
ಬಾಗೇಪಲ್ಲಿ ತಾಲ್ಲೂಕು ಕಚೇರಿಗೆ ಜಿಲ್ಲಾಧಿಕಾರಿ ಜಿ.ಪ್ರಭು ಭೇಟಿ
ಬಾಗೇಪಲ್ಲಿ: ಪಟ್ಟಣದ ಪುರಸಭೆ ಮತ್ತು ತಾಲ್ಲೂಕು ಕಚೇರಿಗೆ ಗುರುವಾರ ಜಿಲ್ಲಾಧಿಕಾರಿ ಜಿ.ಪ್ರಭು ಭೇಟಿ ನೀಡಿ, ಅಧಿಕಾರಿಗಳು ಮತ್ತು ಸಿಬ್ಬಂದಿ ಜೊತೆ ಚರ್ಚಿಸಿದರು.
ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು. ವಿನಾಃಕಾರಣ ಸಾರ್ವಜನಿಕರನ್ನು ಕಚೇರಿಗಳಿಗೆ ತಿರುಗಾಡಿಸಬಾರದು. ಅರ್ಹ ದಾಖಲೆಗಳನ್ನು ತ್ವರಿತವಾಗಿ ವಿತರಿಸಬೇಕೆಂದು ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಸೂಚನೆ ನೀಡಿದರು.
ಚಿತ್ರಾವತಿ ಉಳಿಸಿ ಅಭಿಯಾನದ ಸಮಿತಿ ಅಧ್ಯಕ್ಷ ಎ.ಜಿ.ಸುಧಾಕರ್ ಮತ್ತು ಹೋರಾಟಗಾರರು ‘ಚಿತ್ರಾವತಿ ನದಿಗೆ ಮತ್ತು ಕೊರ್ಲಕುಂಟೆಗೆ ಪಟ್ಟಣದ ಕಲುಷಿತ ನೀರು ಹರಿಸಿ, ಕಲುಷಿತ ಆಗಿದೆ. ಇದರಿಂದ ಕೆರೆ, ಕುಂಟೆಗಳು ಕಸ ಮತ್ತು ತ್ಯಾಜ್ಯಗಳ ತಾಣಗಳಾಗಿವೆ. ಪಟ್ಟಣದಲ್ಲಿ ಒಳಚರಂಡಿ ಯೋಜನೆ 13 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಇದರಿಂದ ರಾಜಕಾಲುವೆ, ಕಾಲುವೆ, ಚರಂಡಿಗಳಲ್ಲಿನ ನೀರನ್ನು ಚಿತ್ರಾವತಿ ನದಿಗೆ ಹರಿಸಿರುವುದು ಖಂಡನೀಯ. ಹಾಗಾಗಿ ಕೂಡಲೇ ಚಿತ್ರಾವತಿ ನದಿಗೆ ಕಲುಷಿತ ನೀರು ಹರಿಸುವುದನ್ನು ತಪ್ಪಿಸಬೇಕು’ ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿ ಒಳಚರಂಡಿ ಮಂಡಲಿಯ ಅಧಿಕಾರಿಗಳಿಗೆ ಕರೆ ಮಾಡಿ ಚಿತ್ರಾವತಿ ನದಿಗೆ ಕಲುಷಿತ ನೀರು ಹರಿಸದಂತೆ ಕಾರ್ಯಯೋಜನೆ ಪಟ್ಟಿ ಸಿದ್ಧಪಡಿಸಿ ಮೂರು ದಿನಗಳ ಒಳಗೆ ಮಾಹಿತಿ ನೀಡಬೇಕೆಂದು ಸೂಚನೆ ನೀಡಿದರು.
