
ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆ | ಗ್ರಾಹಕರಿಗೆ ಬಿಸಿ: ಉದ್ಯಮಕ್ಕೂ ಸಂಕಷ್ಟ
ಮೈಸೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದರೆ, ಹೋಟೆಲ್ ಉದ್ಯಮಕ್ಕೂ ಸಂಕಷ್ಟ ಬಂದೊದಗಿದೆ. ‘ಸದ್ಯ ಹೋಟೆಲ್ ನಡೆಸುವುದಕ್ಕಿಂತ ಮುಚ್ಚುವುದು ಲೇಸು’ ಎನ್ನುತ್ತಾರೆ ಉದ್ಯಮಿಗಳು.
ಕಳೆದ ಕೆಲವು ದಿನಗಳಿಂದ ಸಕ್ಕರೆ ಬೆಲೆ ಏರಿಕೆ ಸದ್ದು ಮಾಡುತ್ತಿದೆ. ಕೇಂದ್ರ ಸರ್ಕಾರವು ಪೆಟ್ರೋಲ್‌ಗೆ ಎಥೆನಾಲ್ ಮಿಶ್ರಣ ಪ್ರಮಾಣ ಹೆಚ್ಚಿಸಿದ ಬೆನ್ನಲ್ಲೇ ಸಕ್ಕರೆ ಬೆಲೆ ಪ್ರತಿ ಕೆ.ಜಿ.ಗೆ ಸರಾಸರಿ ₹20ರಷ್ಟು ಹೆಚ್ಚಾಗಿ ₹70ರವರೆಗೂ ಬೆಲೆ ಏರಿತ್ತು. ಅಲ್ಪ ಇಳಿಕೆ ಕಂಡಿದೆಯಾದರೂ ಮತ್ತೆ ಏರುವ ಆತಂಕವಿದೆ. ಇದರೊಟ್ಟಿಗೆ ಬೆಲ್ಲದ ಬೆಲೆಯೂ ₹70ಕ್ಕೆ ಜಿಗಿದಿದೆ. ನಿತ್ಯದ ಕಾಫಿ–ಟೀಯಿಂದ ಆರಂಭಗೊಂಡು ಸಿಹಿ ತಿನಿಸುಗಳವರೆಗೆ ಎಲ್ಲದಕ್ಕೂ ಸಕ್ಕರೆ ಬಳಸಲಾಗುತ್ತಿದೆ. ಹೀಗಾಗಿ ಬೆಲೆ ಏರಿಕೆ ಬಿಸಿ ತುಸು ಹೆಚ್ಚೇ ತಟ್ಟುತ್ತಿದೆ.
ಸದ್ಯ ಈರುಳ್ಳಿ ಬೆಲೆ ಕೇಳಿದರೆ ಕಣ್ಣೀರು ಹಾಕುವಂತಾಗಿದೆ. ಕಳೆದೊಂದು ತಿಂಗಳಿಂದ ಇದರ ಧಾರಣೆ ಏರುಮುಖವಾಗಿದ್ದು, ಉತ್ತಮ ಗುಣಮಟ್ಟದ ಈರುಳ್ಳಿ ಕೆ.ಜಿ.ಗೆ ₹70ರವರೆಗೂ ಬೆಲೆ ಏರಿಸಿಕೊಂಡಿದೆ. ಸದ್ಯದಲ್ಲೇ ₹100ಕ್ಕೆ ತಲುಪಬಹುದು ಎನ್ನುತ್ತಾರೆ ವರ್ತಕರು.
ಅಕ್ಕಿಯೂ ಗಗನಮುಖಿ: ಕಳೆದ ಒಂದೆರಡು ತಿಂಗಳಲ್ಲಿ ಅಕ್ಕಿ ಬೆಲೆ ಕೆ.ಜಿ.ಗೆ ₹15–20ರಷ್ಟು ಹೆಚ್ಚಿದೆ. ದಿನಬಳಕೆಯ ಸಾಮಾನ್ಯ ದರ್ಜೆಯ ಅಕ್ಕಿ ಕನಿಷ್ಠ ₹55 ಬೆಲೆ ಇದ್ದು, ಸರಾಸರಿ ಗುಣಮಟ್ಟದ ಉತ್ಪನ್ನ ₹70–80ಕ್ಕೆ ಸಿಗುತ್ತಿದೆ. ಸೋನಾಮಸೂರಿ, ಬಾಸ್ಮತಿ ಮೊದಲಾದ ಬಗೆಯ ಅಕ್ಕಿಗಳೂ ದುಬಾರಿ ಆಗುತ್ತಿವೆ. ಈ ಬಾರಿ ಬರಗಾಲದಿಂದ ಭತ್ತದ ಕೃಷಿಗೆ ಹೊಡೆತ ಬಿದ್ದಿದ್ದು, ಬೆಲೆ ಇನ್ನಷ್ಟು ಹೆಚ್ಚುವ ಆತಂಕವಿದೆ.
