
‘ಇ–ಕೆವೈಸಿ’ಗೆ ಪಡಿತರ ಚೀಟಿದಾರರ ಪರದಾಟ
ಮೈಸೂರು: ಪಡಿತರ ಚೀಟಿದಾರರ ಖಚಿತತೆಗಾಗಿ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ನಡೆಸಲಾಗುತ್ತಿರುವ ‘ಇ–ಕೆವೈಸಿ’ ಪ್ರಕ್ರಿಯೆಗೆ ಜಿಲ್ಲೆಯಲ್ಲಿ ‘ಸರ್ವರ್ ಸಮಸ್ಯೆ’ ಎದುರಾಗಿದೆ. ಪರಿಣಾಮ, ಕಳಪೆ ಸಾಧನೆಯಾಗಿದ್ದು, ಶೇ 10ರಷ್ಟು ಮಾತ್ರವೇ ಪ್ರಗತಿಯಾಗಿದೆ.
ಕೇಂದ್ರ ಸರ್ಕಾರದ ಸೂಚನೆಯಂತೆ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಪ್ರಕಾರ ಕೈಗೊಳ್ಳಲಾಗಿದೆ. ತಾಂತ್ರಿಕ ತೊಡಕಿನ ಕಾರಣದಿಂದಾಗಿ, ಫಲಾನುಭವಿಗಳು ‘ಗ್ರಾಹಕರು ನಾವೇ’ ಎಂದು ದೃಢಪಡಿಸಲು ಬರುವ ಚೀಟಿದಾರರು ನ್ಯಾಯಬೆಲೆ ಅಂಗಡಿಗಳ ಎದುರು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಮರ್ಪಕವಾಗಿ ಸರ್ವರ್ ಲಭ್ಯವಾಗದಿರುವ ಪರಿಣಾಮ, ಸದ್ಯಕ್ಕೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ.
ಇ–ಕೆವೈಸಿಗಾಗಿ, ಪಡಿತರ ಚೀಟಿಯಲ್ಲಿ ಹೆಸರಿರುವ ಕುಟುಂಬದ ಸದಸ್ಯರೆಲ್ಲರೂ ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಿಗೆ ಬರಬೇಕಾಗುತ್ತದೆ.
ಎರಡೂ ಕೆಲಸದಿಂದ: ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಪಡಿತರ ಹಂಚಿಕೆ ಆರಂಭವಾದ ಸಂದರ್ಭದಲ್ಲೇ ಇ–ಕೆವೈಸಿ ಪ್ರಕ್ರಿಯೆಗೂ ಚಾಲನೆ ನೀಡಲಾಗಿತ್ತು. ಒಂದೆಡೆ ಪಡಿತರ ವಿತರಣೆ, ಇನ್ನೊಂದೆಡೆ ಇ–ಕೆವೈಸಿ ಪ್ರಕ್ರಿಯೆ ಮಾಡುವ ಒತ್ತಡಕ್ಕೆ ನ್ಯಾಯಬೆಲೆ ಅಂಗಡಿಯವರು ಸಿಲುಕಿದ್ದರು. ಇದರಿಂದ ಆಗುತ್ತಿದ್ದ ವಿಳಂಬದಿಂದ ಪಡಿತರ ಚೀಟಿದಾರರಿಗೂ ತೊಂದರೆ ಉಂಟಾಗುತ್ತಿತ್ತು. ಹೀಗಾಗಿ, ಪ್ರಕ್ರಿಯೆಯನ್ನೇ ನಿಲ್ಲಿಸಲಾಗಿದೆ. ಸದ್ಯಕ್ಕೆ ಪಡಿತರ ವಿತರಣೆಗೆ ಮಾತ್ರವೇ ಆದ್ಯತೆ ನೀಡಲಾಗುತ್ತಿದೆ. ಎರಡೂ ಕಾರ್ಯಕ್ಕೆ ಒಂದೇ ಸರ್ವರ್ ಬಳಸಲಾಗುತ್ತಿರುವುದು ‘ಸರ್ವರ್ ಬ್ಯುಸಿ’ಯ ತಾಂತ್ರಿಕ ತೊಂದರೆ ಎದುರಾಗಿತ್ತು ಎಂದು ಮೂಲಗಳು ತಿಳಿಸಿವೆ.
‘ಕಾದು ಸುಸ್ತಾಗುವ ಅಥವಾ ಬೇಸರಗೊಳ್ಳುವ ಚೀಟಿದಾರರು ನಮ್ಮ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದೂ ಇದೆ. ಸದ್ಯಕ್ಕೆ ಇಲಾಖೆಯ ಸೂಚನೆ ಮೇರೆಗೆ ಪ್ರಕ್ರಿಯೆ ನಿಲ್ಲಿಸಲಾಗಿದೆ’ ಎಂದು ನಜರಬಾದ್‌ನ ನ್ಯಾಯಬೆಲೆ ಅಂಗಡಿಯೊಂದರ ಮಾಲೀಕರು ತಿಳಿಸಿದರು.
