
ಖಾನಾಪುರ ತಾಲ್ಲೂಕಿನಲ್ಲಿ ಭತ್ತದ ಉತ್ತಮ ಇಳುವರಿ ನಿರೀಕ್ಷೆ
ಖಾನಾಪುರ: ತಾಲ್ಲೂಕಿನಲ್ಲಿ ಈ ಬಾರಿ ಮುಂಗಾರು ಹಂಗಾಮಿನಲ್ಲಿ 44 ಸಾವಿರ ಹೆಕ್ಟೇರ್‌ನಲ್ಲಿ ವಿವಿಧ ಬೆಳೆಗಳ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಈ ಪೈಕಿ 30 ಸಾವಿರ ಹೆಕ್ಟೇರ್‌ನಲ್ಲಿ ರೈತರು ಭತ್ತದ ಕೃಷಿ ಕೈಗೊಂಡಿದ್ದಾರೆ.
ಈ ಬಾರಿ ಮುಂಗಾರು ಮಳೆ ತಡವಾಗಿ ಆರಂಭವಾದರೂ, ಆಷಾಢ ಮಾಸದ ಕೊನೆಯ ವಾರದವರೆಗೆ ಭತ್ತದ ಗದ್ದೆಗೆ ಬೇಕಿರುವಷ್ಟು ಸುರಿದಿದೆ. ಹಾಗಾಗಿ ಭತ್ತದ ಬೆಳೆಗಾರರು ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದಾರೆ.
ತಾಲ್ಲೂಕಿನಲ್ಲಿ ಜೂನ್‌ನಲ್ಲಿ ವಾಡಿಕೆಯಷ್ಟು ಮಳೆ ಸುರಿಯದ ಕಾರಣ, ರೈತಾಪಿ ವರ್ಗ ಆತಂಕದಲ್ಲಿತ್ತು. ಕೆಲವೆಡೆ ಭತ್ತದ ಬೀಜಗಳು ಮೊಳಕೆಯೊಡೆದಿರಲಿಲ್ಲ. ಆದರೆ, ಜುಲೈ ತಿಂಗಳ ಮೊದಲ ವಾರದಲ್ಲಿ ನಾಲ್ಕೈದು ದಿನ ಸತತವಾಗಿ ಸುರಿದ ಮಳೆಯಿಂದಾಗಿ ಭತ್ತದ ಕೃಷಿ ಗರಿಗೆದರಿತ್ತು. ಸತತ ವರ್ಷಧಾರೆಗೆ ಭತ್ತದ ಗದ್ದೆಗಳು ಜಲಾವೃತಗೊಂಡವು.
ರೈತರು ಇದೇ ಸಮಯ ಬಳಸಿಕೊಂಡು, ಮೊಳಕೆಯೊಡೆಯದ ಕಡೆಗಳಲ್ಲಿ ಮತ್ತು ನಾಟಿಗಾಗಿ ಸಿದ್ಧಪಡಿಸಿದ್ದ ಜಮೀನುಗಳಲ್ಲಿ ಭತ್ತದ ನಾಟಿ ಕಾರ್ಯ ಕೈಗೊಂಡರು. ಜುಲೈ ಕೊನೆಯ ವಾರದಿಂದ ಉತ್ತಮ ಮಳೆಯಾದ ಕಾರಣ, ಈಗ ಭತ್ತದ ಜಮೀನುಗಳಲ್ಲಿ ಪೈರುಗಳು ನಳನಳಿಸುತ್ತಿವೆ.
‘ಮಳೆ ಬರುವುದಕ್ಕೂ ಮುನ್ನ, ಭತ್ತವನ್ನು ಬಿತ್ತನೆ ಮಾಡದೆ ಉಳಿದಿದ್ದ ಬಹುತೇಕ ಜಮೀನುಗಳಲ್ಲಿ ರೈತರು ಭತ್ತದ ತರುಗಳನ್ನು ಸಿದ್ಧಗೊಳಿಸಿ ನಾಟಿ ಮಾಡಿದ್ದಾರೆ. ಇದರೊಂದಿಗೆ ಶೇಂಗಾ, ರಾಗಿ, ಆಲೂಗಡ್ಡೆ, ಗೆಣಸು ಬೆಳೆಗಳ ಬಿತ್ತನೆ ಕಾರ್ಯವನ್ನೂ ಪೂರ್ಣಗೊಳಿಸಿದ್ದಾರೆ. ಈ ವರ್ಷ ಮಳೆ ತಡವಾಗಿ ಆರಂಭವಾದರೂ, ನಂತರ ರೈತಾಪಿ ವರ್ಗಕ್ಕೆ ಅನುಕೂಲಕರ ವಾತಾವಾರಣ ನಿರ್ಮಿಸಿದೆ. ಪಾರಿಶ್ವಾಡ, ಇಟಗಿ, ಗಂದಿಗವಾಡ, ಗುಂಡೇನಟ್ಟಿ, ಮಂಗೇನಕೊಪ್ಪ, ಜಾಂಬೋಟಿ, ಗುಂಜಿ, ನಾಗರಗಾಳಿ ಭಾಗಗಳಲ್ಲಿ ಭತ್ತದ ಬೆಳೆ ಉತ್ತಮವಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ದಾಮೋದರ ಚವ್ಹಾಣ ಹೇಳಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260824-21-67477271