ಬರದಲ್ಲೂ ಕಂಗೊಳಿಸುತ್ತಿರುವ ಬೆಳೆ: ಚಿಂತಾಮಣಿ ರೈತನ ಯಶೋಗಾಥೆ

ಬರದಲ್ಲೂ ಕಂಗೊಳಿಸುತ್ತಿರುವ ಬೆಳೆ: ಚಿಂತಾಮಣಿ ರೈತನ ಯಶೋಗಾಥೆ

ಬರದಲ್ಲೂ ಕಂಗೊಳಿಸುತ್ತಿರುವ ಬೆಳೆ: ಚಿಂತಾಮಣಿ ರೈತನ ಯಶೋಗಾಥೆ

ಚಿಂತಾಮಣಿ: ಎಲ್ಲಾ ಕ್ಷೇತ್ರಗಳಲ್ಲೂ ಆಧುನಿಕ ತಂತ್ರಜ್ಞಾನ ಅಭಿವೃದ್ಧಿಯಾದಂತೆ ಕೃಷಿ ಕ್ಷೇತ್ರದಲ್ಲೂ ಆಗಿದೆ. ಅದನ್ನು ಕೃಷಿಯಲ್ಲಿ ಅಳವಡಿಸಿಕೊಂಡು ಬೆಳೆ ಬೆಳೆದರೆ ಕೃಷಿ ಲಾಭದಾಯಕವಾಗುತ್ತದೆ ಹಾಗೂ ಬರ ಮೆಟ್ಟಿ ನಿಲ್ಲಬಹುದು ಎಂಬುದು ತಾಲ್ಲೂಕಿನ ನಾಯನಹಳ್ಳಿ ರೈತ ಎನ್.ಎಂ.ಗಿರೀಶ್ ಅವರ ಮಾತಾಗಿದೆ.

ನೀರಿನ ಲಭ್ಯತೆಗೆ ಅನುಗುಣವಾಗಿ ಬೆಳೆ ಬೆಳೆಯುವುದು, ಬೆಳೆ ಬದಲಾಯಿಸುವುದು ಹಾಗೂ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡರೆ ನೀರಿನ ಕೊರತೆ ಎದುರಿಸಿ ಉತ್ತಮ ಬೆಳೆ ಬೆಳೆಯಬಹುದು.

ಜಿಲ್ಲೆಯಲ್ಲಿ ಚಿಂತಾಮಣಿ ತಾಲ್ಲೂಕಿನಲ್ಲಿ ಮಳೆ ಕೊರತೆ ತೀವ್ರವಾಗಿದೆ. ಬಹುತೇಕ ಪ್ರದೇಶದಲ್ಲಿ ಬಿತ್ತನೆಯೇ ಆಗಿಲ್ಲ. ಕೆಲವೆಡೆ ಬಿತ್ತನೆಯಾಗಿದ್ದರೂ ಬೀಜ ಮೊಳಕೆಯೊಡೆದಿಲ್ಲ. ಇನ್ನೂ ಕೆಲವೆಡೆ ಮೊಳಕೆಯಾಗಿದ್ದರೂ ಮಳೆ ಇಲ್ಲದೆ ಒಣಗುತ್ತಿದೆ. ಆದರೆ, ತಾಲ್ಲೂಕಿನಲ್ಲಿ ಕೆಲವು ರೈತರು ಇದಕ್ಕೆ ಅಪವಾದ ಎನ್ನುವಂತೆ ಮಳೆ ಇಲ್ಲದಿದ್ದರೂ ಉತ್ತಮ ಬೆಳೆ ಬೆಳೆಯುತ್ತಿದ್ದಾರೆ. ಅಂತವರ ಸಾಲಲ್ಲಿ ರೈತ ಗಿರೀಶ್ ಇದ್ದಾರೆ.

ಗಿರೀಶ್ ಅವರಿಗೆ ಒಂದೂವರೆ ಎಕರೆ ಜಮೀನಿದ್ದು, ಅದನ್ನು ಮೂರು ಭಾಗ ಮಾಡಿಕೊಂಡು ವಿವಿಧ ಬೆಳೆ ಬೆಳೆಯುತ್ತಿದ್ದಾರೆ. ಬೆಳೆಗಳಿಗೆ ನೀರುಣಿಸಲು ಒಂದು ಕೊಳವೆ ಬಾವಿ ಇದೆ. ಕೃಷಿ ಇಲಾಖೆಯ ಸಹಕಾರದೊಂದಿಗೆ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ. ದೊರೆಯುವ ನೀರನ್ನು ಮಿತ ಬಳಕೆ ಮಾಡುತ್ತಾರೆ. ಸರ್ಕಾರದ ಸೌಲಭ್ಯ ಪಡೆದುಕೊಂಡು ಹನಿ ನೀರಾವರಿ ಮತ್ತು ತುಂತುರು ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ.

