
ನೀರಿನಂತೆ ಹಣ ಖರ್ಚಾದರೂ ವಡಗೇರಾದಲ್ಲಿ ಇಲ್ಲ ನೀರು!
ವಡಗೇರಾ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಇರುವ ವಿತರಣಾ ಕಾಲುವೆ ಹಾಗೂ ಸಣ್ಣ ಕಾಲುವೆಗಳ ಸರಿಯಾದ ನಿರ್ವಹಣೆ ಇಲ್ಲದೆ ಇರುವುದರಿಂದ ಕಾಲುವೆಗಳಲ್ಲಿ ಕಸ ಕಡ್ಡಿ, ಹುಲ್ಲು, ಜಾಲಿಗಿಡಗಳು ಹಾಗೂ ಮಣ್ಣು ಕಾಲುವೆಗಳಲ್ಲಿ ಸಂಗ್ರಹವಾಗಿರುವದರಿಂದ ನೀರಾವರಿ ಕಾಲುವೆಗಳು ಇದ್ದೂ ಇಲ್ಲದಂತಾಗಿವೆ.
ತಾಲ್ಲೂಕಿನ ವ್ಯಾಪ್ತಿಯಲ್ಲಿ ವಿತರಣಾ ಕಾಲುವೆ ಸಂಖ್ಯೆ 18,19,20,20 ಎ,21, 22ಎ, 24 ಹಾಗೂ 25 ಈ ಕಾಲುವೆಗಳ ಮುಖಾಂತರ ರೈತರ ಜಮೀನುಗಳಿಗೆ ನೀರು ಹರಿಯಬೇಕು. ಆದರೆ ಕಾಲುವೆಗಳು ಅಲ್ಲಲ್ಲಿ ಬಿರುಕು ಬಿಟ್ಟಿವೆ. ಹಾಗೆಯೇ ಅವುಗಳಲ್ಲಿ ತ್ಯಾಜ್ಯ ತುಂಬಿರುವುದರಿಂದ ಕಾಲುವೆಗಳಿಗೆ ನೀರು ಬಿಟ್ಟಾಗ ಕಾಲುವೆಗಳಲ್ಲಿ ಹರಿಯಬೇಕಾದ ನೀರು ಜಮೀನುಗಳಿಗೆ ನುಗ್ಗಿ ರೈತರ ಜಮೀನುಗಳಲ್ಲಿ ಇರುವ ಬೆಳೆಗಳು ಹಾಳಾಗುತ್ತವೆ.
‘ಈ ಕಾಲುವೆಗಳ ಜಂಗಲ್ ಕಟಿಂಗ್, ಕಾಲುವೆಗಳ ಹೂಳೆತ್ತಲು ಹಾಗೂ ದುರಸ್ತಿಗಾಗಿ ಪ್ರತಿ ವರ್ಷ ಸರ್ಕಾರ ನೀರಿನಂತೆ ಹಣ ಖರ್ಚು ಮಾಡುತ್ತದೆ. ಆದರೆ ಕಾಲುವೆಗಳು ಮಾತ್ರ ಹೇಗಿವೆಯೋ ಹಾಗೆಯೆ ಇರುತ್ತವೆ’ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಈ ಹಿಂದೆ ಈ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಹಾಗೂ ಕಾಲುವೆಗಳ ಮುಖಾಂತರ ಸಕಾಲದಲ್ಲಿ ರೈತರ ಜಮೀನುಗಳಿಗೆ ನೀರು ಸಿಗಲಿ ಎಂಬ ಉದ್ದೇಶದಿಂದ ಕೃಷ್ಣಾ ಮೇಲ್ದಂಡೆ ಯೋಜನೆಯ ಕಚೇರಿ ಆರಂಭಿಸಲಾಗಿತ್ತು. (ಈಗೀರುವ ತಹಶೀಲ್ ಕಚೇರಿ) ಅದರ ಜತೆಗೆ ಸಿಬ್ಬಂದಿಗೂ ವಸತಿ ವ್ಯವಸ್ಥೆಗಾಗಿ ಮನೆಗಳನ್ನು ಕಟ್ಟಿಕೊಡಲಾಗಿತ್ತು. ಕೆಲವು ವರ್ಷಗಳ ನಂತರ ಇಲ್ಲಿದ್ದ ಕಚೇರಿ ಏಕಾಏಕಿ ದೋರನಹಳ್ಳಿ ಗ್ರಾಮಕ್ಕೆ ಸ್ಥಳಾಂತರಿಸಲಾಯಿತು. ಅಲ್ಲಿಂದ ಈಗ ಭೀಮರಾಯನ ಗುಡಿಗೆ ಸ್ಥಳಾಂತರಗೊಂಡಿವೆ. ಈ ಭಾಗದ ನೀರಾವರಿ ಸಮಸ್ಯೆಗಳಿಗಾಗಿ ರೈತರು ಭೀಮರಾಯನಗುಡಿಯಲ್ಲಿ ಇರುವ ಕಚೇರಿಗೆ ಹೋಗಬೇಕು. ಇದರಿಂದ ಸಮಯದ ಜತೆಗೆ ಹಣವೂ ಪೋಲಾಗುತ್ತಿದೆ.
