇರಿಸುತ್ತಿದ್ದಾರೆ.
ತಾಲ್ಲೂಕಿನ ನಂದಗುಡಿ ಹೋಬಳಿಯ ಗೆದ್ದಲಪುರ, ಇಟ್ಟಸಂದ್ರ, ಈಸ್ತೂರು ಹೊಸಹಳ್ಳಿ, ಭೈರಸಂದ್ರ, ಸತ್ತಿಗೆನಹಳ್ಳಿ, ನೆಲವಾಗಿಲು, ಕಾರಹಳ್ಳಿ, ಚಿಕ್ಕಕೊರಟಿ, ಮೇಡೂರು, ಎನ್. ಹೊಸಹಳ್ಳಿ, ಸೂಲಿಬೆಲೆ ಹೋಬಳಿಯ ಗಿಡ್ಡಪ್ಪನಹಳ್ಳಿ, ಹೊಸದಿಂಬಹಳ್ಳಿ, ಒಳಗೆರೆಪುರ, ಕೋಗಿಲು, ಬಾಲೆನಾಹಳ್ಳಿ, ದ್ಯಾವಸಂದ್ರ, ಕಸಬಾ ಹೋಬಳಿಯ ಕೆಂಬಳಿಗನಹಳ್ಳಿ, ಸಿಟಿಗೊಲ್ಲಹಳ್ಳಿ, ಮಲಿಯಪ್ಪನಹಳ್ಳಿ ಅನುಗೊಂಡನಹಳ್ಳಿ, ಹೋಬಳಿಯ ತತ್ತನೂರು, ಅರೇಹಳ್ಳಿ, ತಿಂಡ್ಲು, ತರಬನಹಳ್ಳಿ, ಜಡಿಗೆನಹಳ್ಳಿ ಹೋಬಳಿಯ ಹಲಸಿನಕಾಯಿಪುರ.
ಏಳು ಹೆದ್ದಾರಿಗಳಿಂದ ಗ್ರಾಮಗಳಲ್ಲಿ ಸಂಪರ್ಕ ಕ್ರಾಂತಿಯಾಗಲಿದೆ. ಇದರಿಂದ ಬೆಂಗಳೂರು ನಗರ ಮತ್ತು ಹೊಸಕೋಟೆ ತಾಲ್ಲೂಕು ಕೇಂದ್ರಕ್ಕೆ ಕ್ಷಿಪ್ರಗತಿಯಲ್ಲಿ ತೆರಳಲು ಬಸ್ ಸೌಕರ್ಯ ಸಿಗಲಿದೆ ಎಂಬ ಚರ್ಚೆ ನಡೆದಿತ್ತು. ಆದರೆ ಹೆದ್ದಾರಿ ಕಾಮಗಾರಿ ಪೂರ್ಣಗೊಂಡ ಬಳಿಕ ಆ ನಿರೀಕ್ಷೆ ಹುಸಿ ಆಯಿತು.
ತಾಲ್ಲೂಕಿನಲ್ಲಿ ಹಾದು ಹೋಗಿರುವ ಏಳು ಹೆದ್ದಾರಿಯಿಂದ ಗ್ರಾಮೀಣ ಭಾಗದ ರೈತರು ತಮ್ಮ ಕೃಷಿ ಭೂಮಿ ಕಳೆದುಕೊಂಡರು. ಈಗ ತಮ್ಮ ಅಳಿದುಳಿದ ಜಮೀನುಗಳಿಗೆ ತೆರಳಲು ಬಸ್ ಇಲ್ಲದೆಯೇ ನಾಲ್ಕೈದು ಕಿ.ಮೀ. ಸುತ್ತಿ ಬಳಿಸಿ ಓಡಾಡಬೇಕು.
70 ವರ್ಷದಲ್ಲಿ ಒಂದೇ ಬಸ್
ನನಗೆ ಬುದ್ದಿ ಬಂದು 70 ವರ್ಷ ಆಗಿದೆ. ನಮ್ಮೂರಿಗೆ ಎರಡು ವರ್ಷದ ಹಿಂದೆ ಮೊದಲ ಬಾರಿಗೆ ಸೂಲಿಬೆಲೆಯಿಂದ ನಂದಗುಡಿಗೆ ಒಂದು ಬಸ್ ಬಂದದ್ದನ್ನು ನೋಡಿ ಜನ್ಮ ಧನ್ಯ ವಾಯಿತು ಅಂಥ ತಿಳಿದುಕೊಂಡಿದ್ದೆ. ಆದರೆ ಹೆಚ್ಚು ದಿನ ಓಡಾಡಲಿಲ್ಲ. ಇಂದಿಗೂ ನಮ್ಮೂರಲ್ಲಿ 150 ಮನೆಗಳಲ್ಲಿವೆ. 60 ಮನೆಗಳಲ್ಲಿ ಮಾತ್ರ ಬೈಕ್ ಇದೆ. ಉಳಿದವರ ಓಡಾಡಲು ತೊಂದರೆ ಅನುಭವಿಸಿದ್ದಾರೆ.
ಬಂಡವಾಳ ಹೂಡಿಕೆ ಮಾಡುವ ಕಂಪನಿಗಳಿಗೆ ಹೆದ್ದಾರಿಗಳು ಅನುಕೂಲ ಮಾಡಿಕೊಟ್ಟಿವೆಯೇ ಹೊರತು ಗ್ರಾಮೀಣ ಜನರಿಗೆ ಯಾವುದೇ ಅನುಕೂಲ ಮಾಡಿಕೊಟ್ಟಿಲ್ಲ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಶಕ್ತಿ ಯೋಜನೆಯನ್ನು ಗ್ರಾಮೀಣ ಭಾಗಕ್ಕೆ ಕೋಡೊಯ್ಯಬೇಕೆಂಬ ಇಚ್ಛಾಶಕ್ತಿ ಯಾರಿಗೂ ಇಲ್ಲ. ಹಳ್ಳಿ ಜನರ ಸಂಕಟ ಅರ್ಥ ಆಗುವುದಿಲ್ಲ.
-ಪ್ರಭುದೇವಯ್ಯ, ಒಬಾಳಪುರ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260824-15-609403852