ದುಬಾರಿಯಾದರೂ ಮಾರುಕಟ್ಟೆಯಲ್ಲಿ ಕಾಡು ಅಣಬೆಗೆ ಬಹುಬೇಡಿಕೆ

ದುಬಾರಿಯಾದರೂ ಮಾರುಕಟ್ಟೆಯಲ್ಲಿ ಕಾಡು ಅಣಬೆಗೆ ಬಹುಬೇಡಿಕೆ

ದುಬಾರಿಯಾದರೂ ಮಾರುಕಟ್ಟೆಯಲ್ಲಿ ಕಾಡು ಅಣಬೆಗೆ ಬಹುಬೇಡಿಕೆ

ಕುಮಟಾ: ಕಳೆದ ಎರಡು ದಿನಗಳಿಂದ ಕುಮಟಾ ಮಾರುಕಟ್ಟೆಗೆ ಹೇರಳ ಪ್ರಮಾಣದ ಕಾಡು ಅಣಬೆ ಮಾರಾಟಕ್ಕೆ ಬರುತ್ತಿದ್ದು, ಒಂದು ಅಣಬೆ ಮೊಗ್ಗು ₹ 10ಕ್ಕೆ ಮಾರಾಟವಾಗಿದೆ.

ವರ್ಷದಲ್ಲಿ ಒಮ್ಮೆಯಾದರೂ ಕಾಡು ಅಣಬೆ ತಿನ್ನಬೇಕು ಎನ್ನುವುದು ಸ್ಥಳೀಯ ಆಹಾರ ಸಂಪ್ರದಾಯ. ಹಾಗಾಗಿ ಕಾಡು ಅಣಬೆ ಸಿಕ್ಕಾಗ ಅದನ್ನು ಸೇವಿಸುವುದು ವಾಡಿಕೆಯಾಗಿದ್ದರಿಂದ ಅದು ದುಬಾರಿಯಾದರೂ ಮಾರುಕಟೆಯಲ್ಲಿ ಬಿಸಿ ದೋಸೆಯಂತೆ ಖರ್ಚಾಗುತ್ತಿವೆ.

ಅಣಬೆ ಫ್ರೈ, ಪಲ್ಯ, ಫಿಂಗರ್ ಚಿಪ್ಸ್, ಪೆಪ್ಪರ್ ಡ್ರೈ ಮೊದಲಾದ ಖಾದ್ಯ ತಯಾರಿಸಿದರೆ ಅದರ ರುಚಿಯೇ ಬೇರೆಯಾಗಿರುತ್ತದೆ. ಅಣಬೆಯ ಗಟ್ಟಿ ಮೊಗ್ಗುಗಳಿಗೆ ಬೇಡಿಕೆ ಜಾಸ್ತಿಯಾಗಿದ್ದು, ಹೂವಾಗಿ ಅರಳಿಬಿಟ್ಟರೆ ಗ್ರಾಹಕರು ಕೊಂಡುಕೊಳ್ಳುವುದಿಲ್ಲ. ಜಾಸ್ತಿ ಪ್ರಮಾಣದಲ್ಲಿ ಕಾಡು ಅಣಬೆ ಸಿಕ್ಕರೆ ಕೆಲವರು ತಮ್ಮ ತೀರಾ ಹತ್ತಿರದ ಬಂಧುಗಳ ಮನೆಗೂ ಕಳಿಸಿಕೊಡುತ್ತಾರೆ. ಅಣಬೆ ಸಂಗ್ರಹಿಸಿ ಮಾರಾಟ ಮಾಡುವವರಿಗೂ ಪಟ್ಟಣದಲ್ಲಿ ತಮ್ಮದೇ ಹತ್ತಾರು ಗ್ರಾಹಕರಿರುತ್ತಾರೆ.

ತಾಲ್ಲೂಕಿನ ಸಂತೆಗುಳಿ, ಬಡಾಳ, ಮೇದಿನಿ, ಅಂತ್ರವಳ್ಳಿ, ಮಾಸ್ತಿಹಳ್ಳ, ಯಾಣ, ನಾಗೂರು, ಬ್ರಹ್ಮೂರು ಮುಂತಾದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅಣಬೆಗಳು ಹೇರಳ ಪ್ರಮಾಣದಲ್ಲಿ ಬೆಳೆಯುತ್ತವೆ.

‘ನಾನು ಒಂದಿಷ್ಟು ಅಣಬೆಯನ್ನು ಪ್ರತಿ ವರ್ಷ ಶಿರಸಿಯಲ್ಲಿರುವ ನನ್ನ ಮಗಳ ಮನೆಗೂ ಕಳಿಸಿಕೊಡುತ್ತೇನೆ’ ಎಂದು ಸಂತೆಗುಳಿ ಗ್ರಾಮದ ಪರಮೇಶ ಮರಾಠಿ ತಿಳಿಸಿದರು.

‘ಈ ಸಲ ಅಣಬೆ ಹೇರಳ ಪ್ರಮಾಣದಲ್ಲಿ ಬೆಳೆದಿದ್ದು, ಅಂಕೋಲಾ ತಾಲ್ಲೂಕಿನ ಹಿಲ್ಲೂರಿನ ಬಂಧುವೊಬ್ಬರು ಅಣಬೆ ಕಳುಹಿಸಿಕೊಟ್ಟಿದ್ದಾರೆ’ ಎಂದು ಪಟ್ಟಣದ ಸಂದೀಪ ಶಾನಭಾಗ ತಿಳಿಸಿದರು.

‘ಅಣಬೆ ಕೊಳ್ಳುವವರಿಗೆ ದುಬಾರಿ ಎನಿಸಿದರೂ ಅದನ್ನು ಕಾಡಿನಲ್ಲಿ ಸಂಗ್ರಹಿಸುವ ಕೆಲಸ ಮಾತ್ರ ಕಷ್ಟಕರವಾದದ್ದು. ಚಿಕ್ಕ ಚಿಕ್ಕ ಅಣಬೆ ಮಣ್ಣಿನೊಳಗಿಂದ ಏಳುವ ಗೆದ್ದಲು ಹುತ್ತದ ಜಾಗವನ್ನು ಹಿಂದಿನ ದಿನವೇ ಗುರುತಿಸಿಟ್ಟುಕೊಳ್ಳಬೇಕು. ಮರುದಿನ ಅದು ಬಳಕೆ ಬರುವಷ್ಟು ಬೆಳೆದಿರುತ್ತದೆ. ಬೇರೆಯವರು ಅದನ್ನು ನೋಡುವ ಮೊದಲೇ ಬೆಳಗಿನ ಜಾವ ನಾಲ್ಕು ಗಂಟೆಗೆ ಕಾಡಿಗೆ ತೆರಳಿ ಸಂಗ್ರಹಿಸಬೇಕು. ಅಣಬೆ ಸಂಗ್ರಹಿಸುವಾಗ ಜಿಗಣೆಗಳು ಕಾಲಿಗೆ ಕಚ್ಚಿಕೊಂಡು ರಕ್ತ ಹೀರುತ್ತವೆ, ಹಾವು, ಚೇಳು ಕಡಿಯುವ ಅಪಾಯವಿರುತ್ತದೆ’ ಎಂದು ಅಣಬೆ ಸಂಗ್ರಹಗಾರ ತಾಲ್ಲೂಕಿನ ಬಡಾಳ ಗ್ರಾಮದ ಕೇಶವ ಮರಾಠಿ ವಿವರಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260811-20-780915628

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