
ಕಾರವಾರ: ಮೇಲ್ಸೇತುವೆ ಕೆಳಭಾಗ ವಲಸಿಗರು, ವ್ಯಾಪಾರಿಗಳ ಆಶ್ರಯ ತಾಣ
ಕಾರವಾರ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ–66ಕ್ಕೆ ನಗರ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಮೇಲ್ಸೇತುವೆಯ (ಫ್ಲೈ ಓವರ್) ಅಡಿ ಭಾಗ ವಲಸಿಗರು, ವ್ಯಾಪಾರಿಗಳ ಆಶ್ರಯ ತಾಣವಾಗಿ ಮಾರ್ಪಡುತ್ತಿದೆ ಎಂಬ ದೂರು ಹೆಚ್ಚಿದೆ.
ಕಳೆದ ಹಲವು ತಿಂಗಳುಗಳಿಂದ ನಿರಂತರವಾಗಿ ವಲಸಿಗರ ಗುಂಪು ಈ ಜಾಗದಲ್ಲಿ ಗುಂಪು ಗುಂಪಾಗಿ ನೆಲೆ ಕಂಡುಕೊಳ್ಳತೊಡಗಿದ್ದು, ಸಾರ್ವಜನಿಕ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ. ಪದೇ ಪದೇ ಕ್ರಮಕ್ಕೆ ದೂರು ನೀಡಿದ್ದರ ಹೊರತಾಗಿಯೂ ಈವರೆಗೆ ನಿಯಂತ್ರಣ ಸಾಧ್ಯವಾಗಿಲ್ಲ.
ಜನರ ದೂರು ಹೆಚ್ಚಿದ ಬೆನ್ನಲ್ಲೇ ಮೇಲ್ಸೇತುವೆಯ ಕೆಳಭಾಗದಲ್ಲಿ ಬೇಲಿ ಅಳವಡಿಸಿ, ವಲಸಿಗರ ವಸತಿ ತಡೆಯಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
‘ಬಲೂನ್, ಆಟಿಕೆಗಳ ಮಾರಾಟದ ನೆಪದಲ್ಲಿ ಗುಂಪು ಗುಂಪಾಗಿ ಬರುವ ಅಲೆಮಾರಿ ಕುಟುಂಬಗಳು ವರ್ಷಗಟ್ಟಲೆ ಮೇಲ್ಸೇತುವೆ ಕೆಳಭಾಗದ ಜಾಗಗಳಲ್ಲಿ ಆಶ್ರಯ ಪಡೆದುಕೊಳ್ಳುತ್ತಿದ್ದಾರೆ. ತಮ್ಮ ಜೊತೆಗೆ ಪುಟ್ಟ ಮಕ್ಕಳನ್ನೂ ಕರೆತರುವ ಅವರು ವ್ಯಾಪಾರ ನಡೆಸದೆ,
ಮಕ್ಕಳನ್ನೂ ಬಳಸಿಕೊಂಡು ಭಿಕ್ಷಾಟನೆಯಲ್ಲಿ ತೊಡಗುತ್ತಿದ್ದಾರೆ. ಅಂತಹವರ ಸಂಖ್ಯೆ ಹೆಚ್ಚುತ್ತಿರುವುದು ಜನರಿಗೂ ಕಿರಿಕಿರಿ ಉಂಟುಮಾಡಿದೆ’ ಎಂದು ಕಾಜುಬಾಗ ನಿವಾಸಿ ಚಂದ್ರಕಾಂತ ಮಾಳ್ಸೇಕರ್ ದೂರಿದರು.
‘ಬಿಲ್ಟ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೇಲ್ಸೇತುವೆಯ ಅಡಿ ಭಾಗದಲ್ಲಿ ಅಲೆಮಾರಿಗಳ ಹಲವು ಗುಂಪು ಆಶ್ರಯ ಪಡೆದಿದೆ.
