ಪ್ರವಾಸಿಗರನ್ನು ಕೈಬೀಸಿ ಕರೆಯುವ ಕಣಜನಹಳ್ಳಿ ಬತೇರಿ ಸ್ಮಾರಕಗಳು: ಒಮ್ಮೆಯಾದರೂ ನೋಡಿ

ಪ್ರವಾಸಿಗರನ್ನು ಕೈಬೀಸಿ ಕರೆಯುವ ಕಣಜನಹಳ್ಳಿ ಬತೇರಿ ಸ್ಮಾರಕಗಳು: ಒಮ್ಮೆಯಾದರೂ ನೋಡಿ

ಪ್ರವಾಸಿಗರನ್ನು ಕೈಬೀಸಿ ಕರೆಯುವ ಕಣಜನಹಳ್ಳಿ ಬತೇರಿ ಸ್ಮಾರಕಗಳು: ಒಮ್ಮೆಯಾದರೂ ನೋಡಿ

ಪೌರಾಣಿಕ ಮತ್ತು ಐತಿಹಾಸಿಕ ಪ್ರಸಿದ್ಧಿ ಪಡೆದಿರುವ ಕಣಜನಹಳ್ಳಿ ಸ್ಮಾರಕಗಳನ್ನು ಹೊಂದಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.

ಧರ್ಮಪುರದಿಂದ ದಕ್ಷಿಣಕ್ಕೆ ಸುವರ್ಣಾಮುಖಿ, ಪಶ್ಚಿಮಕ್ಕೆ ವೇದಾವತಿ ನದಿಗಳು ಸಂಗಮವಾಗಿ ಹರಿಯುತ್ತಿವೆ. ಪೂರ್ವಕ್ಕೆ ದೊಡ್ಡಹಳ್ಳ ಹರಿಯುತ್ತಿದ್ದು, ಮತ್ತಷ್ಟು ಅಂದವನ್ನು ಹೆಚ್ಚಿಸಿದೆ. ಭೌಗೋಳಿಕವಾಗಿ ಬಯಲುಸೀಮೆ ಬರಪೀಡಿತವಾಗಿದ್ದರೂ ಐತಿಹಾಸಿಕ ಕುರುಹುಗಳನ್ನು ತನ್ನ ಒಡಲಲ್ಲಿಟ್ಟುಕೊಂಡು ಶ್ರೀಮಂತವಾಗಿದೆ. ನಮ್ಮ ನಾಡಿನ ಸಾಂಸ್ಕೃತಿಕ ದ್ಯೋತಕವಾಗಿ ನಮ್ಮ ಪೂರ್ವಜರು ಸಾಮಾಜಿಕ ಶಾಂತಿ ನೆಮ್ಮದಿಯನ್ನು ಕಂಡುಕೊಳ್ಳಲು ನಿರ್ಮಿಸಿದಂತಹ ಹಲವಾರು ಕುರುಹುಗಳಾದ ಕಲೆ ಮತ್ತು ವಾಸ್ತುಶಿಲ್ಪ, ಕೋಟೆಗಳಿವೆ. ಜಾತ್ರೆ, ಉತ್ಸವ, ಶಿಲ್ಪಕಲೆ, ಶಾಸನ, ಚಿತ್ರಕಲೆ, ದೇವಾಲಯಗಳು, ಇಂದಿಗೂ ಇಲ್ಲಿ ಜೀವಂತ ಸಾಕ್ಷಿಯಾಗಿ ಉಳಿದಿವೆ.

ನೊಳಂಬ, ವಿಜಯನಗರ, ಹರತಿ ನಾಯಕರು, ನಿಡಗಲ್, ಚಿತ್ರದುರ್ಗ, ವೇಣುಕಲ್ಲುಗುಡ್ಡ ಪಾಳೆಗಾರರು ಮತ್ತಿತರ ಅರಸರ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಅನೇಕ ಸ್ಮಾರಕಗಳನ್ನು ಮತ್ತು ಕುರುಹುಗಳನ್ನು ತನ್ನ ಒಡಲಾಳದಲ್ಲಿಟ್ಟುಕೊಂಡಿರುವ ಈ ಗ್ರಾಮ ಇತಿಹಾಸಕ್ತರನ್ನು ತನ್ನತ್ತ ಸೆಳೆಯುತ್ತಿದೆ.

