ಜಂತರ್ ಮಂತರ್‌ ಮಾದರಿಯಲ್ಲೇ ರಾಜಸ್ಥಾನದಲ್ಲಿ ಬೃಹತ್ ಪ್ರತಿಭಟನೆ: ದೀಪ್ಕೆ ಎಚ್ಚರಿಕೆ

ಜಂತರ್ ಮಂತರ್‌ ಮಾದರಿಯಲ್ಲೇ ರಾಜಸ್ಥಾನದಲ್ಲಿ ಬೃಹತ್ ಪ್ರತಿಭಟನೆ: ದೀಪ್ಕೆ ಎಚ್ಚರಿಕೆ

ಜಂತರ್ ಮಂತರ್‌ ಮಾದರಿಯಲ್ಲೇ ರಾಜಸ್ಥಾನದಲ್ಲಿ ಬೃಹತ್ ಪ್ರತಿಭಟನೆ: ದೀಪ್ಕೆ ಎಚ್ಚರಿಕೆ

ಜೈಪುರ (ರಾಜಸ್ಥಾನ): ಸರ್ಕಾರಿ ಶಾಲೆಯೊಂದನ್ನು ಪರಿಶೀಲಿಸಲು ತೆರಳಿದ್ದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸ್ವಯಂಸೇವಕರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು 48 ಗಂಟೆಗಳ ಒಳಗೆ ಬಂಧಿಸದಿದ್ದರೆ, ಜಂತರ್‌ ಮಂತರ್‌ ಮಾದರಿಯಲ್ಲೇ ರಾಜಸ್ಥಾನ ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುವುದಾಗಿ ಸಿಜೆಪಿ ಸಂಚಾಲಕ ಅಭಿಜಿತ್ ದೀಪ್ಕೆ ಎಚ್ಚರಿಕೆ ನೀಡಿದ್ದಾರೆ.

ಜೈಪುರದಿಂದ ಸುಮಾರು 24 ಕಿಲೋಮೀಟರ್‌ ದೂರದಲ್ಲಿರುವ ರಾಂಪುರ ಕನ್ವರಪುರ ಗ್ರಾಮದಲ್ಲಿ ಶೆಡ್‌ವೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಶಾಲೆಗೆ ‘ಸ್ಕೂಲ್‌ ಠೀಕ್‌ ಕರೊ’ (ಶಾಲೆಗಳನ್ನು ಸರಿಪಡಿಸಿ) ಅಭಿಯಾನದ ಭಾಗವಾಗಿ ಶುಕ್ರವಾರ ಭೇಟಿ ನೀಡಲು ಸಿಜೆಪಿ ತಂಡ ಮುಂದಾಗಿತ್ತು. ಈ ವೇಳೆ ಅಪರಿಚಿತ ಗುಂಪೊಂದು ದಾಳಿ ನಡೆಸಿ, ಕಲ್ಲು ತೂರಾಟ ನಡೆಸಿದೆ ಎಂದು ಆರೋಪಿಸಲಾಗಿದೆ.

ದಾಳಿಕೋರರು ಬಿಜೆಪಿ ಕಾರ್ಯಕರ್ತರು ಎಂದು ಆರೋಪಿಸಿರುವ ದೀಪ್ಕೆ, ‘ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜೈಪುರಕ್ಕೆ ಬಂದು ಶಾಲೆಯ ಎದುರು ಧರಣಿ ನಡೆಸಿ, ಶಿಕ್ಷಣ ಸಚಿವ ಮದನ್‌ ದಿಲಾವರ್‌ ಅವರ ರಾಜೀನಾಮೆಗೆ ಆಗ್ರಹಿಸಲಾಗುವುದು’ ಎಂದು ಹೇಳಿದ್ದಾರೆ.

ದಾಳಿಯ ವೇಳೆ ಸ್ವಯಂಸೇವಕರ ಮೊಬೈಲ್‌ ಫೋನ್‌ಗಳನ್ನು ಧ್ವಂಸಗೊಳಿಸಲಾಗಿದ್ದು, ಗ್ರಾಮದೊಳಗೆ ಪ್ರವೇಶಿಸದಂತೆ ತಡೆಯಲಾಗಿದೆ ಎಂದು ಸಿಜೆಪಿ ಆರೋಪಿಸಿದೆ. ಘಟನೆಯಲ್ಲಿ ಒಬ್ಬ ಸ್ವಯಂಸೇವಕನ ಕೈ ಮುರಿದಿದ್ದು, ತಂಡ ಪ್ರಯಾಣಿಸುತ್ತಿದ್ದ ಕಾರಿನ ಹಿಂಭಾಗದ ಗಾಜುಗಳನ್ನು ಪುಡಿಮಾಡಲಾಗಿದೆ ಎಂದು ವರದಿಯಾಗಿದೆ.