ತಾಲ್ಲೂಕಿನ ವ್ಯಾಪ್ತಿಯ ಒಟ್ಟು ಕ್ಷೇತ್ರ 62,071, ಸಾಗುವಳಿ ಕ್ಷೇತ್ರ 52,160, ನೀರಾವರಿ 26808, ಒಣ ಬೇಸಾಯ 25,352, ವಡಗೇರಾ ಉಪವಿಭಾಗದ ಕೃಷ್ಣಾ ಮೇಲ್ದಂಡೆ ಯೋಜನೆಯ ಅಡಿಯಲ್ಲಿ ಸುಮಾರು 33 ಗ್ರಾಮಗಳು ಒಳಪಡುತ್ತವೆ. ಶೇಕಡಾ 50 ಜಮೀನು ಮಾತ್ರ ನೀರಾವರಿ ಸೌಲಭ್ಯ ಹೊಂದಿದೆ. ಆದರೆ ಈ ಜಮೀನುಗಳಿಗೆ ಸರಿಯಾಗಿ ಕಾಲುವೆಗಳ ಮುಖಾಂತರ ನೀರು ಹರಿಯುವುದಿಲ್ಲ.
ಹತ್ತಿ, ತೊಗರಿ, ಶೇಂಗಾ, ಸೂರ್ಯಕಾಂತಿ ಹಾಗೂ ಭತ್ತವನ್ನು ಹೆಚ್ಚಾಗಿ ಈ ಭಾಗದಲ್ಲಿ ರೈತರು ಬೆಳೆಯುತ್ತಾರೆ. ಸಕಾಲದಲ್ಲಿ ಕಾಲುವೆಗಳ ಮುಖಾಂತರ ಈ ಬೆಳೆಗಳಿಗೆ ನೀರಿನ ಸೌಲಭ್ಯ ಸಿಕ್ಕರೆ ಕೋಟ್ಯಂತರ ರೂಪಾಯಿಗಳ ಬೆಳೆಗಳನ್ನು ರೈತರು ಬೆಳೆಯಬಹುದು.
ತಾಲ್ಲೂಕಿನ ವ್ಯಾಪ್ತಿಯಲ್ಲಿ ಎರಡು ಜೀವ ನದಿಗಳಾದ ಕೃಷ್ಣಾ ಹಾಗೂ ಭೀಮಾ ನದಿಗಳು ಹರಿಯುತಿದ್ದರೂ ತಾಲ್ಲೂಕಿನ ಕೊನೆ ಅಂಚಿನ ಗ್ರಾಮಗಳ ರೈತರ ಜಮೀನಿಗೆ ನೀರಾವರಿ ಕಾಲುವೆಗಳ ಮುಖಾಂತರ ನೀರು ಹರಿಯದೆ ಇರುವುದರಿಂದ ರೈತರ ಜಮೀನಿನಲ್ಲಿ ಇರುವ ಬೆಳೆಗಳು ಒಣಗುವುದರ ಜತೆಗೆ ಆರ್ಥಿಕ ನಷ್ಟ ಅನುಭವಿಸುತಿದ್ದಾರೆ.