ಈ ಬಾರಿ ಮುಂಗಾರು ಕೈಕೊಟ್ಟಿರುವುದರಿಂದ ಕಡಿಮೆ ನೀರನ್ನು ಬಳಸಿ ಬೆಳೆಯಬಹುದಾದ ಸ್ವೀಟ್ ಕಾರ್ನ್ ಬೆಳೆದಿದ್ದು, ಕಟಾವಿಗೆ ಬಂದಿದೆ. ಬೆಳೆ ಬೆಳೆಯಲು ಸುಮಾರು ₹20 ಸಾವಿರ ವೆಚ್ಚ ತಗಲಿದೆ. ಒಂದು ಕೆ.ಜಿ ₹16ಕ್ಕೆ ಮಾರಾಟವಾಗುತ್ತಿದೆ. ಕನಿಷ್ಠ 5ರಿಂದ 6 ಟನ್ ಇಳುವರಿ ನಿರೀಕ್ಷೆ ಇದೆ. ಸುಮಾರು ಒಂದು ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ಅರ್ಧ ಎಕರೆಯಲ್ಲಿ ಕೊತ್ತಂಬರಿ ಬೆಳೆ ಬೆಳೆದು ಉತ್ತಮ ಲಾಭ ಗಳಿಸಿದ್ದಾರೆ. ಹೆಚ್ಚಿನ ನೀರಿನ ಅವಶ್ಯಕತೆ ಇಲ್ಲದೆ ಚಳಿ ವಾತಾವರಣದಲ್ಲೇ ಬೆಳೆಯಬಹುದು. 150 ಕಟ್ಟುಗಳುಳ್ಳ ಮೂಟೆಗೆ ₹1,200ಕ್ಕೆ ಮಾರಾಟವಾಗಿದೆ. ಕಡಿಮೆ ನೀರನ್ನು ಬಳಸಿ ಇಂತಹ ಬೆಳೆಗಳನ್ನು ಬೆಳೆಯಬಹುದು ಎನ್ನುತ್ತಾರೆ.

ರಾಗಿ, ಸೌತೆಕಾಯಿ, ಎಲೆ ಕೋಸು, ಕ್ಯಾರೆಟ್, ಶುಂಟಿ ಹೀಗೆ ಬೆಳೆಗಳನ್ನು ಬದಲಾವಣೆ ಮಾಡಿಕೊಂಡು ಬೆಳೆಯಬೇಕು. ಒಂದೇ ಬೆಳೆ ಬದಲಾಗಿ ಎರಡ್ಮೂರು ಬೆಳೆ ಬೆಳೆಯುವುದು ಉತ್ತಮ. ಒಂದು ಬೆಳೆ ಕೈಕೊಟ್ಟರೂ ಇನ್ನೊಂದು ಬೆಳೆ ಕೈಹಿಡಿಯುತ್ತದೆ ಎನ್ನುವುದು ಗಿರೀಶ್ ಅವರ ಮಾತಾಗಿದೆ.

ಮಳೆ ಬರಲಿ ಬಿಡಲಿ ವರ್ಷ ಪೂರ್ತಿ ಜಮೀನಿನಲ್ಲಿ ಕೆಲಸವಿರುತ್ತದೆ. ತನ್ನ ಕುಟುಂಬಕ್ಕೆ ಬೇಕಾದ ದವಸ, ಧಾನ್ಯ, ತರಕಾರಿಗಳನ್ನು ಭೂಮಿಯಲ್ಲಿ ಬೆಳೆದು ಸ್ವಾವಲಂಬಿ ಜೀವನ ಸಾಗುತ್ತಿದೆ.

ಗಿರೀಶ್ ಅವರದ್ದು ಚಿಕ್ಕ ಕುಟುಂಬ. ಇಬ್ಬರು ಮಕ್ಕಳು ಓದುತ್ತಿದ್ದು, ಪತ್ನಿ ಕೃಷಿ ಕೆಲಸಗಳಲ್ಲಿ ಸಹಾಯ ಮಾಡುತ್ತಾರೆ. ಹಾಗಾಗಿ ಕೃಷಿಯಿಂದಲೇ ಉತ್ತಮ ಬದುಕ ಕಟ್ಟಿಕೊಂಡಿದ್ದೇನೆ ಎಂದು ಗಿರೀಶ್ ಹೆಮ್ಮೆಯಿಂದ ಹೇಳುತ್ತಾರೆ.

ರೈತರನ್ನು ಕಾಡುತ್ತಿದೆ ರಸಗೊಬ್ಬರ ಕೊರತೆ

ರಾಸಾಯನಿಕ ಗೊಬ್ಬರಗಳ ದರ ಹೆಚ್ಚಳ ಹಾಗೂ ಕೊರತೆ ರೈತರನ್ನು ಕಾಡುತ್ತಿದೆ. ವಿವಿಧ ಗೊಬ್ಬರಗಳ ದರ ಮೂಟೆಗೆ ₹220 ರಿಂದ ₹2300 ಇದೆ. ಯೂರಿಯಾವನ್ನು ಮೂರು ತಿಂಗಳಿಗೆ ಒಂದು ಮೂಟೆ ಮಾತ್ರ ನೀಡಲಾಗುತ್ತಿದೆ. ಕಾಳಸಂತೆಯಲ್ಲಿ ಮೂಟೆಗೆ ₹500ರಿಂದ ₹600 ಹೆಚ್ಚಿಗೆ ಪಡೆಯುತ್ತಾರೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260811-16-95994818

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