ಎರೆಹುಳು ಗೊಬ್ಬರದಿಂದ ಯಶಸ್ಸು ಪಡೆದ ಗಿರಿಜನ: ಸ್ವಾವಲಂಬನೆಯತ್ತ ಬುಡಕಟ್ಟು ಕೃಷಿಕರು

ಎರೆಹುಳು ಗೊಬ್ಬರದಿಂದ ಯಶಸ್ಸು ಪಡೆದ ಗಿರಿಜನ: ಸ್ವಾವಲಂಬನೆಯತ್ತ ಬುಡಕಟ್ಟು ಕೃಷಿಕರು

ಎರೆಹುಳು ಗೊಬ್ಬರದಿಂದ ಯಶಸ್ಸು ಪಡೆದ ಗಿರಿಜನ: ಸ್ವಾವಲಂಬನೆಯತ್ತ ಬುಡಕಟ್ಟು ಕೃಷಿಕರು

ಗೋಣಿಕೊಪ್ಪಲು: ಶತಮಾನಗಳಿಂದ ಕಾಫಿ ತೋಟದ ಕಾರ್ಮಿಕರಾಗಿದ್ದ ಕೊಡಗಿನ ಬುಡಕಟ್ಟು ಜನರು ಇದೀಗ ಹಾಡಿಗಳಲ್ಲಿ ಎರೆಹುಳು ಗೊಬ್ಬರ ತಯಾರಿಸಿಕೊಳ್ಳುವ ಮೂಲಕ ತಾವೇ ಸ್ವತಃ ಕಾಫಿ ಬೆಳೆಗಾರರಾಗುವ ಕನಸನ್ನು ನನಸು ಮಾಡಿಕೊಳ್ಳುವತ್ತ ಹೊಸ ಹೆಜ್ಜೆ ಇರಿಸಿದ್ದಾರೆ.

ಇದಕ್ಕೆ ಒತ್ತಾಸೆಯಾಗಿ ನಿಂತಿರುವುದು ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಯೋಜನೆ ಅಡಿಯಲ್ಲಿ ಕಾರ್ಯಕ್ರಮ ರೂಪಿಸುತ್ತಿರುವ ಕಾಫಿ ಮಂಡಳಿ.

ಈ ಯೋಜನೆಯಂತೆ ಬುಡಕಟ್ಟು ಕಾಫಿ ಬೆಳೆಗಾರರ ಸಂಘದ ವತಿಯಿಂದ ಪೊನ್ನಂಪೇಟೆ ತಾಲ್ಲೂಕಿನ ನಾಲ್ಕೇರಿ, ಮಾಲ್ದಾರೆಯಲ್ಲಿ ಈಗಾಗಲೆ ಎರೆಹುಳು ಗೊಬ್ಬರ ತಯಾರಿಕೆ ಘಟಕ ಸ್ಥಾಪನೆಗೊಂಡಿದೆ. ತಲಾ ₹ 1 ಲಕ್ಷ ವೆಚ್ಚದಲ್ಲಿ ಕಾಫಿ ಮಂಡಳಿ ಈ ಘಟಕಗಳನ್ನು ನಿರ್ಮಿಸಿಕೊಟ್ಟಿದೆ.

ಒಂದು ಘಟಕದಲ್ಲಿ ಎರಡು ತೊಟ್ಟಿಗಳಿವೆ. ಒಂದು ತೊಟ್ಟಿಗೆ 2 ಕಿಲೋ ತೂಕದ ಎರೆಹುಳು ಬಿಟ್ಟು 3ರಿಂದ 4 ತಿಂಗಳ ಅವಧಿಯಲ್ಲಿ 400 ರಿಂದ 500 ಕಿಲೋ ತೂಕದ ಗೊಬ್ಬರ ತಯಾರಿಸಲು ಮುಂದಾಗಿದೆ. ಹೀಗೆ ತಯಾರಿಸಿದ ಗೊಬ್ಬರವನ್ನು ಬುಡಕಟ್ಟು ಕಾಫಿ ಬೆಳೆಗಾರರ ಸಂಘದ ಸದಸ್ಯರಿಗೆ ಕಿಲೋ ಒಂದಕ್ಕೆ ₹ 10 ರಂತೆ ಮಾರಾಟ ಮಾಡಲಾಗುತ್ತಿದೆ.

