ಹೆಬ್ಬಾಳ ಗ್ರಾಮದ ಹೊರವಲಯದಲ್ಲಿದೆ 18 ಎಕರೆ ತುಂಬ ಬಿಲ್ವಪತ್ರೆ ಮರಗಳ ವನ!

ಹೆಬ್ಬಾಳ ಗ್ರಾಮದ ಹೊರವಲಯದಲ್ಲಿದೆ 18 ಎಕರೆ ತುಂಬ ಬಿಲ್ವಪತ್ರೆ ಮರಗಳ ವನ!

ಹೆಬ್ಬಾಳ ಗ್ರಾಮದ ಹೊರವಲಯದಲ್ಲಿದೆ 18 ಎಕರೆ ತುಂಬ ಬಿಲ್ವಪತ್ರೆ ಮರಗಳ ವನ!

ಕಾಳಗಿ: ಪ್ರತಿವರ್ಷ ಶ್ರಾವಣಮಾಸದಲ್ಲಿ ಪೂಜೆ, ಪುನಸ್ಕಾರ, ಧಾರ್ಮಿಕ ಕಾರ್ಯಕಗಳು ಜೋರಾಗಿರುತ್ತವೆ. ಈ ಮಾಸದಲ್ಲಿ ಶಿವನ ಪೂಜೆಗೋಸ್ಕರ ಶಿವಭಕ್ತರು ಶಿವಪ್ರಿಯ ಬಿಲ್ವಪತ್ರೆ ಮೊರೆ ಹೊಗುತ್ತಾರೆ.

ಧಾರ್ಮಿಕ ಮಹತ್ವ ಪಡೆದುಕೊಂಡಿರುವ ‘ಬಿಲ್ವಪತ್ರೆ’ ಮರಗಳು ಸಿಗುವುದೇ ಅಪರೂಪವಾದರೂ ಕಾಳಗಿ ತಾಲ್ಲೂಕಿನ ಹೆಬ್ಬಾಳ ಗ್ರಾಮದ ಹೊರವಲಯದಲ್ಲಿ ಅವುಗಳ ವನವನ್ನೇ ಕಾಣಬಹುದಾಗಿದೆ.

ಶಹಾಪುರ-ಶಿವರಾಂಪುರ ರಾಜ್ಯಹೆದ್ದಾರಿ 149ರ ನಡುವಿನ ಕಾಳಗಿ-ಕಲಬುರಗಿ ಮಧ್ಯೆ 20ಕಿ.ಮೀ ಅಂತರದಲ್ಲಿ ಹೊಸ ಹೆಬ್ಬಾಳ ಗ್ರಾಮವಿದೆ. ಇಲ್ಲಿಂದ ಬೋಳೆವಾಡ ರಸ್ತೆ ಮಾರ್ಗದ 2.5ಕಿ.ಮೀ ದೂರದಲ್ಲಿ ಕಾಣಸಿಗುವ ನೂರಾರು ಬಿಲ್ವಪತ್ರೆ ಗಿಡಮರಗಳ ಹಸಿರು ಸಂಗಮವೇ ಇದಕ್ಕೆ ಸಾಕ್ಷಿಯಾಗಿದೆ.

ಈ ನೂರಾರು ಬಿಲ್ವಪತ್ರೆ ಗಿಡಗಳು ಯಾರೋ ನೆಟ್ಟು ಬೆಳೆಸಿದ್ದಲ್ಲ. ತಾನಾಗಿಯೇ ಕಾಡಿನ ಸ್ವರೂಪದಲ್ಲಿ ಬೆಳೆದುಕೊಂಡು ಅಚ್ಚರಿ ಮೂಡಿಸುವುದಲ್ಲದೇ ಬಿಲ್ವಪತ್ರೆ ಪ್ರಿಯರಿಗೆ ಆಕರ್ಷಣೆ ಕೂಡ ಆಗಿದೆ.

ಹೆಬ್ಬಾಳ ಗ್ರಾಮದ ಸರ್ವೆ ನಂ.245 ಮತ್ತು 255ರಲ್ಲಿ ಕಲಾವತಿ ಸಿದ್ಧನಾಕ ಮತ್ತು ಜಗನ್ನಾಥ ಅಲ್ಬಾ ಅವರಿಗೆ ಸೇರಿದ ಒಟ್ಟು 18 ಎಕರೆ ಜಮೀನು ಕೇವಲ ‘ಬಿಲ್ವಪತ್ರೆ’ ಗಿಡ ಮರಗಳಿಗೆ ನೆಲೆಯಾಗಿ ಗಮನ ಸೆಳೆಯುತ್ತಿದೆ.

ಈ 18 ಎಕರೆ ವಿಸ್ತಾರದ ಭೂಮಿಯಲ್ಲಿ ನೂರಾರು ವರ್ಷಗಳಿಂದ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಆಗಿನಿಂದಲೇ ಇಲ್ಲಿ ನೈಸರ್ಗಿಕವಾಗಿ ನೂರಾರು ಬಿಲ್ವಪತ್ರೆ ಗಿಡಗಳು ಬೆಳೆದು ‘ವನ’ವಾಗಿ ಕಂಗೊಳಿಸುತ್ತದೆ ಎನ್ನುತ್ತಾರೆ ಸ್ಥಳೀಯರು.

