ಬಸ್‌ ಬಾಗಿಲಲ್ಲಿ ನಿಂತು ವಿದ್ಯಾರ್ಥಿಗಳ ಪ್ರಯಾಣ: ಸುರಕ್ಷತೆ ಬಗ್ಗೆ ಆತಂಕ

ಬಸ್‌ ಬಾಗಿಲಲ್ಲಿ ನಿಂತು ವಿದ್ಯಾರ್ಥಿಗಳ ಪ್ರಯಾಣ: ಸುರಕ್ಷತೆ ಬಗ್ಗೆ ಆತಂಕ

ಬಸ್‌ ಬಾಗಿಲಲ್ಲಿ ನಿಂತು ವಿದ್ಯಾರ್ಥಿಗಳ ಪ್ರಯಾಣ: ಸುರಕ್ಷತೆ ಬಗ್ಗೆ ಆತಂಕ

ಮಹಾಲಿಂಗಪುರ: ಸಮೀಪದ ಢವಳೇಶ್ವರ ಗ್ರಾಮದಲ್ಲಿ ಶಾಲಾ-ಕಾಲೇಜು ವೇಳೆಗೆ ಸಮರ್ಪಕ ಬಸ್ ಸೌಲಭ್ಯ ಸಿಗದೆ ನೂರಾರು ವಿದ್ಯಾರ್ಥಿಗಳು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.

ಪಿಯುಸಿ, ಪದವಿ ಸೇರಿದಂತೆ ವಿವಿಧ ಕೋರ್ಸ್‍ಗಳಿಗೆ ಮಹಾಲಿಂಗಪುರಕ್ಕೆ ವಿದ್ಯಾರ್ಥಿಗಳು ತೆರಳುತ್ತಿದ್ದು, ಗ್ರಾಮದ ಮಾರ್ಗವಾಗಿ ಬರುವ ಗೋಕಾಕ ಘಟಕಕ್ಕೆ ಸೇರಿದ ‘ಗೋಕಾಕ-ವಿಜಯಪುರ’ ಹಾಗೂ ಮುಧೋಳ ಘಟಕಕ್ಕೆ ಸೇರಿದ ‘ಮಹಾಲಿಂಗಪುರ-ಢವಳೇಶ್ವರ’ ಬಸ್‍ಗಳನ್ನೇ ಅವಲಂಬಿಸಿದ್ದಾರೆ. ಆದರೆ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬಸ್‍ಗಳು ಇಲ್ಲ.

ಬೆಳಿಗ್ಗೆ 7.15ಕ್ಕೆ ಬರುವ ‘ಗೋಕಾಕ-ವಿಜಯಪುರ’ ಹಾಗೂ ಬೆಳಿಗ್ಗೆ 8 ಗಂಟೆಗೆ ಬರುವ ‘ಮಹಾಲಿಂಗಪುರ-ಢವಳೇಶ್ವರ’ ಸ್ಥಳೀಯ ಬಸ್‍ನಲ್ಲಿ ಪ್ರಯಾಣಿಕರ ಜತೆಗೆ ವಿದ್ಯಾರ್ಥಿಗಳು ಸೇರಿ ಕಿಕ್ಕಿರಿದು ತುಂಬುತ್ತಿದ್ದು, ವಿದ್ಯಾರ್ಥಿಗಳಿಗೆ ಸುರಕ್ಷಿತವಾಗಿ ನಿಲ್ಲಲೂ ಅವಕಾಶ ಸಿಗುತ್ತಿಲ್ಲ. ಕಾಲೇಜಿಗೆ ತಡವಾಗುವ ಭೀತಿಯಿಂದ ಅನೇಕ ವಿದ್ಯಾರ್ಥಿಗಳು ಬಾಗಿಲಿನ ಬಳಿಯೇ ನಿಂತು ಪ್ರಯಾಣಿಸುತ್ತಿದ್ದಾರೆ.

ಬಸ್‍ಗಳು ಕಿಕ್ಕಿರಿದು ತುಂಬಿದ್ದರಿಂದ ವಿದ್ಯಾರ್ಥಿನಿಯರು ಪ್ರಯಾಣಿಸಲು ಹತ್ತು ಹಲವು ಮುಜುಗರ ಹಾಗೂ ಭದ್ರತೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬಸ್ ಸಿಗದೇ ಹಲವು ವಿದ್ಯಾರ್ಥಿಗಳು ಖಾಸಗಿ ವಾಹನಗಳಲ್ಲಿ ಹಣ ಕೊಟ್ಟು ತೆರಳುವಂತಾಗಿದೆ. ಇನ್ನು ಕೆಲ ವಿದ್ಯಾರ್ಥಿಗಳು ಗ್ರಾಮದಲ್ಲಿಯೇ ಉಳಿಯುತ್ತಿದ್ದಾರೆ. ಸಾರಿಗೆ ವ್ಯವಸ್ಥೆಯ ಈ ವೈಫಲ್ಯದಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತಿದೆ.