ಭೀಮಾ ಪ್ಲಾಂಟ್ ವರ್ಕ್ ವಡಗೇರಾದಿಂದ ಸಂಗಮದವರೆಗೆ ಸುಮಾರು 23 ಕಿ.ಮಿವರೆಗೆ ಎಕ್ಸ್ಪ್ರೆಸ್ ಲೈನ್ (ಕೃಷ್ಣಾ ನದಿಯಿಂದ ನೇರವಾಗಿ ಕಾಲುವೆಗಳಿಗೆ ನೀರು ಸರಬರಾಜು ಆಗುವ ಯೋಜನೆ) ನೀರಾವರಿ ಕಾಲುವೆಗಳ ನಿರ್ಮಾಣ ಕಾಮಗಾರಿ ಕಳೆದ ಮೂರು ವರ್ಷಗಳಿಂದ ಚಾಲ್ತಿಯಲ್ಲಿ ಇದೆ. ಆದರೆ ಕಾಮಗಾರಿಯು ಆಮೆಗತಿಯಲ್ಲಿ ನಡೆಯುತ್ತಿರುವುದರಿಂದ ಕೊನೆ ಅಂಚಿನ ಗ್ರಾಮಗಳಾದ, ಸಂಗಮ, ಮಾಚನೂರ, ಬೆನಕನಹಳ್ಳಿ, ಕದರಾಪೂರ, ಅಗ್ನಿಹಾಳ, ಕೊಂಗಂಡಿ, ಶಿವಪೂರ, ಹಾಗೂ ಇನ್ನೂ ಅನೇಕ ಗ್ರಾಮಗಳಿಗೆ ಕಾಲುವೆಗಳ ನೀರು ಗಗನ ಕುಸುಮವಾಗಿದೆ.
ಮಳೆಗಾಲದಲ್ಲಿ ಕೆಬಿಜೆಎನ್ಎಲ್ ಅಧಿಕಾರಿಗಳು ಕಾಲುವೆಗಳ ಹೂಳೆತ್ತಲು ಟೆಂಡರ್ ಕರೆದಿರುವದನ್ನು ನೋಡಿದರೆ ಕುರುಡನು ಬೀಸಿದ್ದನ್ನು ನಾಯಿ ತಿಂತು. ಹೀಗಾಗಿದೆ ಈ ಭಾಗದ ನೀರಾವರಿ ಕಾಲುವೆಗಳ ಸ್ಥಿತಿ.
ಕಾಲುವೆ ದುಸ್ಥಿತಿ ಬಗ್ಗೆ ಯಾರು ಏನಂತಾರೆ?
ತಾಲ್ಲೂಕಿನ ವ್ಯಾಪ್ತಿಯ ವಿತರಣಾ ಕಾಲುವೆ 22 (ಎ) ರಲ್ಲಿ ಕಳೆದ ಬೇಸಿಗೆ ಸಮಯದಲ್ಲಿ ಹೂಳೆತ್ತುವ ಕಾಮಗಾರಿ ಅಪೂರ್ಣಗೊಂಡಿದೆ. ಕಾಮಗಾರಿ ಪೂರ್ಣ ಮಾಡಿ ಎಂದು ಕೆಬಿಜೆಎನ್ಎಲ್ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಜೆಸಿಬಿಯಿಂದ ಕೇವಲ ಜಂಗಲ್ ಕಟಿಂಗ್ ಮಾಡಿದ್ದಾರೆ. ಕಾಲುವೆಗಳಲ್ಲಿ ಕೆಸರು ಮಣ್ಣು ಹಾಗೆಯೇ ಇದೆ. ಗುತ್ತಿಗೆದಾರರ ಜತೆ ಇಲಾಖೆ ಅಧಿಕಾರಿಗಳು ಶಾಮೀಲಾಗಿ ಸರ್ಕಾರದ ಹಣ ಲೂಟಿ ಮಾಡುತ್ರಿದ್ದಾರೆ.
–ಅರವಿಂದ ವರಕೇರಿ, ಕಾರ್ಯದರ್ಶಿ ನೀರು ಬಳಕೆದಾರರ ಸಂಘ
ಈಗಾಗಲೆ ವಿತರಣಾ ಕಾಲುವೆಗಳಲ್ಲಿ ತುಂಬಿರುವ ತ್ಯಾಜ್ಯವನ್ನು ತೆಗೆಯಲು ಹಾಗೂ ಹೂಳೆತ್ತಲು ಟೆಂಡರ್ ಕರೆಯಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಇನ್ನೂ ಕೆಲವೇ ದಿನಗಳಲ್ಲಿ ಕಾಲುವೆಗಳನ್ನು ಸ್ವಚ್ಛಗೊಳಿಸುವ ಕೆಲಸ ಆರಂಭವಾಗುತ್ತದೆ
–ಗೌಸೋದ್ದೀನ್, ವಿಭಾಗೀಯ ಅಧಿಕಾರಿ ಕೆಬಿಜೆಎನ್ಎಲ್
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260828-30-432622404