ಬಾಗೇಪಲ್ಲಿ ತಾಲ್ಲೂಕನ್ನು ಬರಪೀಡಿತ ತಾಲ್ಲೂಕು ಎಂದು ಘೋಷಿಸಬೇಕು. 2026-27ನೇ ಸಾಲಿನ ಬೆಳೆ ನಷ್ಟಕ್ಕೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ವಿತರಿಸಬೇಕು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲ ಮನ್ನಾ ಮಾಡಬೇಕು. ವಿಬಿ ಜಿ ರಾಮ್–ಜಿ ಯೋಜನೆಯಡಿ ಪ್ರತಿ ಕುಟುಂಬಕ್ಕೆ 200 ದಿನ ಕೆಲಸ ಮತ್ತು ದಿನಕ್ಕೆ ₹600 ಕೂಲಿ ನೀಡಬೇಕು. ಮೋಡ ಬಿತ್ತನೆ ಪ್ರಾರಂಭಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಡಿ.ಟಿ.ಮುನಿಸ್ವಾಮಿ, ಸಿಪಿಎಂ ತಾಲ್ಲೂಕು ಕಾರ್ಯದರ್ಶಿ ಎಂ.ಎನ್.ರಘುರಾಮರೆಡ್ಡಿ, ಮುಖಂಡ ಅಶ್ವತ್ಥಪ್ಪ, ರಾಮಾಂಜಿ, ಇಮ್ರಾನ್ ಅವರು ಡಿ.ಸಿಗೆ ಮನವಿ ಪತ್ರ ಸಲ್ಲಿಸಿದರು. ಮನವಿಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ತಲುಪಿಸಲಾಗುವುದು. ಬರ ಪರಿಹಾರ ಕ್ರಮಗಳನ್ನು ಹಂತ ಹಂತದಲ್ಲಿ ಪರಿಶೀಲನೆ ಮಾಡಲಾಗುತ್ತಿದೆ. ಬೆಳೆ ನಷ್ಟದ ವರದಿಯಂತೆ ರೈತರಿಗೆ ಬರ ಪರಿಹಾರ ಘೋಷಿಸಲಾಗುವುದು ಎಂದರು.
ನಂತರ ತಾಲ್ಲೂಕು ಕಚೇರಿಯ ತಹಶೀಲ್ದಾರ್ ಕೊಠಡಿಯಲ್ಲಿ ಗ್ರಾಮಲೆಕ್ಕಿಗರು, ಕಂದಾಯ ಅಧಿಕಾರಿಗಳು, ಚುನಾವಣೆ, ಸರ್ವೆ, ಆಹಾರ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಜೊತೆ ಚರ್ಚಿಸಿದರು. ಸರತಿ ಸಾಲಿನಲ್ಲಿ ನಿಂತು ಸಾರ್ವಜನಿಕರು ಜಿಲ್ಲಾಧಿಕಾರಿ ಅಹವಾಲು ಸಲ್ಲಿಸಿದರು. ಪೋಡಿ, ದರಖಾಸ್ತು, ಅರಣ್ಯ ಭೂಮಿ ಹಕ್ಕು ಪತ್ರ ಸೇರಿದಂತೆ ವಿವಿಧ ಅರ್ಹ ದಾಖಲೆಗಳನ್ನು ವಿತರಿಸುವಂತೆ ಸಾರ್ವಜನಿಕರು ಅರ್ಜಿ ಸಲ್ಲಿಸಿದರು. ಸಂಬಂಧಪಟ್ಟ ಕಂದಾಯ, ಗ್ರಾಮಲೆಕ್ಕಿಗರ ಜೊತೆ ಚರ್ಚಿಸಿ ಕೂಡಲೇ ಸಾರ್ವಜನಿಕರಿಗೆ ಅರ್ಹ ದಾಖಲೆ ವಿತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಹಶೀಲ್ದಾರ್ ಮನೀಷಾ ಎನ್ ಪತ್ರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಾಗಮಣಿ, ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್, ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ, ತಾಲ್ಲೂಕು ಶಿರಸ್ತೆದಾರ್ ಮಂಜುನಾಥ್, ಚುನಾವಣಾ ಶಿರಸ್ತೆದಾರ್ ವೆಂಕಟರತ್ನಮ್ಮ ಹಾಜರಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260814-16-1566363285