‘ವಿದ್ಯಾರ್ಥಿಗಳ ದಟ್ಟಣೆ ಹೆಚ್ಚಿರುವ ಮಾರ್ಗಗಳಲ್ಲಿ ಸಾರಿಗೆ ನಿಗಮ ವಿಶೇಷ ಅಥವಾ ಹೆಚ್ಚುವರಿ ಬಸ್‍ಗಳನ್ನು ಬಿಡಬೇಕು. ಈ ಕುರಿತು ಹಲವು ಬಾರಿ ಸಾರಿಗೆ ಇಲಾಖೆಗೆ ಹಾಗೂ ಶಾಸಕರಿಗೆ ಮನವಿ ಸಲ್ಲಿಸಿದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಳಗ್ಗೆ 8.30 ರಿಂದ 9 ಗಂಟೆಯ ನಡುವೆ ಢವಳೇಶ್ವರದಿಂದ ಮಹಾಲಿಂಗಪುರ ಮಾರ್ಗಕ್ಕೆ ಕನಿಷ್ಠ ಒಂದು ಹೆಚ್ಚುವರಿ ಬಸ್ ಓಡಿಸಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

‘ಮರಳಿ ಗ್ರಾಮಕ್ಕೆ ಹೇಗೋ ಬರುತ್ತೇವೆ. ಆದರೆ, ಶಾಲಾ-ಕಾಲೇಜುಗಳಿಗೆ ತೆರಳಲು ಸಮರ್ಪಕ ಬಸ್ ವ್ಯವಸ್ಥೆ ಇಲ್ಲದ ಪರಿಣಾಮ ತರಗತಿಗಳಿಗೆ ನಿಗದಿತ ವೇಳೆಗೆ ತಲುಪಲು ಆಗದೆ ತೀವ್ರ ತೊಂದರೆ ಅನುಭವಿಸುತ್ತಿದ್ದೇವೆ. ಖಾಸಗಿ ವಾಹನಗಳಿಗೆ ಹಣ ಕೊಟ್ಟು ಹೋಗಲು ಆಗುವುದಿಲ್ಲ. ಹೀಗಾಗಿ ನಿತ್ಯವೂ ಮೊದಲಿನ ಕ್ಲಾಸ್ ತಪ್ಪಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

‘ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬಸ್‍ಗಳನ್ನು ಬಿಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಬೆಳಿಗ್ಗೆ ಬರುವ ಗೋಕಾಕ ಘಟಕದ ಬಸ್‍ನ ಕಂಡಕ್ಟರ್ ಕೇವಲ ಹತ್ತು ವಿದ್ಯಾರ್ಥಿಗಳಿಗೆ ಮಾತ್ರ ಹತ್ತಲು ಅವಕಾಶ ನೀಡುತ್ತಿದ್ದಾರೆ. ಈ ಕುರಿತು ಪರಿಶೀಲಿಸಿ ವಿದ್ಯಾರ್ಥಿಗಳ ಸುಗಮ ಸಂಚಾರಕ್ಕೆ ಅಗತ್ಯವಿರುವ ಶಾಶ್ವತ ಪರಿಹಾರವನ್ನು ಒದಗಿಸಬೇಕು’ ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.

‘ಹೆಚ್ಚುವರಿ ಬಸ್ ಬಿಡಲು ಕ್ರಮ’

‘ಒಂದೆಡೆ ಗೋಕಾಕ ಘಟಕದ ಬಸ್ ಕಂಡಕ್ಟರ್ ಹತ್ತೇ ವಿದ್ಯಾರ್ಥಿಗಳಿಗೆ ಬಸ್ ಹತ್ತಲು ಅವಕಾಶ ನೀಡುತ್ತಿರುವ ಆರೋಪ ಕೇಳಿಬಂದಿದೆ. ಇನ್ನೊಂದೆಡೆ ಆ ಬಸ್‍ಗೆ ವಿದ್ಯಾರ್ಥಿಗಳು ಹತ್ತಲು ಹಿಂದೇಟು ಹಾಕುತ್ತಿದ್ದು, ನಂತರ ಬರುವ ಮುಧೋಳ ಘಟಕದ ಬಸ್ ಭರ್ತಿಯಾಗಿ ವಿದ್ಯಾರ್ಥಿಗಳು ಉಳಿಯುತ್ತಿದ್ದಾರೆ ಎಂಬ ಮಾಹಿತಿಯೂ ದೊರೆತಿದೆ. ಈ ಕುರಿತು ಪರಿಶೀಲಿಸಿ ಹೆಚ್ಚುವರಿ ಬಸ್ ಬಿಡಲು ಕ್ರಮ ಕೈಗೊಳ್ಳುತ್ತೇನೆ’ ಎಂದು ಮುಧೋಳ ವಾಯವ್ಯ ಸಾರಿಗೆ ನಿಗಮದ ಘಟಕ ವ್ಯವಸ್ಥಾಪಕಿ ವಿದ್ಯಾ ನಾಯಕ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260811-19-1399559633

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