‘ಕಲ್ಯಾಣ’ದಲ್ಲಿ ನೂರಾರು ‘ಕೂಸಿನ ಮನೆ’ಗಳಿಗೆ ಬೀಗ

‘ಕಲ್ಯಾಣ’ದಲ್ಲಿ ನೂರಾರು ‘ಕೂಸಿನ ಮನೆ’ಗಳಿಗೆ ಬೀಗ

‘ಕಲ್ಯಾಣ’ದಲ್ಲಿ ನೂರಾರು ‘ಕೂಸಿನ ಮನೆ’ಗಳಿಗೆ ಬೀಗ

ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚು ‘ಕೂಸಿನ ಮನೆ’ ಬಂದ್ | ‘ವಿಬಿ ಜಿ ರಾಮ್ ಜಿ’ ಅಡಿ ಸಿಗದ ಅನುದಾನ | ಸಂಕಷ್ಟದಲ್ಲಿ ಮಹಿಳಾ ಕೂಲಿ ಕಾರ್ಮಿಕರು

ಕಲಬುರಗಿ: ಗ್ರಾಮ ಪಂಚಾಯಿತಿಗಳಲ್ಲಿ ಅನುದಾನದ ಕೊರತೆ ಕಾರಣಕ್ಕೆ ‘ಕೂಸಿನ ಮನೆ’ಗಳ ಆರೈಕೆದಾರರಿಗೆ ಗೌರವಧನ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ 538 ‘ಕೂಸಿನ ಮನೆ’ಗಳಿಗೆ ಬೀಗ ಹಾಕಲಾಗಿದೆ.

ಕೇಂದ್ರ ಸರ್ಕಾರವು ದೇಶದಾದ್ಯಂತ ಜುಲೈ 1ರಿಂದ ನರೇಗಾ ಬದಲು ‘ವಿಬಿ ಜಿ ರಾಮ್ ಜಿ’ ಯೋಜನೆ ಜಾರಿಗೆ ತಂದಿದೆ. ಯೋಜನೆ ಅಡಿ ‘ಕೂಸಿನ ಮನೆ’ ಆರೈಕೆದಾರರಿಗೆ ಕೂಲಿ ನೀಡಲು ತಾಂತ್ರಿಕವಾಗಿ ಸಾಧ್ಯವಿಲ್ಲ ಎಂದು ರಾಜ್ಯಕ್ಕೆ ತಿಳಿಸಿದೆ. ಆದ್ದರಿಂದ ‘ಕೂಸಿನ ಮನೆ’ ರಾಜ್ಯ ಸರ್ಕಾರಕ್ಕೆ ಮತ್ತಷ್ಟು ಹೊರೆಯಾಗಿ ಪರಿಣಮಿಸಿದೆ.

ರಾಜ್ಯ ಸರ್ಕಾರವು ಗ್ರಾಮ ಪಂಚಾಯಿತಿ ಅನುದಾನದಲ್ಲಿ ಆರೈಕೆದಾರರಿಗೆ ಗೌರವಧನ ನೀಡುತ್ತಿದೆ. ಆದರೆ, ಅನುದಾನದ ಕೊರತೆಯಿಂದ ಈಗಾಗಲೇ ಕೃಶವಾಗಿರುವ ಪಂಚಾಯಿತಿಗಳಿಗೆ ಈ ‘ಭಾರ’ ತಡೆದುಕೊಳ್ಳಲು ಆಗುತ್ತಿಲ್ಲ. ಆದ್ದರಿಂದ ಕೂಸಿನ ಮನೆಗಳು ಒಂದೊಂದಾಗಿ ಮುಚ್ಚುತ್ತಿವೆ.

ಕಲ್ಯಾಣ ಕರ್ನಾಟಕದಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚು ಮನೆಗಳು ಬಂದ್ ಆಗಿವೆ. 127 ಮನೆಗಳಿಗೆ ಬೀಗ ಹಾಕಲಾಗಿದೆ. ಕೇವಲ 66 ಮನೆಗಳು ಕಾರ್ಯ ನಿರ್ವಹಿಸುತ್ತಿವೆ.

