ಗುಂಡ್ಲುಪೇಟೆ: ಬಂಡೀಪುರ ಸುತ್ತಮುತ್ತ ರೆಸಾರ್ಟ್‌, ಹೋಂ ಸ್ಟೇ ಮೇಲೆ ಎಲ್ಲರ ಕಣ್ಣು!

ಗುಂಡ್ಲುಪೇಟೆ: ಬಂಡೀಪುರ ಸುತ್ತಮುತ್ತ ರೆಸಾರ್ಟ್‌, ಹೋಂ ಸ್ಟೇ ಮೇಲೆ ಎಲ್ಲರ ಕಣ್ಣು!

ಗುಂಡ್ಲುಪೇಟೆ: ಬಂಡೀಪುರ ಸುತ್ತಮುತ್ತ ರೆಸಾರ್ಟ್‌, ಹೋಂ ಸ್ಟೇ ಮೇಲೆ ಎಲ್ಲರ ಕಣ್ಣು!

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಪರಿಸರ ಸೂಕ್ಷ್ಮ ವಲಯದ ಸುತ್ತಮುತ್ತ ನಿರ್ಮಾಣವಾಗಿರುವ ರೆಸಾರ್ಟ್‌, ಹೋಂ ಸ್ಟೇ ಸೇರಿದಂತೆ ವಾಣಿಜ್ಯ ಚಟುವಟಿಕೆ ನಡೆಯುತ್ತಿರುವ ಕಟ್ಟಡಗಳ ತಪಾಸಣೆ ನಡೆಸಬೇಕು ಎಂಬ ಕೂಗು ಬಲವಾಗುತ್ತಿದೆ.

ಬಂಡೀಪುರ ಅಭಯಾರಣ್ಯದ ಅಂಚಿನ ಹೋಂ ಸ್ಟೇನಲ್ಲಿ ಅಪಾರ ಪ್ರಮಾಣದ ಜಿಂಕೆಯ ಕೊಂಬು, ಚರ್ಮ, ತಲೆಬುರುಡೆ ಪತ್ತೆಯಾದ ಬಳಿಕ ಪರಿಸರವಾದಿಗಳು, ಹೋರಾಟಗಾರರು,ಪ್ರಾಣಿಪ್ರಿಯರು ಹಾಗೂ ರೈತರು ಹೋಂ ಸ್ಟೇ, ರೆಸಾರ್ಟ್‌ಗಳ ವಾಣಿಜ್ಯ ಚಟುವಟಿಕೆಗಳ ವಿರುದ್ಧ ಮುಗಿ ಬಿದ್ದಿದ್ದಾರೆ.

ಅರಣ್ಯ ಇಲಾಖೆ ಕಾನೂನು ಉಲ್ಲಂಘಿಸಿ ಪರಿಸರ ಸೂಕ್ಷ್ಮ ವಲಯದೊಳಗೆ ಜಿಂಕೆ ಕೊಂಬು, ಚರ್ಮ, ತಲೆ ಬುರುಡೆ, ಬಂದೂಕು ಹಾಗೂ ಬೇಟೆಗೆ ಬಳಸುವ ಶಸ್ತ್ರಾಸ್ತ್ರ ಸಂಗ್ರಹಿಸಿಟ್ಟಿರುವುದು ಕಳ್ಳಬೇಟೆಯ ಅನುಮಾನ ಹುಟ್ಟುಹಾಕಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಗೋಪಾಲಸ್ವಾಮಿ ಬೆಟ್ಟ, ಕುಂದುಕೆರೆ, ಬಂಡೀಪುರ, ಓಂಕಾರ, ನುಗು, ಮದ್ದೂರು ವಲಯಗಳಲ್ಲಿ ನೂರಾರು ಹೋಂಸ್ಟೇಗಳು, ಖಾಸಗಿ ರೆಸಾರ್ಟ್‌ ತಲೆ ಎತ್ತಿವೆ. ಕೆಲವೇ ಕೆಲವು ಅಧಿಕೃತವಾಗಿದ್ದರೆ, ಹೆಚ್ಚಿನವು ಅನಧಿಕೃತವಾಗಿವೆ.

