ನರಗುಂದ | ಎಲ್ಲೆಂದರಲ್ಲಿ ತರಕಾರಿ ವ್ಯಾಪಾರಕ್ಕೆ ಮುಕ್ತಿ

ನರಗುಂದ | ಎಲ್ಲೆಂದರಲ್ಲಿ ತರಕಾರಿ ವ್ಯಾಪಾರಕ್ಕೆ ಮುಕ್ತಿ

ನರಗುಂದ | ಎಲ್ಲೆಂದರಲ್ಲಿ ತರಕಾರಿ ವ್ಯಾಪಾರಕ್ಕೆ ಮುಕ್ತಿ

ನರಗುಂದ: ಪಟ್ಟಣದಲ್ಲಿ ಎರಡು ವರ್ಷಗಳಿಂದ ತರಕಾರಿ ಮಾರುಕಟ್ಟೆ ಇಲ್ಲದೆ ಪರದಾಡಿದ ನಾಗರಿಕರು ಕೊನೆಗೂ ನಿಟ್ಟುಸಿರು ಬಿಡುವಂತಾಗಿದೆ. ಶನಿವಾರ ನೂತನ ಮಾರುಕಟ್ಟೆ ಆರಂಭವಾಗಿದ್ದು, ಗ್ರಾಹಕರು ತರಕಾರಿ ಖರೀದಿಗೆ ಮುಗಿಬಿದ್ದರು.

ಎರಡು ವರ್ಷಗಳ ಹಿಂದೆ, ಹಳೆಯ ಮಾರುಕಟ್ಟೆಯನ್ನು ತೆರವು ಮಾಡಿ ಹೈಟೆಕ್ ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಇದರಿಂದಾಗಿ, ತರಕಾರಿ ವ್ಯಾಪಾರವು ಪಟ್ಟಣದ ಎಲ್ಲೆಂದರಲ್ಲಿ ನಡೆದಿದ್ದರಿಂದ ಹೆಚ್ಚಿನ ತೊಂದರೆ ಉಂಟಾಗಿತ್ತು. ಪಾದಚಾರಿಗಳ ಪಾಡು ಹೇಳತೀರದಾಗಿತ್ತು.

ಎಲ್ಲೆಂದರಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ ವ್ಯಾಪಾರಸ್ಥರನ್ನು ಪುರಸಭೆಯು ನೂತನ ಮಾರುಕಟ್ಟೆಗೆ ಸ್ಥಳಾಂತರಿಸಿದೆ. ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ವ್ಯಾಪಾರ ಆರಂಭಿಸಿದರು.

ವಿಳಂಬವಾಗಿದ್ದ ಕಾಮಗಾರಿ: ಗದಗ ಜಿಲ್ಲೆಯಲ್ಲಿಯೇ ಮಾದರಿಯಾದಂತಹ ಹೈಟೆಕ್ ತರಕಾರಿ ಮಾರುಕಟ್ಟೆ ನಿರ್ಮಿಸಬೇಕೆಂಬ ಸಂಕಲ್ಪದೊಂದಿಗೆ ಶಾಸಕ ಸಿ.ಸಿ. ಪಾಟೀಲ ಅವರು, ₹2 ಕೋಟಿಯಲ್ಲಿ ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಒಂದು ವರ್ಷದಲ್ಲಿ ಮುಗಿಯಬೇಕಾದ ಕಾಮಗಾರಿ ಅನುದಾನದ ಕೊರತೆ, ಗುತ್ತಿಗೆದಾರರ ಬದಲಾವಣೆಯಿಂದ ಎರಡು ವರ್ಷಕ್ಕೂ ಹೆಚ್ಚು ಸಮಯ ತೆಗೆದುಕೊಂಡಿತು.

110 ಕಟ್ಟೆಗಳು: ತರಕಾರಿ ಮಾರಾಟ ಮಾಡಲು ಒಟ್ಟು 110 ಕಟ್ಟೆಗಳನ್ನು ಎರಡು ರೀತಿಯ ಅಳತೆಯಲ್ಲಿ ನಿರ್ಮಿಸಲಾಗಿದೆ. 55 ವ್ಯಾಪಾರಸ್ಥರು ಠೇವಣಿ ಇಟ್ಟು, ಆರು ತಿಂಗಳದ ಮುಂಗಡ ಬಾಡಿಗೆ ಹಣ ಪಾವತಿಸಿದ್ದಾರೆ. ದೊಡ್ಡ ಕಟ್ಟೆಗೆ ₹8 ಸಾವಿರ ಠೇವಣಿ, ಪ್ರತಿದಿನ ₹30 ಬಾಡಿಗೆ, ಸಣ್ಣ ಕಟ್ಟೆಗೆ ₹6 ಸಾವಿರ ಠೇವಣಿ, ನಿತ್ಯ ₹20 ಬಾಡಿಗೆ ನಿಗದಿಪಡಿಸಲಾಗಿದೆ.

