ನೆರವಿಗೆ ಕೈಚಾಚುವ ಸ್ಥಿತಿಯಲ್ಲಿ ರೈತರು.. ಮೈಸೂರಿನ 8 ತಾಲ್ಲೂಕುಗಳು ಬರಪೀಡಿತ

ನೆರವಿಗೆ ಕೈಚಾಚುವ ಸ್ಥಿತಿಯಲ್ಲಿ ರೈತರು.. ಮೈಸೂರಿನ 8 ತಾಲ್ಲೂಕುಗಳು ಬರಪೀಡಿತ

ನೆರವಿಗೆ ಕೈಚಾಚುವ ಸ್ಥಿತಿಯಲ್ಲಿ ರೈತರು.. ಮೈಸೂರಿನ 8 ತಾಲ್ಲೂಕುಗಳು ಬರಪೀಡಿತ

ಮೈಸೂರು: ಜಿಲ್ಲೆಯ 8 ತಾಲ್ಲೂಕುಗಳನ್ನು ‘ತೀವ್ರ ಬರಪೀಡಿತ’ ಎಂದು ಸರ್ಕಾರ ಗುರುವಾರ ಘೋಷಿಸಿದ್ದು, ಆ ಪ್ರದೇಶಗಳಲ್ಲಿನ ಕೃಷಿ ಚಟುವಟಿಕೆಗಳ ಮೇಲೆ ಗರ ಬಡಿದಿರುವುದಕ್ಕೆ ಕನ್ನಡಿ ಹಿಡಿದಿದೆ. ನೆರವಿಗೆ ಕೈಚಾಚುವ ಸ್ಥಿತಿ ರೈತರಿಗೆ ಎದುರಾಗಿದೆ.

ಪಿರಿಯಾಪಟ್ಟಣ ಹೊರತುಪಡಿಸಿ ಉಳಿದೆಲ್ಲ ತಾಲ್ಲೂಕುಗಳೂ ಬರದಿಂದ ತತ್ತರಿಸಿವೆ. ರೈತರು ಸರ್ಕಾರದ ಸಹಾಯಕ್ಕಾಗಿ ಕೈಚಾಚಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾನಿ ಅಥವಾ ನಷ್ಟವನ್ನು ಅಂದಾಜಿಸಲು ಇಲಾಖೆಗಳಿಂದ ಬೆಳೆಗಳ ‘ಜಂಟಿ ಸಮೀಕ್ಷೆ’ ಇನ್ನಷ್ಟೇ ನಡೆಯಬೇಕಿದೆ.

ಸರ್ಕಾರದಿಂದ ಕೈಗೊಳ್ಳಲಾಗುವ ಬರ ಪರಿಹಾರ ಕಾರ್ಯಕ್ರಮಗಳಿಗಾಗಿ ಜನರು ಮತ್ತು ಕೃಷಿಕರು ಎದುರು ನೋಡುತ್ತಿದ್ದಾರೆ. ಬರ ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಕೆಲಸ ಇನ್ನೂ ಆರಂಭವಾಗಿಲ್ಲ.

ಸರ್ಕಾರದ ತೀರ್ಮಾನ: ಮುಂಗಾರು ಮಳೆ ಕೊರತೆಯ ತೀವ್ರತೆ ಆಧರಿಸಿ ಬರಪೀಡಿತ ಪ್ರದೇಶಗಳ ಪಟ್ಟಿಯನ್ನು ಸರ್ಕಾರದಿಂದ ತಯಾರಿಸಲಾಗಿದೆ. ಎಚ್‌.ಡಿ. ಕೋಟೆ, ಮೈಸೂರು, ನಂಜನಗೂಡು, ಕೆ.ಆರ್.ನಗರ, ತಿ.ನರಸೀಪುರ, ಸರಗೂರು ಹಾಗೂ ಸಾಲಿಗ್ರಾಮ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳು ಎಂಬ ನಿರ್ಧಾರಕ್ಕೆ ಬರಲಾಗಿದೆ. ಆದರೆ, ಪಿರಿಯಾಪಟ್ಟಣ ತಾಲ್ಲೂಕು ಸಾಧಾರಣ ಬರಪೀಡಿತ ಪಟ್ಟಿಯಲ್ಲೂ ಇಲ್ಲ.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಬರಪೀಡಿತವಾದ ಆಯ್ದ ಪ್ರದೇಶಗಳಿಗೆ ಈಚೆಗೆ ಖುದ್ದು ಭೇಟಿ ನೀಡಿ ರೈತರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದರು. ನಿಖರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದರು.

