
ಕಿತ್ತೂರು ವೃಕ್ಷೋದ್ಯಾನ... ಅಧ್ವಾನ!
ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ಗಿರಿಯಾಲ ಕೆ.ಎ ಗ್ರಾಮದ ಹೊರವಲಯದಲ್ಲಿ ಅರಣ್ಯ ಇಲಾಖೆ ನಿರ್ಮಿಸಿರುವ ‘ರಾಣಿ ಚನ್ನಮ್ಮ ಕಿತ್ತೂರು ವೃಕ್ಷೋದ್ಯಾನ’ ಪಾಳುಬಿದ್ದಿದೆ.
‘ಅಲ್ಲಿಗೆ ತೆರಳಲು ಇರುವ ಸಂಪರ್ಕ ರಸ್ತೆಯೂ ಕೆಸರುಮಯವಾಗಿದೆ. ಮಕ್ಕಳು ಆಟವಾಡಲು ಇದ್ದ ವಸ್ತುಗಳು ಸೌಂದರ್ಯ ಕಳೆದುಕೊಳ್ಳುತ್ತ ಸಾಗಿವೆ’ ಎಂದು ಸಾರ್ವಜನಿಕರು ದೂರುತ್ತಾರೆ.
ಆಟಿಕೆ ವಸ್ತು ಒಂದು ಬದಿಗೆ ಕುಸಿದಿದೆ. ಮತ್ತೊಂದು ಕಿತ್ತು ಬಿದ್ದಿದ್ದು, ಇನ್ನೊಂದು ಉಪಕರಣಕ್ಕೆ ಒರಗಿ ನಿಂತಿದೆ. ಇವೆಲ್ಲ ಆಟಿಕೆ ವಸ್ತುಗಳಿದ್ದ ನೆಲವು ಸ್ವಚ್ಚತೆಯಿಂದ ಕೂಡಿಲ್ಲ.
ಉದ್ಯಾನದ ತುಂಬೆಲ್ಲ ಹುಲ್ಲು ಬೆಳೆದಿದೆ. ಮಕ್ಕಳು, ಹಿರಿಯರಿಗೆ ವಾಯುವಿಹಾರದ ಸುಂದರ ತಾಣವಾಗಬೇಕಿದ್ದ ಈ ಉದ್ಯಾನ ಮಸುಕಾಗುತ್ತಿದೆ ಎಂದು ಆ ಭಾಗದ ಜನರು ನೋವು ತೋಡಿಕೊಳ್ಳುತ್ತಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಉಮೇಶ ಕತ್ತಿ ಅರಣ್ಯ ಸಚಿವರಾಗಿದ್ದ ಸಂದರ್ಭ ಈ ವೃಕ್ಷೋದ್ಯಾನಕ್ಕೆ ಚಾಲನೆ ನೀಡಲಾಗಿತ್ತು. ವಿವಿಧ ಬಗೆಯ ಗಿಡಗಳು, ಆಟಿಕೆ ವಸ್ತುಗಳು, ಸಾರ್ವಜನಿಕರಿಗೆ ಕುಳಿತುಕೊಳ್ಳಲು ಅನುಕೂಲವಾಗುವಂತೆ ಆಸನ ವ್ಯವಸ್ಥೆ ಹಾಗೂ ದುಂಡನೆಯ ನೆರಳಾಶ್ರಿತ ಕಟ್ಟೆ ಇಲ್ಲಿದ್ದವು.
ಉದ್ಯಾನದ ಪ್ರವೇಶದ್ವಾರವನ್ನು ಆಕರ್ಷವಾಗಿ ನಿರ್ಮಾಣ ಮಾಡಲಾಗಿತ್ತು. 30 ಎಕರೆ ಪ್ರದೇಶದ ಈ ಉದ್ಯಾನದಲ್ಲಿ ಗಿಡ-ಮರ ಬೆಳೆಸುವ ನಿಟ್ಟಿನಲ್ಲಿ ಅನೇಕ ಕಾಮಗಾರಿ ಕೈಗೊಳ್ಳಲಾಗಿತ್ತು. ಅಲ್ಲಿರುವ ಈಗಿನ ವ್ಯವಸ್ಥೆ ನೋಡಿದರೆ ಸಮರ್ಪಕ ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಸವರಾಜ ಸಂಗೊಳ್ಳಿ ಅಸಮಾಧಾನ ವ್ಯಕ್ತಪಡಿಸಿದರು.
ಸಾರ್ವಜನಿಕರು ತೆರಳಲು ಉತ್ತಮ ರಸ್ತೆ ನಿರ್ಮಾಣ ಆಗಬೇಕು. ಅಲ್ಲಿಯ ಸೌಂದರ್ಯಕ್ಕೆ ಹೆಚ್ಚಿನ ಗಮನ ಹರಿಸಬೇಕು. ಸಾರ್ವಜನಿಕರ ವಿಹಾರ ಸ್ಥಳವಾಗಿ ರೂಪಗೊಳ್ಳುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಈ ಬಗ್ಗೆ ಅರಣ್ಯಾಧಿಕಾರಿ ಪ್ರತಿಕ್ರಿಯೆ ಪಡೆಯಲು ಕರೆ ಮಾಡಿದರೂ ಸ್ವೀಕರಸಲಿಲ್ಲ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260828-21-1200232326