ಬೆಣ್ಣೆ–ತುಪ್ಪವೂ ಬಿಸಿ: ಕರ್ನಾಟಕ ಹಾಲು ಮಹಾ ಮಂಡಳವು ಕಳೆದ ತಿಂಗಳಾಂತ್ಯದಲ್ಲಿ ನಂದಿನಿ ತುಪ್ಪದ ಬೆಲೆಯನ್ನು ₹15ರಷ್ಟು ಹೆಚ್ಚಿಸಿದ್ದು, ಸದ್ಯ ಕೆ.ಜಿ.ಗೆ ₹715 ದರವಿದೆ. ಬೆಣ್ಣೆ ಕೆ.ಜಿ.ಗೆ ₹50 ಏರಿ ₹660ರಂತೆ ಮಾರಾಟವಾಗುತ್ತಿದೆ.
ಹೋಟೆಲ್‌ಗಳಿಗೆ ಸಂಕಷ್ಟ: ದಿನಬಳಕೆ ವಸ್ತುಗಳ ಬೆಲೆ ಏರಿಕೆಯು ಜನಸಾಮಾನ್ಯರ ಜೊತೆಗೆ ಹೋಟೆಲ್ ಉದ್ಯಮಕ್ಕೂ ಬಿಸಿ ಮುಟ್ಟಿಸುತ್ತಿದೆ.
‘ಕಳೆದ ಕೆಲವು ವರ್ಷಗಳಿಂದಲೂ ಸಕ್ಕರೆಯು ಪ್ರತಿ ಕ್ವಿಂಟಲ್‌ಗೆ ₹3,800–₹4,000 ಸರಾಸರಿಯಲ್ಲಿತ್ತು. ಈಗ ₹7,200ರವರೆಗೂ ಏರಿದೆ. ಉತ್ತಮ ದರ್ಜೆಯ ಈರುಳ್ಳಿ ₹70 ದಾಟಿದೆ. ಹೋಟೆಲ್‌ಗಳಿಗಂತೂ ಈ ಎರಡೂ ಬೇಕೆ ಬೇಕು’ ಎನ್ನುತ್ತಾರೆ ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣ ಗೌಡ.
‘19 ಕೆ.ಜಿ. ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯನ್ನು ಕೇಂದ್ರ ಸರ್ಕಾರ ದಿಢೀರ್ ಎಂದು ₹1,400ಕ್ಕೆ ಏರಿಸಿತ್ತು. ಯುದ್ಧ ಭೀತಿ ಕಳೆದು ಕಚ್ಚಾತೈಲದ ಪೂರೈಕೆ ಸಾಮಾನ್ಯವಾಗಿದ್ದರೂ ಬೆಲೆ ಮಾತ್ರ ಮೊದಲಿನಂತೆ ಇಲ್ಲ. ಕಳೆದ ಎರಡು ತಿಂಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಕೇವಲ ₹400 ಇಳಿದಿದ್ದು, ಈಗ ₹2,800ರಷ್ಟಿದೆ’ ಎಂದು ಅವರು ವಿವರಿಸುತ್ತಾರೆ.
‘ಮೇನಿಂದ ವಿದ್ಯುತ್ ಶುಲ್ಕವೂ ಏರಿದೆ. ನಾನಾ ನಮೂನೆಯ ತೆರಿಗೆಗಳ ಹೊರೆ ಹೆಚ್ಚುತ್ತಿದೆ. ಸರ್ಕಾರ ಮಧ್ಯ ಪ್ರವೇಶಿಸಿ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ತರಬೇಕು. ಇಲ್ಲದಿದ್ದರೆ ಜನಸಾಮಾನ್ಯರು, ಉದ್ಯಮ ಎರಡಕ್ಕೂ ಹೊರೆ ಆಗಲಿದೆ’ ಎನ್ನುತ್ತಾರೆ ಅವರು.
ಹಾಸ್ಟೆಲ್ ‘ಬಿಸಿಯೂಟ’ಕ್ಕೂ ಹೊರೆ
ಬೆಲೆ ಏರಿಕೆಯು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿನ ಬಿಸಿಯೂಟ ಯೋಜನೆ ಹಾಗೂ ಸರ್ಕಾರಿ ವಿದ್ಯಾರ್ಥಿನಿಲಯಗಳಲ್ಲಿನ ಊಟೋಪಚಾರದ ಮೇಲೂ ಪರಿಣಾಮ ಬೀರುತ್ತಿದೆ. ಕೋಳಿಮೊಟ್ಟೆ ಖರೀದಿಗೆ ಸರ್ಕಾರ ₹6 ಕೊಟ್ಟರೆ ಚಿಲ್ಲರೆ ಮಾರುಕಟ್ಟೆಯಲ್ಲಿ ₹8 ಇದ್ದು ಹೆಚ್ಚುವರಿ ದರವನ್ನು ಶಿಕ್ಷಕರೇ ಭರಿಸಬೇಕಿದೆ. ಇದೀಗ ಸಕ್ಕರೆ ಸೇರಿದಂತೆ ಇತರ ಪದಾರ್ಥಗಳ ಬೆಲೆ ಹೆಚ್ಚಳವೂ ಸಂಕಷ್ಟಕ್ಕೆ ಸಿಲುಕಿಸಿದೆ. ವಿದ್ಯಾರ್ಥಿನಿಲಯಗಳಿಗೆ ಪೂರೈಕೆ ಆಗುತ್ತಿರುವ ಆಹಾರ ಸಾಮಗ್ರಿಯಲ್ಲೂ ವ್ಯತ್ಯಾಸ ಆಗುವ ಸಾಧ್ಯತೆ ಇದೆ.