ಹೇಳಿಕೊಳ್ಳುವಂತೆ ಆಗಿಲ್ಲ: ಈ ಬಾರಿ ಮುಂಗಾರು ಮಳೆಯ ಮೇಲಿನ ಆಶಾಭಾವ ಹುಸಿಯಾದ್ದರಿಂದ ಕೃಷಿ ವಲಯ ಕಂಗಾಲಾಗಿದೆ. ಸೆಪ್ಟೆಂಬರ್‌ ಕೊನೆಯ ಹಂತಕ್ಕೆ ಬಂದಿದ್ದರೂ ‘ಹೇಳಿಕೊಳ್ಳುವಂತಹ ಮಳೆ’ ಜಿಲ್ಲೆಯಲ್ಲಿ ಆಗಿಲ್ಲ. ಸೆಪ್ಟೆಂಬರ್‌ ಕೊನೆಗೆ ಮುಂಗಾರು ಅವಧಿ ಮುಗಿಯಲಿದೆ. ಪ್ರಸ್ತುತ, ಮಳೆಯಾಶ್ರಿತ ಬೇಸಾಯಕ್ಕೆ ಚೈತನ್ಯ ಬಂದಿಲ್ಲ. ಕೊಳವೆಬಾವಿಗಳ ನೀರು ಹೊಂದಿರುವವರು ಅಲ್ಪಸ್ವಲ್ಪ ಬೆಳೆ ಉಳಿಸಿಕೊಳ್ಳುವುದಷ್ಟೆ ಸಾಧ್ಯವಾಗಿದೆ.

ಬರಗಾಲವು ಕೃಷಿ ಸೇರಿದಂತೆ ಹಲವು ಕ್ಷೇತ್ರಗಳ ಮೇಲೆ ವ್ಯಾಪಕವಾದ ವ್ಯತಿರಿಕ್ತ ಪರಿಣಾಮ ಬೀರಿದೆ. ಕೆರೆ– ಕಟ್ಟೆಗಳು ಜೀವಕಳೆ ಪಡೆದುಕೊಂಡಿಲ್ಲ. ಇದರಿಂದ ಜನ– ಜಾನುವಾರಿಗೆ ಕುಡಿಯುವ ನೀರಿನ ಕೊರತೆ ಎದುರಾಗುವ ಆತಂಕವೂ ಇದೆ. ಅಲ್ಲಲ್ಲಿ ಹಾಕಿರುವ ಬೆಳೆಗಳು ಕೈಗೆ ಬರುವ ಸಾಧ್ಯತೆಯೂ ಕ್ಷೀಣಿಸಿದೆ. ಮಳೆಗಾಲದಲ್ಲೇ ಬೇಸಿಗೆಯ ವಾತಾವರಣ ನಿರ್ಮಾಣ ಆಗುತ್ತಿರುವುದು ಗಿಡಗಳು ಒಣಗುವಂತೆ ಮಾಡುತ್ತಿದೆ. ಕೆಲವು ದಿನಗಳಿಂದೀಚೆಗೆ, ಅಲ್ಲಲ್ಲಿ ಆಗಾಗ ಬಿದ್ದ ಸಾಧಾರಣ ಮಳೆಯಾಗಿರುವುದು ಬೆಳೆಗಳಿಗೆ ‘ಗುಟುಕು’ ನೀಡಿದಂತಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಂಟಿ ಕೃಷಿ ನಿರ್ದೇಶಕ ಕೆ.ಎಚ್. ರವಿ, ‘ಮಳೆ ವಿವರ, ಬಿತ್ತನೆ ಪ್ರಮಾಣ ಮೊದಲಾದವುಗಳನ್ನು ಆಧರಿಸಿ ಬರಪೀಡಿತ ತಾಲ್ಲೂಕುಗಳ ಪಟ್ಟಿಯನ್ನು ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ. ಮಳೆಯಾಶ್ರಿತ ಪ್ರದೇಶಗಳಲ್ಲಿ ಬಿತ್ತನೆ ಕುಂಠಿತಗೊಂಡಿವೆ. ರಾಗಿ ಬಿತ್ತನೆ ಸಮರ್ಪಕವಾಗಿ ನಡೆಯಲೇ ಇಲ್ಲ. ಬಹುತೇಕ ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಆಗಿದೆ. ಇನ್ನು ಮುಂದೆ ಜಂಟಿ ಸಮೀಕ್ಷೆ ನಡೆಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಜೋಳ, ರಾಗಿ, ಮುಸುಕಿನಜೋಳ, ತೊಗರಿ, ಹುರುಳಿ, ಉದ್ದು, ಹೆಸರು, ಅಲಸಂದೆ, ಅವರೆ, ಹತ್ತಿ ಮೊದಲಾದ ಬೆಳೆಗಳ ಬಿತ್ತನೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಕೃಷಿ ಇಲಾಖೆಯ ಮಾಹಿತಿ ಪ್ರಕಾರ, ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಬಿತ್ತನೆ ಗುರಿಯನ್ನು ತಲುಪುವುದೂ ಸಾಧ್ಯವಾಗಿಲ್ಲ.

ದ್ವಿದಳ ಧಾನ್ಯಗಳು ಬೆಳವಣಿಗೆ ಇದ್ದರೂ ಕಾಳು ಕಟ್ಟುವ ಹಂತದಲ್ಲಿ ಮಳೆ ಕೈ ಕೊಟ್ಟ ಕಾರಣ ಇಳುವರಿಗೆ ಹೊಡೆತ ನೀಡಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260828-38-53700358

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