
ಕಲಬುರಗಿ ಉದ್ಯಾನಗಳ ನಿರ್ವಹಣೆಯ ನಿರ್ಲಕ್ಷ್ಯದಿಂದ ಮುಕ್ತಿ ಎಂದು?
ಕಲಬುರಗಿ: ಅಲ್ಲಿ ಒಂದು ಪಾರ್ಶ್ವದಲ್ಲಿ ಶಾಲಾ ಬಸ್ ಬಹುದಿನಗಳಿಂದ ನಿಂತು ಮಣ್ಣಲ್ಲಿ ಹೂತಿದೆ. ಮತ್ತೊಂದು ಮೂಲೆಯಲ್ಲಿ ವಾಟರ್ ಟ್ಯಾಂಕರ್ ನಿಂತಿದೆ. ಇವುಗಳ ನಡುವೆ ಕಾರೊಂದನ್ನು ನಿಲ್ಲಿಸಲಾಗಿದೆ. ಕೆಲ ಕೃಷಿ ಸಲಕರಣೆಗಳನ್ನೂ ಅಲ್ಲಿ ಇಡಲಾಗಿದೆ. ಮೂಲೆಯಲ್ಲಿ ಕಟ್ಟಡದ ತ್ಯಾಜ್ಯ ಸುರಿಯಲಾಗಿದೆ. ಜಿನುಗು ಮಳೆಗೆ ಬೆಳೆದಿರುವ ಹುಲ್ಲನ್ನು ದನವೊಂದು ಮೇಯುತ್ತಿದೆ...
ಇದು ನಗರದ ಉದನೂರು ರಸ್ತೆಯ ನಂದಗೋಕುಲ ಬಡಾವಣೆಯ ಉದ್ಯಾನದ ದುಸ್ಥಿತಿ. ಹುಲ್ಲುಹಾಸು, ನಡಿಗೆ ಪಥ, ವಿರಮಿಸಲು ಆಸನಗಳನ್ನು ಹೊಂದಬೇಕಿದ್ದ ಉದ್ಯಾನಕ್ಕೆ ಬರೀ ಕಾಂಪೌಂಡ್ ಮಾತ್ರವೇ ಇದೆ. ಬೆರಳೆಣಿಕೆ ಗಿಡಗಳು ಬಿಟ್ಟರೆ, ಮಿಕ್ಕಿದ್ದೆಲ್ಲವೂ ಮರೀಚಿಕೆ. ಕೊಳವೆಬಾವಿ ಇದ್ದರೂ, ಉದ್ಯಾನದಲ್ಲಿ ಹಸಿರಿನ ಸೊಲ್ಲಿಲ್ಲ.
ಉದನೂರ ರಸ್ತೆಯ ಸಂತೋಷ ಕಾಲೊನಿ, ಮೌನೇಶ್ವರ ಕಾಲೊನಿಗಳ ಕೆಲ ಉದ್ಯಾನಗಳ ಸ್ಥಿತಿಯೂ ಉತ್ತಮವಾಗಿಲ್ಲ. ಸೂಕ್ತ ನಿರ್ವಹಣೆ ಇಲ್ಲದೇ ಕಳೆಗುಂದಿವೆ. ವಾರ್ಡ್ ನಂಬರ್ 51ರ ವ್ಯಾಪ್ತಿಯ ಎನ್‌ಜಿಒ ಕಾಲೊನಿಯ ಉದ್ಯಾನ ಜಾಗ ಸಾಕಷ್ಟು ವಿಶಾಲವಾಗಿದೆ. ಆದರೆ, ನಿರ್ವಹಣೆಯ ಸ್ಪರ್ಶವಿಲ್ಲದೇ ಸೊರಗಿದೆ. ಅಲ್ಲೊಂದು ಪುಟ್ಟ ಸಾಯಿಮಂದಿರವೂ ಇದೆ. ದಶಕಗಳ ಹಿಂದೆ ಹಾಕಿದ್ದ ಬೆಂಚುಗಳು ಮುರಿದು ಹಾಳಾಗಿವೆ. ಉದ್ಯಾನದ ಒಳಗೆ ಕಾಂಪೌಂಡ್ ಸುತ್ತಲೂ ಕಸ, ಗಿಡಗಂಟಿ ಬೆಳೆದಿವೆ. ಉದ್ಯಾನದಲ್ಲಿರುವ ಕೈ ಪಂಪ್ ಕೂಡ ನಿಷ್ಕ್ರಿಯವಾಗಿದೆ.