ಕಲ್ಯಾಣಕ್ರಾಂತಿ ವೇಳೆ ಈ ಜಾಗದಲ್ಲಿ ಜಂಗಮರು ತಂಗಿದ್ದರು. ಅದೇ ಸಂದರ್ಭದಲ್ಲಿ ಇಲ್ಲಿ ಚಿಕ್ಕದಾಗಿ ಬಸವೇಶ್ವರ ಗುಡಿ ತಲೆ ಎತ್ತಿದೆ. ಆ ಪರಿಣಾಮವಾಗಿಯೇ ಈ ಸ್ಥಳದಲ್ಲಿ ಬಿಲ್ವಪತ್ರೆ ಗಿಡಗಳು ಏಳಲಾರಂಭಿಸಿ 18ಎಕರೆ ಪ್ರದೇಶದಲ್ಲಿ ವ್ಯಾಪಿಸಿಕೊಂಡಿವೆ. ಅಂದಿನಿಂದ ಬಿಲ್ವಪತ್ರೆ ಹೊರತುಪಡಿಸಿ ಯಾವ ಬೀಜ ಬಿತ್ತಿದರೂ ಇಲ್ಲಿ ಬೆಳೆ ಬೆಳೆದಿಲ್ಲ ಎನ್ನುತ್ತಾರೆ ಊರಿನ ಹಿರಿಯರು.

ವಿಶೇಷವಾಗಿ ಶ್ರಾವಣ ಮಾಸದಲ್ಲಿ ದಿನವಿಡೀ ವಿವಿಧೆಡೆಯ ಅನೇಕರು ಸ್ವಂತ ವಾಹನದೊಂದಿಗೆ ಬಂದು ಬಿಲ್ವಪತ್ರೆ ದಳಗಳನ್ನು ಕಡಿದುಕೊಂಡು ಹೋಗುವುದು ಇಲ್ಲಿ ರೂಢಿಯಾಗಿದೆ.

ಜನರು ಬೇಕಾಬಿಟ್ಟಿಯಾಗಿ ಪತ್ರಿ ವನ ಹಾಳು ಮಾಡುತ್ತಿದ್ದಾರೆ ಎಂದರಿತ ಸ್ಥಳೀಯರು ಅದರ ಸಂರಕ್ಷಣೆಗಾಗಿ ‘ಶ್ರೀ ಪತ್ರಿವನ ಬಸವೇಶ್ವರ ದೇವಸ್ಥಾನ ಟ್ರಸ್ಟ್’ ಎಂಬ 11 ಜನರ ಕಮಿಟಿ ರಚಿಸಿದ್ದಾರೆ.

ಈಚೆಗೆ ಪತ್ರಿ ಗಿಡಗಳ ಬೆಳವಣಿಗೆ ಸ್ವಲ್ಪ ಕುಂಠಿತವಾಗುತ್ತಿದೆ. ಗಿಡಗಳಿಗೆ ನೀರು ಪೂರೈಸಲು ಬೋರ್‌ವೆಲ್ ಕೊರೆಯಿಸಲಾಗಿದೆ. ಜಾಗಕ್ಕೆ ತಾತ್ಕಾಲಿಕ ದಾರಿಯನ್ನೂ ಮಾಡಲಾಗಿದೆ. ವನದಲ್ಲಿನ ಬಸವೇಶ್ವರರ ಚಿಕ್ಕಗುಡಿಯನ್ನು ದೊಡ್ಡದಾಗಿ ನಿರ್ಮಿಸಲು ಕಲಬುರಗಿ ನಗರದ ಚನ್ನವೀರ ಸ್ವಾಮೀಜಿಯೊಬ್ಬರು ಸ್ವಂತ ಹಣದಿಂದ ಕಾಮಗಾರಿ ಕೈಗೊಂಡಿದ್ದಾರೆ.

ಒಟ್ಟಾರೆ, ಇಲ್ಲಿನ ಬಿಲ್ವಪತ್ರೆ ಮರಗಳ ವನ ಶ್ರಾವಣ ಮಾಸದಲ್ಲಿ ಬಹುಜನರ ಬೇಡಿಕೆಯ ತಾಣವಾಗಿದೆ.

ಆಂಗ್ಲ ಭಾಷೆಯಲ್ಲಿ ಬಿಲ್ವಪತ್ರೆ ಮರಕ್ಕೆ Baelfruit tree ಎನ್ನುತ್ತಾರೆ. ಇದು ಹೂ ಬಿಡುವ Rutaceae ಸಸ್ಯ ಕುಟುಂಬಕ್ಕೆ ಸೇರಿದ ಮರವಾಗಿದೆ. ಭಾರತದ ಬಹುತೇಕ ಭಾಗಗಳಲ್ಲಿ ಈ ಮರ ಬೆಳೆಯುತ್ತದೆ. ಅಂಡಮಾನ್‌ ದ್ವೀಪಗಳಲ್ಲೂ, ಹಿಮಾಲಯದ ರಾಜ್ಯಗಳಲ್ಲೂ ಚೆನ್ನಾಗಿ ಬೆಳೆಯುತ್ತದೆ. ಹಿಂದೂ ಧರ್ಮದಲ್ಲಿ ಶಿವನಿಗೆ ಪ್ರಿಯವಾದ ಸಸ್ಯ ಇದು ಎಂದು ನಂಬಲಾಗಿದೆ. ಔಷಧಿಯ ಗುಣವನ್ನೂ ಹೊಂದಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260814-31-1779247736

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