ಕಮಲಾಪುರಕ್ಕೆ ಸೇರಿದ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಮೊದಲ ಜಾತ್ರೆ

ಕಮಲಾಪುರಕ್ಕೆ ಸೇರಿದ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಮೊದಲ ಜಾತ್ರೆ

ಕಮಲಾಪುರಕ್ಕೆ ಸೇರಿದ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಮೊದಲ ಜಾತ್ರೆ

ಕಮಲಾಪುರ: ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ರಾಜ್ಯದಾದ್ಯಂತ ಅಪಾರ ಭಕ್ತರನ್ನು ಹೊಂದಿರುವ, ಸುಕ್ಷೇತ್ರ ರೇವಗ್ಗಿ (ರಟಕಲ್) ರೇವಣಸಿದ್ದೇಶ್ವರ ದೇವಸ್ಥಾನ ಕಮಲಾಪುರ ತಾಲ್ಲೂಕಿಗೆ ಒಳಪಟ್ಟಿದ್ದು, ಸಾರ್ವಜನಿಕರ ಸಂತಸ ಇಮ್ಮಡಿಗೊಳಿಸಿದೆ.

ಶ್ರಾವಣಮಾಸದ ನಡುವಿನ ಸೋಮವಾರ ಆ.31ರಂದು ನಡೆಯುತ್ತಿದ್ದು, ದೇವಸ್ಥಾನವು ತಾಲ್ಲೂಕಿನ ವ್ಯಾಪ್ತಿಗೆ ಒಳಪಟ್ಟ ಬಳಿಕ ನಡೆಯುವ ಪ್ರಥಮ ಜಾತ್ರೆಯಾಗಿದೆ.

ಈ ಹಿಂದೆ ಚಿತ್ತಾಪುರ ತಾಲ್ಲೂಕಿನಲ್ಲಿದ್ದ ಅರಣಕಲ್ ಗ್ರಾಮ ಪಂಚಾಯಿತಿಯನ್ನು ಹೊಸ ತಾಲ್ಲೂಕು ರಚನೆಯಾದಾಗ ಕಾಳಗಿಗೆ ಸೇರಿಸ ಲಾಗಿತ್ತು. ಅರಣಕಲ್, ಕಮಲಾಪುರಕ್ಕೆ ಕೇವಲ 14 ಕಿ.ಮೀ. ಅಂತರದಲ್ಲಿತ್ತು. ಕಾಳಗಿಗೆ ತೆರಳಬೇಕಾದರೆ ಸುಮಾರು 25 ಕಿ.ಮೀ ಕ್ರಮಿಸಬೇಕಿತ್ತು. ಕಾಳಗಿ ಸೇಡಂ ಕಂದಾಯ ಉಪ ವಿಭಾಗಕ್ಕೆ ಒಳಪಡುವುದರಿಂದ ಈ ಗ್ರಾಮಸ್ಥರು ಮತ್ತಷ್ಟು ತೊಂದರೆ ಅನುಭವಿಸುವಂತಾಗಿತ್ತು. ಇದನ್ನು ಮನಗಂಡ ಸಾರ್ವಜನಿಕರು ಅರಣಕಲ್ ಗ್ರಾ.ಪಂ. ಕಮಲಾಪುರ ತಾಲ್ಲೂಕಿಗೆ ಸೇರಿಸುವಂತೆ ಒತ್ತಾಯಿಸಿದ್ದರು. ಗ್ರಾಮ ಪಂಚಾಯಿತಿ ನಡವಳಿ ಹೊರಡಿಸಿ ಜಿಲ್ಲಾಧಿಕಾರಿ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಜನಪ್ರತಿನಿಧಿಯೊಬ್ಬರ ವಿರೋಧದಿಂದಾಗಿ ಗ್ರಾಮಸ್ಥರ ಬೇಡಿಕೆಗೆ ಸೂಕ್ತ ಸ್ಪಂದನೆ ಸಿಕ್ಕಿರಲಿಲ್ಲ.

ಬಳಿಕ ಸಾರ್ವಜನಿಕರು ಹೈಕೋರ್ಟ್ ಮೊರೆ ಹೋಗಿದ್ದರು. ಅರಣಕಲ್ ಗ್ರಾಮ ಪಂಚಾಯಿತಿಯನ್ನು ಸಮೀಪದ ಕಮಲಾಪುರ ತಾಲ್ಲೂಕಿಗೆ ಸೇರ್ಪಡೆ ಮಾಡುವಂತೆ ಹೈಕೋರ್ಟ್ ಸೂಚಿಸಿ ತೀರ್ಪು ನೀಡಿತು. ಆದರೆ ಸರ್ಕಾರ ಕೇವಲ ಅರಣಕಲ್ ಗ್ರಾಮ ಮಾತ್ರ ಕಮಲಾಪುರಕ್ಕೆ ಸೇರ್ಪಡೆ ಮಾಡಿ ಅಧಿಸೂಚನೆ ಹೊರಡಿಸಿತು.