ಕಾದರೂ ಆಗಲಿಲ್ಲ: ‘ನನ್ನ ಮಗ ಬೇರೆ ಕಡೆ ಕೆಲಸ ಮಾಡುತ್ತಿದ್ದಾನೆ. ಪಡಿತರ ಚೀಟಿ ಉಳಿಸಿಕೊಳ್ಳಲೆಂದು ಕೆವೈಸಿ ಪ್ರಕ್ರಿಯೆಗಾಗಿ ಆತನನ್ನು ಇಲ್ಲಿಗೆ ಕರೆಸಿಕೊಂಡಿದ್ದೆ. ಇಡೀ ದಿನ ಕಾದರೂ ಸರ್ವರ್ ಸಮಸ್ಯೆಯಿಂದ ಪ್ರಕ್ರಿಯೆ ಪೂರ್ಣಗೊಳಿಸಲಿಲ್ಲ. ನಮ್ಮಂತೆಯೇ ಹಲವು ಮಂದಿಯೂ ಕಾದಿದ್ದರು. ಮುಂದಿನ ತಿಂಗಳು ಬರುವಂತೆ ತಿಳಿಸುತ್ತಿದ್ದಾರೆ’ ಎಂದು ಗಿರಿಯಾಭೋವಿಪಾಳ್ಯದ ನಿವಾಸಿ ಮಹದೇವ್ ಪ್ರತಿಕ್ರಿಯಿಸಿದರು.
ಜಿಲ್ಲೆಯಲ್ಲಿ ಒಟ್ಟು 22 ಲಕ್ಷ ಪಡಿತರ ಚೀಟಿದಾರರು ಇದ್ದಾರೆ. ನಿಯಮದ ಪ್ರಕಾರ, ಪ್ರತಿ ಐದು ವರ್ಷಕ್ಕೊಮ್ಮೆ ಇ–ಕೆವೈಸಿ ಪ್ರಕ್ರಿಯೆಯನ್ನು ಪಡಿತರ ಚೀಟಿದಾರರು ಪೂರೈಸಬೇಕಾಗುತ್ತದೆ. ಗ್ರಾಹಕರನ್ನು ಖಚಿತಪಡಿಸಿಕೊಳ್ಳಲು, ಸ್ಥಳಾಂತರ, ಮರಣ ಅಥವಾ ವರ್ಗಾವಣೆ ಮೊದಲಾದ ಮಾಹಿತಿ ಪಡೆದುಕೊಳ್ಳಲು ಈ ಕಾರ್ಯ ನಡೆಸಲಾಗುತ್ತದೆ. ಇ–ಕೆವೈಸಿ ಪೂರ್ಣಗೊಳಿಸಿ ಐದು ವರ್ಷ ಆಗಿರುವವರು, ಈಗ ಮತ್ತೊಮ್ಮೆ ಇ–ಕೆವೈಸಿ ಮಾಡಿಸಬೇಕಾಗಿದೆ.
ಈವರೆಗೆ ಆಗಿರುವುದು ಶೇ 10ರಷ್ಟು ಸಾಧನೆಯಷ್ಟೆ ಜಿಲ್ಲೆಯಲ್ಲಿ 13 ಮಂದಿ ಮಂದಿಯದು ಆಗಬೇಕಿದೆ ಪ್ರತಿ 5 ವರ್ಷಕ್ಕೊಮ್ಮೆ ಪ್ರಕ್ರಿಯೆ ನಡೆಯಬೇಕು
ಸೆ.1ರಿಂದ ಪುನರಾರಂಭ: ಮಂಟೇಸ್ವಾಮಿ
‘ಪಡಿತರ ವಿತರಣೆ ಇ–ಕೆವೈಸಿ ಪ್ರಕ್ರಿಯೆ ಏಕಕಾಲಕ್ಕೆ ನಡೆದಿದ್ದರಿಂದ ತೊಂದರೆ ಆಗಿತ್ತು. ಸರ್ಕಾರದ ಸೂಚನೆ ಮೇರೆಗೆ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಸೆ.1ರಿಂದ ಆಂದೋಲನದ ಮಾದರಿಯಲ್ಲಿ ನಡೆಸಲಾಗುವುದು. ಇದಕ್ಕಾಗಿ ಪಡಿತರ ಚೀಟಿಯಲ್ಲಿ ಹೆಸರಿರುವ ಎಲ್ಲರೂ ಖುದ್ದು ಹಾಜರಾಗಬೇಕಾಗುತ್ತದೆ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.