ರಾತ್ರಿ ವೇಳೆ ಪರಸ್ಪರ ಗಲಾಟೆ, ಹೊಡೆದಾಟ ಮಾಡುತ್ತಿದ್ದಾರೆ. ಇದೇ ಜಾಗಗಳಲ್ಲಿ ವಾಹನಗಳನ್ನೂ ನಿಲು ಗಡೆ ಮಾಡಲಾಗುತ್ತಿದ್ದು, ಅಕ್ರಮ ಚಟುವಟಿಕೆ ನಡೆಯುವ ಶಂಕೆಯೂ ಇದೆ. ಪೊಲೀಸರು ಈಚೆಗೆ ಇದೇ ಜಾಗ ಗಳಲ್ಲಿ ಗಾಂಜಾ ಸೇವನೆ ಮಾಡಿದ್ದ ಆರೋಪದಡಿ ಕೆಲವರನ್ನು ಬಂಧಿಸಿ ಘಟನೆಯೂ ನಡೆದಿದೆ.
ಬಿಲ್ಟ್ ವೃತ್ತದ ಸಮೀಪ ಕುಡಿದ ಮತ್ತಿನಲ್ಲಿ ಹಲವರು ಮೃತರಾದ ಘಟನೆಯೂ ನಡೆದಿದೆ. ಇಂತಹ ಘಟನೆಗಳು ಜನರಲ್ಲಿ ಆತಂಕ ಹುಟ್ಟಿಸುತ್ತಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಸಂತೋಷ್ ನಾಯ್ಕ ಹೇಳಿದರು.
ಸಂಬಂಧಿಸಿದವರು ಇತ್ತ ಶೀಘ್ರ ಗಮನ ಹರಿಸಬೇಕಾಗಿದೆ.
ಹಸ್ತಾಂತರಕ್ಕೆ ಪ್ರಯತ್ನಿಸಿದ್ದ ನಗರಸಭೆ
ಹೆದ್ದಾರಿಯ ಮೇಲ್ಸೇತುವೆಯ ಕೆಳಭಾಗವನ್ನು ಹಸ್ತಾಂತರಿಸಿಕೊಂಡು ಅಲ್ಲಿ ಸ್ಕೇಟಿಂಗ್ ರಿಂಕ್, ಉದ್ಯಾನ, ಒಳಾಂಗಣ ಆಟಗಳ ಕೋರ್ಟ್ ನಿರ್ಮಿಸಲು ನಗರಸಭೆ ಈ ಹಿಂದೆ ಪ್ರಸ್ತಾವ ಇಟ್ಟಿತ್ತು. ಆದರೆ, ಪ್ರಸ್ತಾವವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಒಪ್ಪಿಕೊಂಡಿರಲಿಲ್ಲ.
‘ಮೇಲ್ಸೇತುವೆಯ ಕೆಳಭಾಗದಲ್ಲಿ ಅಪಾಯಕಾರಿ ಆಗದ ರೀತಿಯಲ್ಲಿ ಸಂತೆ ವೇಳೆ ವ್ಯಾಪಾರ ನಡೆಸಲು, ಆಟೋಟಗಳಿಗೆ ವ್ಯವಸ್ಥೆ ಕಲ್ಪಿಸಿಕೊಡಲು ಬಳಕೆ ಮಾಡಿಕೊಳ್ಳುವ ಯೋಚನೆ ಇತ್ತು. ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೂ ತರಲಾಗಿದೆ’ ಎಂದು ನಗರಸಭೆ ಅಧಿಕಾರಿಯೊಬ್ಬರು ಹೇಳಿದರು. ಈ ಬಗ್ಗೆ ಪ್ರತಿಕ್ರಿಯೆಗೆ ಎನ್‌ಎಚ್‌ಎಐ ಯೋಜನಾ ನಿರ್ದೇಶಕರು, ಪ್ರತಿಕ್ರಿಯೆಗೆ ಸಿಗಲಿಲ್ಲ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260822-20-1303993171