ಇದೊಂದು ಐತಿಹಾಸಿಕ ಸ್ಮಾರಕಗಳ ತವರು. ನಿಡಗಲ್ ಮತ್ತು ಹರ್ತಿಕೋಟೆ ಪಾಳೆಗಾರರ ಸಂಬಂಧದ ದ್ಯೋತಕವಾಗಿರುವ ಕಣಜದಹಳ್ಳಿ ಎಂದು ಐತಿಹಾಸಿಕವಾಗಿ ಪ್ರಸಿದ್ದಿ ಪಡೆದಿದ. ಇಲ್ಲಿ ಕಣಜ ಮತ್ತು ಅಗೇವು ಹೇರಳವಾಗಿ ಕಾಣಸಿಗುತ್ತವೆ. ಧನ, ಧಾನ್ಯ, ಸಂಪತ್ತು ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಭೂಮಿಯ ಒಳಗಡೆ ಕಣಜಗಳನ್ನು ನಿರ್ಮಾಣ ಮಾಡಿಕೊಂಡಿದ್ದರಿಂದ ಕಣಜನಹಳ್ಳಿ ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ.

ಇಲ್ಲಿ ಮೂರು ಊರ ದ್ವಾರ ಬಾಗಿಲುಗಳನ್ನು ಹೊಂದಿದ್ದು, ಗ್ರಾಮದ ಸುತ್ತಲೂ 10ಅಡಿ ಎತ್ತರದಲ್ಲಿ ಕೋಟೆಯನ್ನು ನಿರ್ಮಿಸಿಕೊಳ್ಳಲಾಗಿದೆ. ಪಕ್ಕದಲ್ಲಿ ದೊಡ್ಡಹಳ್ಳವಿದ್ದು, ಶತ್ರುಗಳು ಕೋಟೆ ಏರಿ ಬರದಂತೆ ತಡೆಯಲು 8ಅಡಿ ಆಳ ಕಂದಕ ನಿರ್ಮಾಣ ಮಾಡಲಾಗಿದೆ. ಕೋಟೆಯ ಒಳಗಡೆ ಮತ್ತು ಹೊರಗಡೆ ಆಂಜನೇಯ ದೇವಸ್ಥಾನಗಳಿರುವುದು ಕರ್ನಾಟಕದಲ್ಲಿ ಇತಿಹಾಸದಲ್ಲಿ ಇದೊಂದು ಅವಿಸ್ಮರಣೀಯ.

ಬತೇರಿ: ಕಾವಲು ಶಿಖರ ಎಂದು ಕರೆಯಲ್ಪಡುವ ಇಲ್ಲಿನ ಬತೇರಿ ಆಕರ್ಷಕವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿಯೇ ಎರಡನೇ ಅತಿ ದೊಡ್ಡ ಬತೇರಿ ಇದಾಗಿದೆ. ಗ್ರಾಮದ ಮಧ್ಯ ಭಾಗದಲ್ಲಿರುವ ಬತೇರಿ ಮೇಲೆ ಐದು ಅಡಿ ಪ್ರಾಕಾರದ ಗೋಡೆ ಮತ್ತು ಪೌಳಿ ಇದೆ. ಕೆಳ ಭಾಗದಲ್ಲಿ ನೀರಿನ ಸೇದುವ ಬಾವಿ ಇದೆ. ಬತೇರಿ ಮೇಲೆ ನಿಂತುಕೊಂಡರೆ ಸುಮಾರು ಮೂರು ಕಿ.ಮೀ.ದೂರದವರೆಗೆ ದೃಷ್ಟಿ ಹಾಯಿಸಬಹುದು. ಬೆಟ್ಟದ ಮೇಲೆ ನಿಂತು ದೂರದ ವಿಹಂಗಮ ನೋಟ ನೋಡುವುದೇ ಚೆಂದ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಕಣಜನಹಳ್ಳಿ ಪರಿಸರ ಪ್ರವಾಸಿಗರ ತಾಣವಾಗಿದೆ.

ಬತೇರಿ ಮೇಲೆ ಕಣಜವಿದ್ದು, ಇಲ್ಲಿ ಅಪಾರ ಪ್ರಮಾಣದಲ್ಲಿ ಮದ್ದು, ಗುಂಡು, ಶಸ್ತ್ರಾಸ್ತ್ರ, ಬಂಗಾರವನ್ನು ಸಂಗ್ರಹಿಸಿರಬಹುದು ಎಂಬುದು ಪ್ರತೀತಿ.ಅದಕ್ಕಾಗಿ ಉತ್ಖನನ ನಡೆಯಬೇಕಾಗಿದೆ ಎನ್ನುವುದು ಇತಿಹಾಸ ಸಂಶೋಧಕರ ಮತ್ತು ಗ್ರಾಮಸ್ಥರ ಅಭಿಪ್ರಾಯವಾಗಿದೆ. ಗ್ರಾಮದಲ್ಲಿ ಒಟ್ಟು ಏಳು ಬುರುಜುಗಳಿದ್ದವು ಎಂದು ಸ್ಥಳೀಯರು ತಿಳಿಸುತ್ತಾರೆ.