ಹುಲಿ ಸಂರಕ್ಷಿತ ಪ್ರದೇಶದ ಅಂಚಿನಲ್ಲಿರುವ ಗ್ರಾಮಗಳಲ್ಲಿ ಕೆಲವರು ಕೃಷಿ ಉದ್ದೇಶಕ್ಕಾಗಿ ಜಮೀನು ಖರೀದಿಸಿ ಅಥವಾ ಗುತ್ತಿಗೆ ಪಡೆದು ಅನುಮತಿ ಪಡೆಯದೆ ಹೋಂ ಸ್ಟೇಗಳನ್ನು ನಡೆಸುತ್ತಿದ್ದಾರೆ. ನಿಯಮಬಾಹಿರವಾಗಿ ಪ್ರವಾಸಿಗರನ್ನು ಸಫಾರಿಗೆ ಕರೆದೊಯ್ಯುವುದು, ನಿರ್ಬಂಧಿತ ಅರಣ್ಯದೊಳಗೆ ವಿಡಿಯೊ ಚಿತ್ರೀಕರಣ, ಫೋಟೊ ಕ್ಲಿಕ್ಕಿಸಿಕೊಳ್ಳುವ ಚಟುವಟಿಕೆ ಅವ್ಯಾಹತವಾಗಿ ನಡೆಯುತ್ತಿವೆ.

ವಾರಾಂತ್ಯ ದಿನಗಳಲ್ಲಿ ಹಾಗೂ ರಜಾ ದಿನಗಳಲ್ಲಿ ಅಧಿಕೃತ ಪರವಾನಗಿ ಪಡೆದ ರೆಸಾರ್ಟ್‌ಗಳಿಗಿಂತ ಅನಧಿಕೃತವಾಗಿ ನಡೆಯುತ್ತಿರುವ ರೆಸಾರ್ಟ್ ಮತ್ತು ಹೋಂಸ್ಟೇಗಳು ತುಂಬಿ ತಳುಕುತ್ತಿವೆ. ಪ್ರವಾಸೋದ್ಯಮ ಮತ್ತು ಸಫಾರಿ ಹೆಸರಿನಲ್ಲಿ ಕಾನೂನು ಉಲ್ಲಂಘನೆ ಮಾಡಲಾಗುತ್ತಿದೆ.

ಪ್ರವಾಸೋದ್ಯಮ ಹೆಸರಲ್ಲಿ ಮೋಜು, ಮಸ್ತಿ!

ಅನಧಿಕೃತ ಹೋಂ ಸ್ಟೇಗಳಲ್ಲಿ ವಾರಾಂತ್ಯದಲ್ಲಿ ಆಕರ್ಷಕ ಕಾರ್ಯಕ್ರಮ ಆಯೋಜಿಸಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ನಗರವಾಸಿಗಳನ್ನು ಸೆಳೆಯಲಾಗುತ್ತಿದೆ.

ಕಾಡಂಚಿನಲ್ಲಿರುವ ರೆಸಾರ್ಟ್ ಮತ್ತು ಹೋಂಸ್ಟೇಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮಾಹಿತಿ ಇದ್ದರೂ ಕ್ರಮ ಜರುಗಿಸುತ್ತಿಲ್ಲ.

ಅನಧಿಕೃತವಾಗಿದ್ದರೆ ಮುಚ್ಚುವ ಕೆಲಸವಾಗಬೇಕು. ಅನುಮತಿಗಿಂತ ಹೆಚ್ಚು ಕೊಠಡಿಗಳನ್ನು ನಿರ್ಮಿಸಿದರೆ ಪತ್ತೆ ಹಚ್ಚುವ ಕೆಲಸವನ್ನು ಸ್ಥಳೀಯ ಪಂಚಾಯಿತಿಗಳು, ತಾಲ್ಲೂಕು ಆಡಳಿತ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ನಡೆಸಬೇಕು ಎಂದು ರೈತ ಮುಖಂಡ ಶಿವಪುರ ಮಹದೇವಪ್ಪ ಒತ್ತಾಯ ಮಾಡಿದರು.

ಬಂಡೀಪುರ ಸುತ್ತಮುತ್ತಲಿನ ಎಲ್ಲ ಹೋಂ ಸ್ಟೇ ಹಾಗೂ ರೆಸಾರ್ಟ್‌ ತಪಾಸಣೆಗೆ ಜಿಲ್ಲಾಧಿಕಾರಿ ಶ್ರೀರೂಪಾ ಆದೇಶಿಸಬೇಕು. ನಿಯಮಬಾಹಿರ ಚಟುವಟಿಕೆ ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಪರಿಸರ ಪ್ರೇಮಿ ರಾಜಗೋಪಾಲ್ ಆಗ್ರಹಿಸಿದ್ದಾರೆ.

ಜಿಂಕೆ ಮಾಂಸ ಖರೀದಿ ಮಾಡುವವರು ಯಾರು? ಎಲ್ಲಿಗೆ ರಫ್ತಾಗುತ್ತದೆ ಎಂಬುದನ್ನು ಅಧಿಕಾರಿಗಳು ತನಿಖೆ ನಡೆಸಿದರೆ ಕಳ್ಳಬೇಟೆಗಾರರ ಜಾಲ ಬಯಲಿಗೆಳೆಯಬಹುದು ಎನ್ನುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260822-37-1078736172

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