
ಗದಗ | ತೀವ್ರ ಬರಪೀಡಿತ ಪಟ್ಟಿಯಲ್ಲಿ ಗಜೇಂದ್ರಗಡ
ಗದಗ: ರಾಜ್ಯದ 101 ತಾಲ್ಲೂಕುಗಳನ್ನು ತೀವ್ರ ಬರಪೀಡಿತ ತಾಲ್ಲೂಕುಗಳೆಂದು ರಾಜ್ಯ ಸರ್ಕಾರ ಗುರುವಾರ ಘೋಷಿಸಿದ್ದು, ಜಿಲ್ಲೆಯ ಗಜೇಂದ್ರಗಡ ತಾಲ್ಲೂಕನ್ನು ಮಾತ್ರ ಈ ಪಟ್ಟಿಗೆ ಸೇರಿಸಲಾಗಿದೆ.
ಜಿಲ್ಲೆಯ ಗದಗ, ಮುಂಡರಗಿ, ರೋಣ, ಶಿರಹಟ್ಟಿ, ಲಕ್ಷ್ಮೇಶ್ವರ ತಾಲ್ಲೂಕುಗಳಲ್ಲೂ ಮಳೆಯ ತೀವ್ರ ಕೊರತೆ ದಾಖಲಾಗಿದೆ. ಕೆಲವು ಸಮಯವಷ್ಟೇ ನರಗುಂದದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರೂ, ಅಲ್ಲಿಯೂ ಮಳೆ ಕೊರತೆಯಿಂದ ಬೆಳೆಹಾನಿ ಉಂಟಾಗಿದೆ.
ಮಳೆ ಕೊರತೆಯಿಂದ ಬೆಳೆಹಾನಿ, ಭೂಮಿಯ ತೇವಾಂಶ ಕ್ಷೀಣ, ಜಲಮೂಲಗಳು ಖಾಲಿ ಹಾಗೂ ಅಂತರ್ಜಲ ಮಟ್ಟ ಕುಸಿತದಂತಹ ಗಂಭೀರ ಸಮಸ್ಯೆಗಳನ್ನು ಜಿಲ್ಲೆ ಎದುರಿಸುತ್ತಿದೆ. ಆಗಾಗ ಮಳೆಯಾದರೂ ಬೆಳೆಗೆ ಯಾವುದೇ ಪ್ರಯೋಜವಾಗಿಲ್ಲ. ಸಂಕಷ್ಟದಲ್ಲಿರುವ ರೈತರು, ಬರ ಪರಿಹಾರದ ನಿರೀಕ್ಷೆಯಲ್ಲಿದ್ದರು. ಸದ್ಯಕ್ಕೆ ಒಂದೇ ತಾಲ್ಲೂಕು ಬರಪೀಡಿತ ಪ್ರದೇಶದ ಪಟ್ಟಿಯಲ್ಲಿರುವುದರಿಂದ ಇತರೆ ತಾಲ್ಲೂಕುಗಳ ರೈತರು ಬೇಸರಗೊಂಡಿದ್ದಾರೆ.
ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಮಳೆಯ ತೀವ್ರ ಕೊರತೆ ಇರುವುದರಿಂದ ಎಲ್ಲವನ್ನೂ ಬರಪೀಡಿತೆ ಎಂದೂ ತುರ್ತಾಗಿ ಘೋಷಿಸುವಂತೆ ರೈತರು ಪ್ರತಿಭಟನೆ ನಡೆಸಿದ್ದರು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಅವರೂ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದರು. ಇದು ರೈತರಲ್ಲಿ ಆಶಾಭಾವನೆ ಮೂಡಿಸಿತ್ತು.
ಕಾಯಬೇಕಾದ ಸ್ಥಿತಿ: ಮಳೆಯ ಮುನ್ಸೂಚನೆ ಹಾಗೂ ಬೆಳೆಗಳ ಸ್ಥಿತಿ ಗತಿಯನ್ನು ಪ್ರತಿವಾರ ಪರಿಶೀಲನೆ ನಡೆಸುವುದು ಮುಂದುವರಿಸಲಿದ್ದು, ಮುಂಬರುವ ದಿನಗಳಲ್ಲಿ ಪರಿಸ್ಥಿತಿಗೆ ತಕ್ಕಂತೆ, ಅಗತ್ಯವಿರುವ ಕಡೆಗಳಲ್ಲಿ ಹೆಚ್ಚಿನ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗುವುದೆಂದು ಸರ್ಕಾರ ತಿಳಿಸಿದೆ.
ಬೆಳೆ ಸಮರ್ಪಕವಾಗಿ ಕೈಸೇರದ ಕಾರಣ ಯಾವುದೇ ಆದಾಯ ದೊರೆತಿಲ್ಲ. ಸಾಲ ತೀರಿಸಬೇಕಾದ ಒತ್ತಡವೂ ಇದೆ. ಸರ್ಕಾರ ಇನ್ನೂ ವಿಳಂಬ ಮಾಡಿದರೆ ಹೇಗೆ? ಎಂಬುದು ರೈತರ ಪ್ರಶ್ನೆ.
‘ಜಿಲ್ಲೆಯಲ್ಲಿ ಸರಿಯಾಗಿ ಬೆಳೆ ಹಾನಿ ಸಮೀಕ್ಷೆ ಮಾಡಿಲ್ಲ. ಹಾಗಾಗಿ, ಜಿಲ್ಲೆಯ ತಾಲ್ಲೂಕುಗಳು ಬರದಿಂದ ನಲುಗುತ್ತಿದ್ದರೂ ಒಂದು ತಾಲ್ಲೂಕನ್ನು ಮಾತ್ರ ಬರಪೀಡಿತ ಎಂದು ಘೋಷಿಸಲಾಗಿದೆ. ಕೆಲವು ಭಾಗದ ತಾಲ್ಲೂಕುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದು ಮಲತಾಯಿ ಧೋರಣೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಶಂಕರಗೌಡ ಜಯನಗೌಡ್ರ ಆರೋಪಿಸಿದರು.
‘ಮುಂದಿನ ದಿನಗಳಲ್ಲಿ ಇನ್ನಷ್ಟು ತಾಲ್ಲೂಕು ಸೇರ್ಪಡೆ ಮಾಡುವುದಾಗಿ ಸರ್ಕಾರ ಹೇಳಿದೆ. ಆದರೂ, ವಿಳಂಬ ಧೋರಣೆ ಮೂಲಕ ರೈತರಿಗೆ ಮೋಸ ಮಾಡುವ ಹುನ್ನಾರ ಅಡಗಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡಿದ್ದರೆ ಹೋರಾಟ ಮುಂದುವರಿಸಲಾಗುತ್ತದೆ’ ಎಂದು ಎಚ್ಚರಿಸಿದರು.