ತಿತಿಮತಿ ಹಾಗೂ ಚನ್ನಯ್ಯನಕೋಟೆಯಲ್ಲಿಯೂ ಮತ್ತೆರಡು ಘಟಕ ಸ್ಥಾಪನೆಗೊಳ್ಳಲಿವೆ ಎಂದು ಎರೆಹುಳು ಗೊಬ್ಬರ ತಯಾರಿಕೆ ಯೋಜನೆಯ ಪ್ರಧಾನ ಸಂಶೋಧಕ ಡಾ.ಟಿ.ಎನ್. ಗೋಪಿನಂದನ್ ಹೇಳಿದರು.

ಕಾಫಿ ತೋಟದ ಲೈನ್ ಮನೆಯಲ್ಲಿ ವಾಸವಿದ್ದು ಪರಾವಲಂಬಿಗಳಾಗಿದ್ದ ಗಿರಿಜನರು ಇದೀಗ ಅರಣ್ಯ ಹಕ್ಕು ಕಾಯ್ದೆಯಿಂದ ಭೂಮಿ ಭದ್ರತೆ ಪಡೆದು ಸ್ವಾವಲಂಬನೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ತಮಗೆ ಸಿಕ್ಕಿದ ಭೂಮಿಯಲ್ಲಿ ಒಂದಷ್ಟು ಕಾಫಿ ತೋಟ ಮಾಡಿಕೊಂಡು ಸರ್ಕಾರ ನೀಡುವ ಸವಲತ್ತುಗಳನ್ನು ಬಳಸಿಕೊಂಡು ಹೊಸ ಬದುಕಿನತ್ತ ಹೆಜ್ಜೆ ಇಡುತ್ತಿದ್ದಾರೆ.

ಇಕೊ ಪಲ್ಪರ್ ಘಟಕದ ಸ್ಥಾಪನೆಗೆ ಚಿಂತನೆ: ಕಾಫಿ ಮಂಡಳಿ ಎರೆಹುಳು ಘಟಕದ ಜತೆಯಲ್ಲಿಯೇ ಗಿರಿಜನರಿಗಾಗಿ ಅವರ ತೋಟದಲ್ಲಿಯೇ ಸೂಕ್ತ ಜಾಗ ಹುಡುಕಿ ₹ 7ಲಕ್ಷದಿಂದ ₹8 ಲಕ್ಷ ವೆಚ್ಚದಲ್ಲಿ ಪರಿಸರ ಸ್ನೇಹಿ ಇಕೊ ಪಲ್ಪರ್ ಅನ್ನು ಒದಗಿಸಿಕೊಡಲು ಕಾಫಿಮಂಡಳಿ ಮುಂದಾಗಿದೆ ಎಂದು ಗಿರಿಜನ ಮುಖಂಡ ಬ್ರಹ್ಮಗಿರಿ ಹಾಡಿಯ ಉದಯ ಹೇಳಿದರು.

ಕೊಟ್ಟಿಗೆ ಗೊಬ್ಬರಕ್ಕಿಂತ ಅತ್ಯುತ್ಕೃಷ್ಟ ಕಬ್ಬಿಣದ ತುಂಡು, ಪ್ಲಾಸ್ಟಿಕ್ ಮತ್ತು ಗಾಜಿನ ಚೂರುಗಳನ್ನು ಬಿಟ್ಟು ಒಣಗಿದ ಯಾವುದೇ ವಸ್ತುಗಳನ್ನು ಲೇಯರ್, ಲೇಯರ್ ಆಗಿ ತೊಟ್ಟಿಯ ಒಳಗೆ ಹಾಕಿ ಅದರ ಮೇಲೆ ಹದವಾಗಿ ಕೊಳೆಯುವಂತೆ ಸಗಣಿನೀರು ಚಿಮುಕಿಸಬೇಕು. ತೊಟ್ಟಿತುಂಬಿದ ಮೇಲೆ ಎರೆಹುಳು ಬಿಟ್ಟರೆ 90 ದಿನದಲ್ಲಿ ಅತ್ಯುತ್ಕೃಷ್ಟ ಮಟ್ಟದ ಗೊಬ್ಬರ ಸಿಗಲಿದೆ. ಕಾಫಿಗಿಡ ಒಂದಕ್ಕೆ 10 ಕಿಲೊ ಸಗಣಿ ಗೊಬ್ಬರ ಹಾಕುವುದರ ಬದಲು 4 ಕಿಲೊ ಎರೆಹುಳು ಗೊಬ್ಬರ ಹಾಕಿದರೆ ಸಾಕು. ಈ ಗೊಬ್ಬರದಲ್ಲಿ ವಾಸನೆ ಇರುವುದಿಲ್ಲ. ತೂಕವೂ ಕಡಿಮೆ.