ಇದೇ ಕಾಲೊನಿಯ ಜಗದಂಬಾ ಮಂದಿರ ಇರುವ ಉದ್ಯಾನವನ್ನು ಬಹುಪಾಲು ದೇವಸ್ಥಾನವೇ ಆವರಿಸಿದೆ. ಆಸನಗಳು ಇದ್ದರೂ, ನಡಿಗೆ ಪಥವೇ ಇಲ್ಲ. ಬಡಾವಣೆ ನಾಗರಿಕರು ರಸ್ತೆಯಲ್ಲೇ ‘ಶಥಪಥ’ ಹಾಕುತ್ತ ವಾಕಿಂಗ್ ಮಾಡುವಂತಾಗಿದೆ. ಮಕ್ಕಳು ಬಡಾವಣೆಯ ರಸ್ತೆಯಲ್ಲೇ ಸೈಕಲ್ ತುಳಿಯುವುದು, ಕ್ರಿಕೆಟ್ ಆಡುವುದು ಅನಿವಾರ್ಯವಾಗಿದೆ.
ಎನ್‌ಜಿಒ ಕಾಲೊನಿಯಲ್ಲಿ ರೈಲ್ವೆ ಟ್ರ್ಯಾಕ್‌ನಿಂದ ತುಸು ದೂರವಿರುವ ಉದ್ಯಾನ, ಮಹಾವೀರ ನಗರದ ಉದ್ಯಾನಗಳ ಜಾಗದಲ್ಲೇ ಮೇಲ್ಮಟ್ಟದ ಜಲಸಂಗ್ರಹಗಾರಗಳು ತಲೆ ಎತ್ತಿವೆ. ಎನ್‌ಜಿಒ ಉದ್ಯಾನದಲ್ಲಿ ನೀರಿನ ಟ್ಯಾಂಕ್ ಪಕ್ಕದಲ್ಲಿ ಸಣ್ಣ ತಗಡಿನ ಶೀಟ್ ನಿರ್ಮಿಸಿ ಜನ ವಾಸಿಸುತ್ತಿದ್ದಾರೆ. ಉದ್ಯಾನದ ಮತ್ತೊಂದು ಭಾಗವು ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ. ವೆಂಕಟೇಶ್ವರ ನಗರದ ಶಾಸ್ತ್ರಿ ಬಡಾವಣೆಯ ಉದ್ಯಾನದಲ್ಲಿ ಜೋಕಾಲಿ ಹಾಗೂ ಸೀಸಾ ಕಿತ್ತು ಹೋಗಿವೆ.
ಇನ್ನು, ಪಿ ಅಂಡ್ ಟಿ ಕಾಲೊನಿಯ ನವಜೀವನ ನಗರ ಬಡಾವಣೆಯ ಉದ್ಯಾನ ಹಸಿರಿನಿಂದ ಕಂಗೊಳಿಸುತ್ತಿದೆ. ಇದರ ಹಿಂದೆ ಪಾಲಿಕೆಗಿಂತಲೂ ಬಡಾವಣೆ ನಿವಾಸಿಗಳ ಶ್ರಮದ ಬೆವರಿದೆ. ಆದರೆ, ಅದೂ ಕೂಡ ಸಮಸ್ಯೆಗಳಿಂದ ಮುಕ್ತವಾಗಿಲ್ಲ; ಸೌಲಭ್ಯಗಳನ್ನು ಬೇಡುತ್ತಿದೆ.