ನೊಳಂಬ ಶಾಸನ: ಗ್ರಾಮದ ದ್ವಾರ ಬಾಗಿಲಿನ ಬಲ ಭಾಗದಲ್ಲಿ ವೀರಗಲ್ಲು ಇದ್ದು, ಅದರ ಮೇಲ್ಭಾಗದಲ್ಲಿ ಹಳಗನ್ನಡದಲ್ಲಿ ಶಾಸನವಿದೆ. ಶಾಸನ ಪಾಠ ಈ ರೀತಿ ಇದೆ. ‘ಪರಿದಾವಿ ಸಂವತ್ಸರದ ಮಾರ್ಗಶಿರಾ ಬಹುಳ ಪಂಚಮಿಯಲ್ಲು ಶ್ರೀಮತ್ ಕಣಜನಹಳ್ಳಿ ಸ್ಥಳದ ಬೆಟ್ಟಗೊಂಡನ ತಮ್ಮ ಬೈರಗೊಂಡನು ಖಂಡೇನಹಳ್ಳಿ ಜಗಳದಲ್ಲಿ ಸಂದ ವಿವರ’ ಎಂದು ಕೆತ್ತಲ್ಪಟ್ಟಿದ್ದು, ಇದು ನೊಳಂಬರ ಇತಿಹಾಸ ತಿಳಿಯಲು ಪುಷ್ಟಿ ನೀಡುತ್ತದೆ.

ಹೊಸುರಾಂಭದೇವಿ ದೇವಸ್ಥಾನ: ಇಲ್ಲಿ ರಾಜಗಿರಿ ಗೋತ್ರದಕಂಚಿನ ಭಾಗದ ವಂಶಸ್ಥರ ಹೊಸೂರಾಂಭದೇವಿ, ಬೀರಲಿಂಗೇಶ್ವರ ಮತ್ತು ವೆಂಕಟರಮಣಸ್ವಾಮಿ ದೇವಾಲಯಗಳಿದ್ದು, ಸುಮಾರು ಆರು ಶತಮಾನಗಳಷ್ಟು ಪ್ರಾಚೀನ ಇತಿಹಾಸ ಹೊಂದಿರುವ ಹೊಸೂರಾಂಭದೇವಿ ಮೂಲ ಹೊಸಪೇಟೆ ಬಳಿಯ ತುಂಗಾಭದ್ರಾ ನದಿ ದಡದಲ್ಲಿರುವ (ಹುಲಿಗೆ ಹತ್ತಿರದ) ಹೊಸೂರು. 1565ರ ಯುದ್ಧದ ನಂತರ ಮುಸ್ಲಿಮರ ದಾಳಿಗೆ ತುತ್ತಾಗಿ ಇಲ್ಲಿಗೆ ಬಂದು ನೆಲೆ ನಿಂತಿದ್ದಾಳೆ ಎನ್ನುವ ಜಾನಪದೀಯ ಕಥೆಗಳಿವೆ. 16ನೇ ಶತಮಾನದಲ್ಲಿ ಕಣಜನಹಳ್ಳಿಯಲ್ಲಿ ನಿರ್ಮಾಣವಾದ ಹೊಸೂರಾಂಭದೇವಿ ದೇವಸ್ಥಾನ ರಾಜಗಿರಿ ಗೋತ್ರದ ಕಂಚಿನ ಭಾಗದ ವಂಶಸ್ಥರ ಆರಾಧ್ಯ ದೈವವಾಗಿದೆ.

ಈ ಜಾಗ ವಿಜಯ ನಗರ ಪತನ ನಂತರ ಮದಕರಿ ನಾಯಕನ ಆಳ್ವಿಕೆಗೆ ಒಳಪಟ್ಟಿತು. ಸಂಡೂರು ಘೋರ್ಪಡೆ ವಂಶದವರ ಆಡಳಿತದಲ್ಲಿ ದಿವಾನರಾಗಿದ್ದ ವೆಂಕಟರಾವ್ ಅವರ ಕಾಲದಲ್ಲಿ ಇಲ್ಲಿನ ಈಶ್ವರ ದೇವಸ್ಥಾನ ಜೀರ್ಣೋದ್ಧಾರ ಕೈಗೊಂಡಿದ್ದರ ಬಗ್ಗೆ ಜಾನಪದ ಗೀತೆಗಳಲ್ಲಿ ಕೇಳಸಿಗುತ್ತದೆ.ಭವ್ಯ ಐತಿಹಾಸಿಕ ಸ್ಮಾರಕಗಳನ್ನು ಮತ್ತು ಕುರುಹುಗಳನ್ನು ಹೊಂದಿರುವ ಕಣಜನಹಳ್ಳಿಯ ಸ್ಮಾರಕಗಳನ್ನು ಸಂಬಂಧಪಟ್ಟ ಇಲಾಖೆಯವರು ಸಂರಕ್ಷಿಸಿ ಪೋಷಿಸಬೇಕು ಎಂಬುದು ನಾಗರಿಕರ ಒತ್ತಾಸೆಯಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260831-44-862056014

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