ವಿಜಯನಗರದಲ್ಲಿ ಹೆಚ್ಚು ಸಕ್ರಿಯ: ಕಲ್ಯಾಣ ಕರ್ನಾಟಕ ಭಾಗದ ವಿಜಯನಗರ ಜಿಲ್ಲೆಯಲ್ಲಿ ಪಂಚಾಯಿತಿ ಅನುದಾನದಲ್ಲಿಯೇ 86 ಮನೆಗಳನ್ನು ನಡೆಸಲಾಗುತ್ತಿದೆ. ಈ ಭಾಗದಲ್ಲಿ ಹೆಚ್ಚು ಸಕ್ರಿಯ ಮನೆಗಳನ್ನು ಹೊಂದಿದ ಜಿಲ್ಲೆ ಇದಾಗಿದೆ.

ಏನಿದು ಯೋಜನೆ?: ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳ ಆರೈಕೆಗಾಗಿ ರಾಜ್ಯ ಸರ್ಕಾರ 2023ರಲ್ಲಿ ‘ಕೂಸಿನ ಮನೆ’ಗಳನ್ನು ಆರಂಭಿಸಿತು. ಕಾರ್ಮಿಕ ಮಹಿಳೆಯರು 6 ತಿಂಗಳಿನಿಂದ 3 ವರ್ಷದೊಳಗಿನ ತಮ್ಮ ಮಕ್ಕಳನ್ನು ಇಲ್ಲಿ ಬಿಟ್ಟು ಹೋಗಬಹುದು. ತರಬೇತಿ ಪಡೆದ ಆರೈಕೆದಾರರು ಮಕ್ಕಳನ್ನು ಆರೈಕೆ ಮಾಡುತ್ತಾರೆ. ಪೌಷ್ಟಿಕ ಆಹಾರ ನೀಡುತ್ತಾರೆ. 

ಸಕ್ರಿಯ ಉದ್ಯೋಗ ಚೀಟಿ ಹೊಂದಿದ ಮಹಿಳೆಯರನ್ನು ನರೇಗಾ ಯೋಜನೆಯ ಗರಿಷ್ಠ ಕೆಲಸದ ದಿನಗಳವರೆಗೆ ‘ಕೂಸಿನ ಮನೆ’ಯ ಆರೈಕೆದಾರರನ್ನಾಗಿ ನೇಮಿಸಲಾಗುತ್ತಿದೆ. ಅವರಿಗೆ ಸಾಮೂಹಿಕ ಕಾಮಗಾರಿಗಳಲ್ಲಿ ಪ್ರತ್ಯೇಕ ಎನ್‌ಎಂಆರ್‌ (ನಾಮಿನಲ್‌ ಮಸ್ಟರ್‌ ರೋಲ್‌) ಸೃಜಿಸಿ, ಕೆಲಸದ ಸ್ಥಳದಲ್ಲಿ ಹಾಜರಾತಿಯಿಂದ ವಿನಾಯಿತಿ ನೀಡಿ, ಗೌರವಧನವಾಗಿ ಕೂಲಿ ಪಾವತಿಸಲಾಗುತ್ತಿತ್ತು. ಕಾಮಗಾರಿ ಇಲ್ಲದಿದ್ದಾಗ ಗ್ರಾಮ ಪಂಚಾಯಿತಿ ಅನುದಾನದಲ್ಲಿ ಗೌರವಧನ ಭರಿಸಲಾಗುತ್ತಿತ್ತು.

‘ಹಣಕಾಸು ಆಯೋಗಗಳ ನಿರ್ಬಂಧಿತ ಅನುದಾನವನ್ನು ನೀರು ಸರಬರಾಜು ಮತ್ತು ಘನತ್ಯಾಜ್ಯ ನಿರ್ವಹಣೆಗೆ ಬಳಸಬೇಕು. ಅದು ಬಿಡುಗಡೆ ಆಗಿಲ್ಲ. ಸಂಗ್ರಹಿಸಿದ ತೆರಿಗೆ ಹಣವನ್ನು ಬಳಸಿಕೊಳ್ಳುತ್ತಿದ್ದೇವೆ. ಇದರ ನಡುವೆ, ಕೂಸಿನ ಮನೆ ಆರೈಕೆದಾರರಿಗೆ ಗೌರವಧನ ಪಾವತಿಸಲು ಹೇಗೆ ಸಾಧ್ಯ’ ಎಂದು, ಹೆಸರು ಬಹಿರಂಗಪಡಿಸಲು ಬಯಸದ ಪಿಡಿಒ ಪ್ರಶ್ನಿಸಿದರು.

ಈ ಸಂಬಂಧ ಪ್ರತಿಕ್ರಿಯೆ ಪಡೆಯಲು ಕಲಬುರಗಿ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಕರೆ ಮಾಡಿದರೆ, ಅವರು ಲಭ್ಯರಾಗಲಿಲ್ಲ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