ಇದನ್ನು ಪ್ರಶ್ನಿಸಿದ ಸರ್ವಜನಿಕರು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿಗೆ ತೀರ್ಪಿನ ಪೂರ್ಣ ಮಾಹಿತಿ ನೀಡಿ ಮನವರಿಕೆ ಮಾಡಿದರು. ಹೈಕೋರ್ಟ್ ತೀರ್ಪಿನ ಪ್ರತಿ ಸರ್ಕಾರಕ್ಕೆ ಸಲ್ಲಿಸಿ ತೀರ್ಪು ಯಥಾವತ್ತಾಗಿ ಅನುಷ್ಠಾ ನಗೊಳಿಸಬೇಕು ಎಂದು ಮರು ಮನವಿ ಸಲ್ಲಿಸಿದರು. ಇದನ್ನು ಪರಿಗಣಿಸಿದ ಸರ್ಕಾರ ಕೊನೆಗೂ ಸಮೀಪದ ನೂತನ ಕಮಲಾಪುರ ತಾಲ್ಲೂಕಿಗೆ ರೇವಗ್ಗಿ ರೇವಣಸಿದ್ದೇಶ್ವರ ದೇವಸ್ಥಾನ ಸೇರಿದಂತೆ ಅರಣಕಲ್ ಗ್ರಾಮ ಪಂಚಾಯಿತಿ ಸೇರ್ಪಡೆ ಮಾಡಿ ಆದೇಶ ಹೊರಡಿಸಿತು.

ದೇವಸ್ಥಾನದ ಗರ್ಭಗುಡಿಯಲ್ಲಿ ಆಕರ್ಷಿಸುತ್ತಿರುವ ಸರ್ವಾಲಂಕೃತ ರೇವಣಸಿದ್ದೇಶ್ವರರ ಮೂರ್ತಿ, ಎತ್ತರದ ಶಿವನ ಮೂರ್ತಿ, ಸುಮಾರು 50 ಅಡಿ ಎತ್ತರದ ರೇಣುಕಾಚಾರ್ಯರ ಮೂರ್ತಿ ಹಾಗೂ ರೈತರು ಹಾಗೂ ಹಸುಗಳ ಪ್ರತಿಕೃತಿಗಳಿರುವ ಹಳ್ಳಿ ಚಿತ್ರಣ ಗಮನ ಸೆಳೆಯುತ್ತವೆ

ರೇಣುಕಾಚಾರ್ಯರು ತೆಲಂಗಾಣ ರಾಜ್ಯದ ಕೊಲನಪಾಕದಲ್ಲಿ ಲಿಂಗದಲ್ಲಿ ಉದ್ಭವಿಸಿರುವರೆಂದು ಪ್ರತೀತಿ ಇದೆ. ಮುಂದೆ ಕಲಬುರಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ರೇವಗ್ಗಿಯ (ರಟಕಲ್) ಗ್ರಾಮಕ್ಕೆ ಆಗಮಿಸಿ ಅಲ್ಲಿರುವ ಬೆಟ್ಟದ ಮೇಲೆ ತಪಸ್ಸು ಮಾಡಿರುವ ಐತಿಹ್ಯ ಇದೆ. ಈ ಪುಣ್ಯಭೂಮಿಯಲ್ಲಿ ರೇಣುಕಾಚಾರ್ಯರ ಪಾದುಕೆಗಳನ್ನು 11ನೇ ಶತಮಾನದಲ್ಲಿ ಪ್ರತಿಷ್ಠಾಪಿಸಿ ಗರ್ಭಗುಡಿಯನ್ನು ನಿರ್ಮಿಸಲಾಗಿದೆ ಎಂಬುದು ಭಕ್ತರ ನಂಬಿಕೆ.

ಇದು ಪುರಾತನ ಕಾಲದ ದೇವಸ್ಥಾನವಾಗಿದ್ದು, ನಂಬಿ ಬಂದ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಇಲ್ಲಿಯದ್ದು. ಹೀಗಾಗಿಯೇ ಕರ್ನಾಟಕ ಅಲ್ಲದೇ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣದಿಂದ ಭಕ್ತರು ಬರುತ್ತಾರೆ. ಇಲ್ಲಿ ಪ್ರತಿ ವರ್ಷ 2 ಬಾರಿ ಜಾತ್ರೆ ನಡೆಯುತ್ತದೆ. ರೇಣುಕಾಚಾರ್ಯ ಜಯಂತಿಯಂದು ರಥೋತ್ಸವ ನಡೆದರೆ, ಶ್ರಾವಣ ಮಾಸದ ನಡುವಿನ ಸೋಮವಾರ ಪಲ್ಲಕ್ಕಿ ಉತ್ಸವ ನಡೆಯುತ್ತದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260831-34-309427028

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