‘ಕೆಲವು ವರ್ಷಗಳ ಹಿಂದೆ ಜಿಡಿಎ ಉದ್ಯಾನವು ಪಾಳು ಬಿದ್ದಿತ್ತು. ಬಡಾವಣೆಯ ಸುತ್ತಲಿನ ಜನರು ಸೇರಿಕೊಂಡು ಕೈಯಿಂದ ₹2.50 ಲಕ್ಷದಷ್ಟು ವಂತಿಕೆ ಸಂಗ್ರಹಿಸಿ ಉದ್ಯಾನ ಅಭಿವೃದ್ಧಿ ಪಡಿಸಿದ್ದೇವೆ. ಈಗ ನಿತ್ಯ ನೂರಕ್ಕೂ ಅಧಿಕ ನಾಗರಿಕರು ಬೆಳಿಗ್ಗೆ–ಸಂಜೆ ವಿಹರಿಸಲು ಬರುತ್ತಿದ್ದಾರೆ. ಆದರೆ, ಅದಕ್ಕೆ ತಕ್ಕಂತೆ ನಡಿಗೆ ಪಥ, ವ್ಯಾಯಾಮಕ್ಕೆ ಸಲಕರಣೆಗಳು ಬೇಕಿದೆ. ಪಾರ್ಕ್ ರಕ್ಷಿಸಲು ಕಾಂಪೌಂಡ್ ಎತ್ತರಿಸುವ ತುರ್ತಿದೆ’ ಎನ್ನುತ್ತಾರೆ ನವಜೀವನ ನಗರದ ಹಸಿರು ಉದ್ಯಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಂಬಯ್ಯ ಗುತ್ತೇದಾರ ಹಾಗೂ ಗೌರವಾಧ್ಯಕ್ಷ ಪ್ರವೀಣ ಜತನ್.
ನೆರವಿನ ನಿರೀಕ್ಷೆಯಲ್ಲಿ ನಿವಾಸಿಗಳು
‘ಕೆಲವರು ಮಧ್ಯಾಹ್ನದ ಹೊತ್ತು ಹಾಗೂ ರಾತ್ರಿ 9 ಗಂಟೆ ಬಳಿಕ ಪಾರ್ಕ್‌ಗೆ ನುಗ್ಗಿ, ಬೋರ್‌ವೆಲ್ ಮೋಟಾರ್‌ನ ವೈರ್ ಕದ್ದೊಯ್ಯುತ್ತಿದ್ದಾರೆ. ಉದ್ಯಾನದಲ್ಲಿ ಅಳವಡಿಸಿದ್ದ ಸ್ಪ್ರಿಂಕ್ಲರ್ ಕಿತ್ತುಕೊಂಡು ಹೋಗುತ್ತಿದ್ದಾರೆ. ಪೈಪ್ ಮುರಿಯುತ್ತಿದ್ದಾರೆ. ಧೂಮಪಾನದಂಥ ಚಟುವಟಿಕೆಗಳನ್ನೂ ನಡೆಸುತ್ತಿದ್ದಾರೆ. ಹೀಗಾಗಿ ಈ ಉದ್ಯಾನದ ಕಾಂಪೌಂಡ್ ಎತ್ತರಿಸಬೇಕು. ಹಿರಿಯರ ವ್ಯಾಯಾಮಕ್ಕಾಗಿ ತೆರೆದ ಜಿಮ್ ಸ್ಥಾಪಿಸಬೇಕು. ವಾಕಿಂಗ್‌ಗೆ ನೆರವಾಗುವಂತೆ ಸುಸಜ್ಜಿತ ನಡಿಗೆ ಪಥವನ್ನೂ ಸ್ಥಾಪಿಸಬೇಕಿದೆ. ಈ ಕುರಿತು ಪಾಲಿಕೆ ಅಧಿಕಾರಗಳು, ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಬಡಾವಣೆಯವರು ಕೈಲಾದಷ್ಟು ಅಭಿವೃದ್ಧಿ ಮಾಡಿದ್ದೇವೆ, ಪಾಲಿಕೆ, ಜನಪ್ರತಿನಿಧಿಗಳು ಇದನ್ನು ಸುಸಜ್ಜಿತವಾಗಿ ಅಭಿವೃದ್ಧಿಪಡಿಸಿಕೊಟ್ಟರೆ, ನಿರ್ವಹಣೆಗೆ ನಾವು ಸಿದ್ಧ’ ಎಂದು ಎನ್ನುತ್ತಾರೆ ನವಜೀವನ ನಗರದ ಹಸಿರು ಉದ್ಯಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಂಬಯ್ಯ ಗುತ್ತೇದಾರ ಹಾಗೂ ಗೌರವಾಧ್ಯಕ್ಷ ಪ್ರವೀಣ ಜತನ್.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260811-34-1895732067