
ಪಿರಿಯಾಪಟ್ಟಣ ಬರಪೀಡಿತ ಪಟ್ಟಿಯಿಂದ ಹೊರಕ್ಕೆ: ಮರು ಸಮೀಕ್ಷೆಗೆ ಒತ್ತಾಯ
ಬೆಟ್ಟದಪುರ: ಮಳೆ ಕೊರತೆಯಿಂದ ಪಿರಿಯಾಪಟ್ಟಣ ತಾಲ್ಲೂಕಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಡುವೆ ರಾಜ್ಯ ಸರ್ಕಾರ ಪ್ರಕಟಿಸಿರುವ ಬರಪೀಡಿತ ತಾಲ್ಲೂಕುಗಳ ಪಟ್ಟಿಯಿಂದ ಪಿರಿಯಾಪಟ್ಟಣ ಹೊರಗುಳಿದಿರುವುದಕ್ಕೆ ಹೋಬಳಿಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಪಿರಿಯಾಪಟ್ಟಣ ಹೊರತುಪಡಿಸಿ ಉಳಿದ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವುದು ಸ್ಥಳೀಯ ರೈತರಲ್ಲಿ ಅಚ್ಚರಿ ಮೂಡಿಸಿದೆ. ಈ ಭಾಗದ ಹಲವು ಗ್ರಾಮಗಳಲ್ಲಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗದ ಪರಿಣಾಮ ತಂಬಾಕು, ರಾಗಿ, ಮುಸುಕಿನ ಜೋಳ ಸೇರಿದಂತೆ ವಿವಿಧ ಬೆಳೆಗಳ ಮೇಲೆ ಪರಿಣಾಮ ಬೀರಿದೆ. ಮರು ಸಮೀಕ್ಷೆ ನಡೆಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ
ತಾಲ್ಲೂಕಿನಲ್ಲಿ ಹೆಚ್ಚಿನ ಪ್ರದೇಶ ಮಳೆಯಾಶ್ರಿತವಾಗಿದ್ದು, ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊಳವೆಬಾವಿ ಹೊಂದಿರುವ ರೈತರು ಬೆಳೆ ಉಳಿಸಿಕೊಳ್ಳಲು ಹೆಚ್ಚುವರಿ ವೆಚ್ಚ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಮಳೆ ಪ್ರಮಾಣ, ಇಳುವರಿ ಕುಸಿತ ಕುರಿತು ಮತ್ತೊಮ್ಮೆ ಸಮಗ್ರ ಸಮೀಕ್ಷೆ ನಡೆಸಬೇಕು. ಬರಪೀಡಿತ ತಾಲ್ಲೂಕು ಘೋಷಣೆಗೆ ಬಳಸಿರುವ ಮಾನದಂಡಗಳ ಆಧಾರದಲ್ಲಿ ತಾಲ್ಲೂಕಿನ ವಾಸ್ತವ ಸ್ಥಿತಿಯನ್ನು ಮರುಪರಿಶೀಲಿಸಿ ರೈತರಿಗೆ ಸೂಕ್ತ ಪರಿಹಾರ ಹಾಗೂ ನೆರವು ಕಲ್ಪಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಸಂಬಂಧಪಟ್ಟ ಇಲಾಖೆಯವರು ನಡೆಸಿರುವ ಸಮೀಕ್ಷೆ ಸಮರ್ಪಕವಾಗಿಲ್ಲ. ಅಧಿಕಾರಿಗಳು ಸ್ಥಳಕ್ಕೆ ಬಂದು ಹೊಲಗಳನ್ನು ಪರಿಶೀಲಿಸಿದ್ದರೆ ರೈತರ ಸಮಸ್ಯೆ ಅರ್ಥವಾಗುತ್ತಿತ್ತು, ಕಚೇರಿಯಲ್ಲಿ ಕುಳಿತು ಮಾಹಿತಿ ಪಡೆದುಕೊಂಡಿರುವುದರಿಂದಲೇ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗೋರಳ್ಳಿಯ ಮುಖಂಡ ಅಶ್ವತ್ ಕುಮಾರ್ ಆರೋಪಿಸಿದರು.
ಮಳೆಯಾಶ್ರಿತವಾಗಿ ತಂಬಾಕು ಬೆಳೆಯುವ ರೈತರ ಸ್ಥಿತಿ ಕೇಳುವವರಿಲ್ಲ. ಒಂದರಿಂದ ಎರಡು ಬ್ಯಾರನ್‌ಗಳಲ್ಲಿಯೇ ತಂಬಾಕು ಬೆಳೆ ಮುಗಿದು ಹೋಗುತ್ತಿದೆ. ರಾಗಿ ಮಳೆ ಇಲ್ಲದೆ ಒಣಗುತ್ತಿದೆ. ಇಷ್ಟೆಲ್ಲ ಸಮಸ್ಯೆ ಇದ್ದರೂ ಬರಪೀಡಿತ ಅಲ್ಲ ಎಂದರೆ ಹೇಗೆ ಸಾಧ್ಯ ಎಂದು ಹಂಡಿತವಳ್ಳಿಯ ರೈತ ರವಿನಾಯಕ್ ಪ್ರಶ್ನಿಸುತ್ತಾರೆ.
ಬೆಳೆ ಸಂಪೂರ್ಣವಾಗಿ ನಾಶವಾದ ಬಳಿಕವೇ ಬರಪೀಡಿತ ತಾಲ್ಲೂಕುಎಂದು ಘೋಷಣೆಮಾಡಬೇಕೆ? ತಂಬಾಕು ದರ ಕುಸಿತ, ಜೋಳಕ್ಕೆ ರೋಗಬಾಧೆ, ಕೆರೆ–ಕಟ್ಟೆಗಳಲ್ಲಿ ನೀರಿಲ್ಲದಿರುವುದು ಸೇರಿದಂತೆ ರೈತರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಲು ಇದಕ್ಕಿಂತ ಹೆಚ್ಚಿನ ಉದಾಹರಣೆ ಬೇಕೆ? ರೈತರ ಸಂಕಷ್ಟವನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದುರೈತ ಸಂಘದ ಹಸಿರು ಸೇನೆ ರಾಜ್ಯ ಯುವ ಘಟಕದ ಅಧ್ಯಕ್ಷ ಕೆ.ಎಸ್. ಸ್ವಾಮಿಗೌಡ ದೂರಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260829-38-240956672