ಸಿಜೆಪಿ ತಂಡವು ಆ ದಿನ ಎರಡು ಶಾಲೆಗಳಿಗೆ ಭೇಟಿ ನೀಡಲು ಯೋಜಿಸಿತ್ತು. ಆದರೆ ದಾಳಿಯ ಹಿನ್ನೆಲೆಯಲ್ಲಿ ಎರಡನೇ ಶಾಲೆಯ ಭೇಟಿಯನ್ನು ರದ್ದುಗೊಳಿಸಬೇಕಾಯಿತು.

‘ನಮ್ಮ ಮೇಲೆ ಹಲ್ಲೆ ನಡೆಸಿದರೆಂದು ಶಾಲೆಗಳ ಸ್ಥಿತಿಗತಿಗಳನ್ನು ಪರಿಶೀಲಿಸುವ ಕಾರ್ಯವನ್ನು ನಿಲ್ಲಿಸುವುದಿಲ್ಲ’ ಎಂದು ಸಿಜೆಪಿ ಸಹ ಸಂಚಾಲಕ ಅಶುತೋಷ್‌ ರಂಕಾ ತಿಳಿಸಿದ್ದಾರೆ.

ಈ ನಡುವೆ, ಸರ್ಕಾರಿ ಶಾಲೆಗಳಿಗೆ ಹೊರಗಿನವರು ಹಾಗೂ ಮಾಧ್ಯಮ ಪ್ರತಿನಿಧಿಗಳು ಪ್ರವೇಶಿಸುವುದನ್ನು, ಶಾಲಾ ಆವರಣದಿಂದ ವಿಡಿಯೋಗ್ರಫಿ, ಸಂದರ್ಶನ ಮತ್ತು ಲೈವ್‌ ಸ್ಟ್ರೀಮಿಂಗ್‌ ಮಾಡುವುದನ್ನು ನಿರ್ಬಂಧಿಸಿ ರಾಜ್ಯ ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಆದೇಶವನ್ನೂ ಅವರು ಟೀಕಿಸಿದ್ದಾರೆ.

ಶಾಲೆಯ ದುಸ್ಥಿತಿಯನ್ನು ಉಲ್ಲೇಖಿಸಿದ ಸಿಜೆಪಿ ಸದಸ್ಯ ಮುಖೇಶ್‌ ಆಲ್‌ರೌಂಡರ್‌, ‘ಶಾಲೆಯ ದುರಸ್ತಿಗಾಗಿ ₹12 ಲಕ್ಷ ಮಂಜೂರಾಗಿದ್ದರೂ, ಸುಮಾರು 25 ವಿದ್ಯಾರ್ಥಿಗಳು ಇನ್ನೂ ಅತ್ಯಂತ ಕಳಪೆ ಪರಿಸ್ಥಿತಿಯಲ್ಲಿ ಓದುತ್ತಿದ್ದಾರೆ. ಶೌಚಾಲಯ ಮತ್ತು ಶುದ್ಧ ಕುಡಿಯುವ ನೀರಿನಂತಹ ಮೂಲಭೂತ ಸೌಲಭ್ಯಗಳಿಗೂ ನಯಾ ಪೈಸೆ ವೆಚ್ಚ ಮಾಡಿದಂತೆ ಕಾಣುತ್ತಿಲ್ಲ’ ಎಂದು ಆರೋಪಿಸಿದ್ದಾರೆ.

‘ಪಂಚಾಯತ್‌ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಟಿಕೆಟ್‌ ಆಕಾಂಕ್ಷಿಗಳಾಗಿರುವ ಕೆಲವರು ತಮ್ಮ ನಿಷ್ಠೆ ಪ್ರದರ್ಶಿಸಲು ನಮ್ಮ ಮೇಲೆ ದಾಳಿ ನಡೆಸಿದ್ದಾರೆ’ ಎಂದು ಅವರು ದೂರಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