
ಹುಬ್ಬಳ್ಳಿ: ನಗರ ಸೌಂದರ್ಯಕ್ಕೆ ‘ಕಪ್ಪುಚುಕ್ಕೆ’ಯಾದ ಕೆಎಸ್‌ಡಬ್ಲ್ಯೂಸಿ
ಹುಬ್ಬಳ್ಳಿ: ನಗರದ ಹೊಸೂರು ಕ್ರಾಸ್ ಬಳಿ ಕಾಟನಪೇಟೆಯ ಮೂಲೆಯಲ್ಲಿ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ (ಕೆಎಸ್‌ಡಬ್ಲ್ಯೂಸಿ) ಅಕ್ಷರಶಃ ಪಾಳು ಬಿದ್ದಿದೆ. ವರ್ಷಗಳಿಂದ ಕಟ್ಟಡವು ಬಳಕೆಯಾಗದೇ, ನಿಷ್ಪ್ರಯೋಜಕವಾಗಿ ಉಳಿದುಕೊಂಡಿದೆ. ಯಾವುದೇ ಸಂದರ್ಭದಲ್ಲಿ ಅದು ಕುಸಿದು ಬೀಳುವ ಸ್ಥಿತಿಯಲ್ಲಿದೆ.
‘ನಗರದ ಪ್ರಮುಖ ಸ್ಥಳದಲ್ಲಿದ್ದರೂ ಈ ಕಟ್ಟಡವನ್ನು ಬಳಸುವ ಬಗ್ಗೆ ಪಾಲಿಕೆ ಅಥವಾ ಸಂಬಂಧಪಟ್ಟ ಇಲಾಖೆ, ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ನಗರದಲ್ಲಿ ಶುಚಿತ್ವ ಕಾಯ್ದುಕೊಳ್ಳುವ ಮತ್ತು ಸಂಪನ್ಮೂಲ ಸದ್ಬಳಕೆ ಮಾಡುವ ಬಗ್ಗೆ ಚರ್ಚೆಯಾಗುತ್ತದೆ. ಆದರೆ, ಈ ಕಟ್ಟಡ ಬಳಕೆಗೆ ಯಾರೂ ಆಸಕ್ತಿ ತೋರುತ್ತಿಲ್ಲ’ ಎಂಬ ಆರೋಪವಿದೆ.
‘ಹಾಳುಬಿದ್ದ ಕಟ್ಟಡಗಳು ಮತ್ತು ಅಲ್ಲಿ ಬೆಳೆದಿರುವ ಗಿಡಗಂಟಿಗಳು ದೂರದಿಂದಲೇ ಅಸಹ್ಯ ಭಾವ ಮೂಡಿಸುತ್ತವೆ. ಮಹಾನಗರವಾಗಿ ಬೆಳೆದ ಹುಬ್ಬಳ್ಳಿಯ ಹೃದಯಭಾಗದಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ಕಟ್ಟಡಗಳು ಇಷ್ಟೊಂದು ವಿಕಾರ ರೂಪ ತಾಳುವುದಕ್ಕೆ ಏಕೆ ಬಿಟ್ಟಿದ್ದಾರೆ? ಸರ್ಕಾರಿ ಇಲಾಖೆಗೆ ಈ ಕಟ್ಟಡಗಳ ನಿರ್ವಹಣೆ ಸಾಧ್ಯವಾಗದಿದ್ದರೆ ಅವುಗಳನ್ನು ಏಕೆ ತೆರವು ಮಾಡಿಲ್ಲ’ ಎಂದು ನಗರದ ನಿವಾಸಿ ವೀರಯ್ಯ ಮಠ ‘ಪ್ರಜಾವಾಣಿ’ಗೆ ತಿಳಿಸಿದರು.
ಅನುದಾನದ ಕೊರತೆ: ‘ಹೊಸೂರು ಕ್ರಾಸ್ ಬಳಿಯ ಗೋದಾಮುಗಳನ್ನು ಮೈಸೂರು ಸಂಸ್ಥಾನ ಆಡಳಿತವಿದ್ದ ಕಾಲದಲ್ಲಿ ನಿರ್ಮಿಸಲಾಗಿದೆ. ಹುಬ್ಬಳ್ಳಿಯ ಅಮರಗೋಳದಲ್ಲಿ ಹೊಸ ಗೋದಾಮುಗಳು ನಿರ್ಮಾಣವಾದ ಬಳಿಕ ಹಳೇ ಗೋದಾಮುಗಳ ಬಳಕೆ ತಗ್ಗಿದೆ. ಅಲ್ಲದೆ, ಅವುಗಳ ನಿರ್ವಹಣೆ ನಿಗಮಕ್ಕೆ ಹೊರೆಯಾಗಿದೆ. ಸರ್ಕಾರದಿಂದ ಸಮರ್ಪಕ ಅನುದಾನ ಸಿಗದ ಕಾರಣ, ಹಳೇ ಗೋದಾಮು ತೆರವು ಕಾರ್ಯ ಮತ್ತು ಅಲ್ಲಿ ಹೊಸ ಕಟ್ಟಡ ನಿರ್ಮಾಣ ಸಾಧ್ಯವಾಗಿಲ್ಲ’ ಎಂದು ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.
ತೆರವಾಗದ ತ್ಯಾಜ್ಯ, ಕಾಣದ ಶುಚಿತ್ವ
‘ಜನರ ಹಾಗೂ ವಾಹನ ಸಂಚಾರವಿಲ್ಲದ ಈ ಗೋದಾಮು ಜಾಗಗಳು ಅಕ್ರಮ ಚಟುವಟಿಕೆಗಳ ತಾಣಗಳಾಗಿ ಮಾರ್ಪಟ್ಟಿವೆ. ಕಟ್ಟಡಗಳ ಸುತ್ತಮುತ್ತ ಗಿಡಗಂಟಿಗಳು ಬೆಳೆದಿವೆ. ಹಲವು ವರ್ಷಗಳಿಂದ ನಿರ್ವಹಣೆ ಇಲ್ಲದ ಕಾರಣ ಆವರಣದಲ್ಲಿ ಯಥೇಚ್ಛ ಕಸದ ರಾಶಿ ಬಿದ್ದಿದೆ. ಸುತ್ತಮುತ್ತಲಿನ ವ್ಯಾಪಾರಿ ಮಳಿಗೆದಾರರು, ಸಾರ್ವಜನಿಕರು ತ್ಯಾಜ್ಯ ಸುರಿದು ಹೋಗುವುದು ಸಾಮಾನ್ಯವಾಗಿದೆ. ಮದ್ಯಪಾನ ಪ್ರಿಯರಿಗೂ ಇದು ಸ್ವತಂತ್ರ ತಾಣವಾಗಿದೆ. ಹಾಳು ಬಿದ್ದು ಕಟ್ಟಡಗಳಲ್ಲಿ ಏನು ನಡೆಯುತ್ತಿದೆ ಎನ್ನುವುದು ಹೊರಗಿನವರಿಗೆ ಗೊತ್ತಾಗುವುದೇ ಇಲ್ಲ‘ ಎಂದು ಹೊಸೂರು ಕ್ರಾಸ್‌ನ ಆಟೊ ಚಾಲಕ ಮಂಜುನಾಥ ಉಣಕಲ್ ತಿಳಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260831-24-1709688710