ಎರೆಹುಳು ಗೊಬ್ಬರ ತಯಾರಿಕೆ ಅರಿವು

‘ನಾಲ್ಕೇರಿ ವಲಯ ವ್ಯಾಪ್ತಿಯ ಹಾಡಿ ಗಿರಿಜನರು ಎರೆಹುಳು ಗೊಬ್ಬರ ತಯಾರಿಕೆ ಬಗ್ಗೆ ಕಾಫಿಮಂಡಳಿಯ ಮೂಲಕ ಕೃಷಿವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಉತ್ತಮ ಅರಿವು ಪಡೆದುಕೊಂಡಿದ್ದಾರೆ. ಈಗ ತಾವೇ ಎರೆಹುಳು ಗೊಬ್ಬರ ತಯಾರಿಸಿ ತಮ್ಮ ತೋಟಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಇದೊಂದು ಉತ್ತಮ ಯೋಜನೆ’ ಎಂದು ಬ್ರಹ್ಮಗಿರಿ ಹಾಡಿ ಮುಖಂಡ ಉದಯ ತಿಳಿಸಿದರು.

12 ಅಡಿ ಉದ್ದ 4 ಅಡಿ ಆಳ ಹಾಗೂ 6 ಅಡಿ ಅಗಲದ ಎರಡು ಜೋಡಿ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಒಂದಕ್ಕೆ ಮಾತ್ರ ಮೊದಲಿಗೆ ಹುಳು ಬಿಟ್ಟು ಮತ್ತೊಂದಕ್ಕೆ ಒಂದು ತಿಂಗಳ ಬಳಿಕ ಹುಳು ಬಿಡಲಾಗುತ್ತಿದೆ. ಬಳಿಕ ಒಣಗಿದ ಕಸ ಮತ್ತು ಹಸಿರು ಎಲೆಗಳನ್ನು ತೊಟ್ಟಿಗೆ ಹಾಕಿ ಕೊಳೆಸಲಾತ್ತದೆ. ಈ ವೇಳೆಯಲ್ಲಿ ಹದವಾದ ತೇವಾಂಶ ಕಾಪಾಡಿಕೊಳ್ಳಬೇಕು. ತೊಟ್ಟಿಯಲ್ಲಿ ತೇವಾಂಶ ಹೆಚ್ಚಾದರೆ ನೀರನ್ನು ಹೀರಿಕೊಳ್ಳಲು ತೆಂಗಿನ ಜುಂಗು ಹಾಕಲಾಗುತ್ತದೆ. ಈ ಜುಂಗು ನೀರನ್ನು ಹೀರಿಕೊಂಡು ತೊಟ್ಟಿಯ ರಂದ್ರದ ಮೂಲಕ ಹೊರಹಾಕುತ್ತದೆ. ಬೇಕಾದಾಗ ಇದೇ ನೀರನ್ನು ಮತ್ತೆ ತೊಟ್ಟಿಗೆ ಮರುಬಳಕೆ ಮಾಡಿಕೊಳ್ಳಬಹುದು ಎಂದು ಬ್ರಹ್ಮಗಿರಿ ಹಾಡಿ ಗಿರಿಜನ ಮುಖಂಡ ಉದಯ ಮಾಹಿತಿ ನೀಡಿದರು.

ಎರೆಹುಳುಗಳು ಕಸಕಡ್ಡಿ ತಿಂದು ಕರಗಿಸಿದ ಗೊಬ್ಬರ ಪೂರ್ಣಪ್ರಮಾಣದಲ್ಲಿ ಹುಡಿಯಾಗಿರುತ್ತದೆ. ಇದನ್ನು ಜರಡಿ ಆಡಿಸಿ ಹುಳುವಿಗೆ ಯಾವುದೇ ಅಪಾಯವಾಗದಂತೆ ಎಚ್ಚರ ವಹಿಸಬೇಕಾಗುತ್ತದೆ. ಗೊಬ್ಬರದಿಂದ ಬೇರ್ಪಟ್ಟ ಈ ಹುಳುಗಳನ್ನು ಮತ್ತೆ ತೊಟ್ಟಿಗೆ ಬಿಟ್ಟು ಕಸಕಡ್ಡಿ ಹಾಕಿ ಕೊಳೆಸಿ ಹೊಸಗೊಬ್ಬರ ತಯಾರಿಸಲು ಮುಂದಾಗುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260814-51-86978979

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