ಈ ಮೊತ್ತವನ್ನು ಕಡಿಮೆ ಮಾಡಬೇಕು. ಆಗ, ಹೆಚ್ಚಿನ ವ್ಯಾಪಾರಸ್ಥರು ಕಟ್ಟೆಯಲ್ಲಿ ವ್ಯಾಪಾರ ಮಾಡಲು ಮುಂದೆ ಬರುತ್ತಾರೆ ಎಂದು ತರಕಾರಿ ವ್ಯಾಪಾರಸ್ಥರು ಹೇಳುತ್ತಾರೆ.

22 ಮಳಿಗೆಗಳು: ತರಕಾರಿ ಇಡಲು 22 ಮಳಿಗೆಗಳನ್ನು ನಿರ್ಮಿಸಲಾಗಿದೆ. ಆದರೆ, ಅವುಗಳನ್ನು ಬಹಿರಂಗ ಹರಾಜು ಮಾಡಿದ್ದರಿಂದ ನಿಗದಿತ ಬಾಡಿಗೆಗಿಂತ ಹೆಚ್ಚು ಬಾಡಿಗೆಗೆ ನೀಡಲಾಗಿದೆ. ತರಕಾರಿ ವ್ಯಾಪಾರಸ್ಥರಿಗಷ್ಟೇ ಅಲ್ಲದೆ, ಹೊರಗಿನ ವ್ಯಾಪಾರಸ್ಥರಿಗೂ ಹರಾಜಾಗಿವೆ. ಇದು ತರಕಾರಿ ವರ್ತಕರಿಗೆ ಬೇಸರ ತರಿಸಿದೆ. ಇನ್ನೂ ಜಾಗ ಇರುವುದರಿಂದ ಹೆಚ್ಚಿನ ಮಳಿಗೆಗಳನ್ನು ನಿರ್ಮಿಸಬೇಕು ಎಂದು ವ್ಯಾಪಾರಸ್ಥರು ಆಗ್ರಹಿಸುತ್ತಾರೆ.

ಗ್ರಾಮೀಣ ವ್ಯಾಪಾರಸ್ಥರ ಪರದಾಟ

ಹೂಲಿಕಟ್ಟಿ, ಕುಳಗೇರಿ, ಮುನವಳ್ಳಿ ಸೇರಿದಂತೆ ವಿವಿಧ ಹಳ್ಳಿಗಳಿಂದ ತರಕಾರಿಗಳನ್ನು ಪಟ್ಟಣಕ್ಕೆ ತಂದು ಬಸ್‌ನಿಲ್ದಾಣದ ಅಬತಿ ದೂರದಲ್ಲಿ ಕೆಲವರು ವ್ಯಾಪಾರಸ್ಥರು ಮಾರಾಟ ಮಾಡುತ್ತಿದ್ದರು. ಆದರೆ, ಪುರಸಭೆ ಅಧಿಕಾರಿಗಳು ಇದಕ್ಕೆ ಅವಕಾಶ ನೀಡಲಿಲ್ಲ. ತರಕಾರಿ ಮಾರುಕಟ್ಟೆಯಲ್ಲಿಯೇ ವ್ಯಾಪಾರ ಮಾಡಬೇಕು ಎಂದು ಸೂಚಿಸಿದರು.

ಇದಕ್ಕೆ ಒಪ್ಪದಿದ್ದಾಗ ಪುರಸಭೆ ಸಿಬ್ಬಂದಿಯು, ವ್ಯಾಪಾರಸ್ಥರನ್ನು ತರಕಾರಿ ಸಮೇತ ತೆರವುಗೊಳಿಸಿದರು. ಇದರಿಂದ ಪರದಾಡುವಂತಾಯಿತು. ಸ್ಥಳೀಯ ಗ್ರಾಹಕರಿಗೂ ಇದರಿಂದ ತೊಂದರೆ ಉಂಟಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260811-23-402559631

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