
ಮಧ್ಯಪ್ರದೇಶದಲ್ಲಿ ಅಪಘಾತ: ರಾಜ್ಯದ ಇನ್‌ಸ್ಪೆಕ್ಟರ್ ಬಿ.ಕೆ.ರವಿ ಸಾವು
ಬೆಂಗಳೂರು: ಸೈಬರ್ ವಂಚನೆ ಪ್ರಕರಣವೊಂದರಲ್ಲಿ ಆರೋಪಿಗಳನ್ನು ಬಂಧಿಸಲು ಮಧ್ಯಪ್ರದೇಶಕ್ಕೆ ತೆರಳಿದ್ದ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಕೆ.ರವಿ (51) ಬಸ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಅವರೊಂದಿಗೆ ತೆರಳಿದ್ದ ಕಾನ್‌ಸ್ಟೆಬಲ್‌ಗಳಾದ ವಿಶ್ವನಾಥ್, ರಮೇಶ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಧ್ಯಪ್ರದೇಶದ ರಾಜ್‌ಗಢದಲ್ಲಿ ಶುಕ್ರವಾರ ಬೆಳಗಿನ ಜಾವ ಸ್ಲೀಪರ್ ಬಸ್ ನಿಯಂತ್ರಣ ತಪ್ಪಿ ಬಿಯೋರಾದ ಭೋಪಾಲ್ ಬೈಪಾಸ್ ಸೇತುವೆಯ ಗೋಡೆಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಿಟಕಿಯ ಗಾಜು ಒಡೆದಿದೆ. ಕಿಟಕಿ ಪಕ್ಕ ಮಲಗಿದ್ದ ರವಿ ಸೇರಿದಂತೆ ಹಲವರು ಕೆಳಗೆ ಬಿದ್ದಿದ್ದಾರೆ. ಘಟನೆಯಲ್ಲಿ ಒಟ್ಟು ನಾಲ್ವರು ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ.
‘ಸೇತುವೆಯ ಗೋಡೆಗೆ ಬಸ್ ಡಿಕ್ಕಿಯಾದ ಸ್ಥಳದಲ್ಲಿ ತಿರುವು ಇದೆ. ಪ್ರಾಥಮಿಕ ತನಿಖೆ ಪ್ರಕಾರ, ಅತಿವೇಗವಾಗಿ ಬಸ್ ಚಾಲನೆ ಮಾಡಿರುವುದು ಅಪಘಾತಕ್ಕೆ ಕಾರಣವಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ರವಿ ಅವರು 2007ರಲ್ಲಿ ಇಲಾಖೆಗೆ ಸೇರಿದ್ದರು. ಈ ಹಿಂದೆ ಅಶೋಕನಗರ, ಇಂದಿರಾನಗರ, ಕೋರಮಂಗಲ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.