
ಖಾಸಗಿ ವಾಹನ ತಾಣವಾದ ಹುನಗುಂದ ಬಸ್ ನಿಲ್ದಾಣ: ಚಾಲಕರ ಪರದಾಟ
ಹುನಗುಂದ: ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣ ಖಾಸಗಿ ವಾಹನಗಳ ನಿಲುಗಡೆಯ ತಾಣವಾಗಿ ಮಾರ್ಪಟ್ಟಿದೆ. ಅಡ್ಡಾದಿಡ್ಡಿ ನಿಲ್ಲುವ ವಾಹನಗಳಿಗೆ ಕಡಿವಾಣ ಇಲ್ಲದಂತಾಗಿದೆ.
ನಿತ್ಯ ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯದ ನೂರಾರು ಬಸ್‌ಗಳು ಇಲ್ಲಿ ಸಂಚರಿಸುತ್ತಿವೆ. ಸಾವಿರಾರು ಜನರಿಗೆ ಬಸ್ ಪ್ರಯಾಣಕ್ಕೆ ಈ ಬಸ್ ನಿಲ್ದಾಣವೇ ಆಧಾರ. ಆದರೆ ನಿಲ್ದಾಣದ ಆವರಣ ಅವ್ಯವಸ್ಥೆಯಿಂದ ಕೂಡಿದೆ. ಸಾರಿಗೆ ಬಸ್ ಸಂಚಾರ ಹಾಗೂ ನಿಲುಗಡೆಗೆ ಚಾಲಕರು ಪರದಾಡುವಂತಾಗಿದೆ.
ಬಸ್ ನಿಲ್ದಾಣದ ಆವರಣದ ಒಂದು ಬದಿಯಲ್ಲಿ (ಕಾಂಪೌಂಡ್ ಹತ್ತಿರ) ಬಗೆ ಬಗೆಯ ಕಾರುಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಟ್ಟಂತೆ ಸಾಲಾಗಿ ನಿಲ್ಲಿಸಲಾಗಿರುತ್ತದೆ. ಮತ್ತೊಂದು ಬದಿಯಲ್ಲಿ ಟಂಟಂಗಳು ನಿಲ್ಲುತ್ತವೆ. ಸಾರಿಗೆ ನಿಯಂತ್ರಕರ ಕಚೇರಿ ಎದುರೂ ಅಡ್ಡಾದಿಡ್ಡಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ವಾಹನ ನಿಲ್ಲಿಸುವವರಿಗೆ ಹೇಳುವವರು, ಕೇಳುವವರು ಇಲ್ಲದಂತಾಗಿದೆ.
ಪಾರ್ಕಿಂಗ್ ನಿರ್ವಹಣೆ ಕೊರತೆ: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದ ದ್ವಾರದ ಒಂದು ಬದಿಯಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯಿದೆ. ಆದರೆ ಕೆಲ ವರ್ಷಗಳಿಂದ ಸೂಕ್ತ ನಿರ್ವಹಣೆ ಇಲ್ಲದ ಕಾರಣ ಪಾರ್ಕಿಂಗ್ ವ್ಯವಸ್ಥೆ ಹಳಿ ತಪ್ಪಿದೆ. ಬೇಕಾಬಿಟ್ಟಿ ಹಾಗೂ ಅಡ್ಡಾದಿಡ್ಡಿ ವಾಹನ ನಿಲ್ಲಿಸುವುದರಿಂದ ಪ್ರಯಾಣಿಕರ ಓಡಾಟಕ್ಕೆ ಅಡಚಣೆಯಾಗಿದೆ. ವಾಣಿಜ್ಯ ಮಳಿಗೆ ಮುಂದೆ ವಾಹನಗಳ ಪಾರ್ಕಿಂಗ್ ಮಾಡುವುದರಿಂದ ವ್ಯಾಪಾರ–ವಹಿವಾಟಿಗೆ ತೊಂದರೆಯಾಗುತ್ತಿದೆ.
ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಒಳಗೆ ಖಾಸಗಿ ವಾಹನಗಳಿಗೆ ಅನುಮತಿ ಇಲ್ಲ. ಆದರೆ ವಾಹನ, ಬೈಕ್‌ಗಳನ್ನು ಕೆಲವರು ಬಸ್ ನಿಲ್ದಾಣದಲ್ಲಿಯೇ ಬೇಕಾಬಿಟ್ಟಿಯಗಿ ಪಾರ್ಕಿಂಗ್ ಮಾಡಿ ಹೋಗುವುದರಿಂದ ಬಸ್‌ಗಳ ಸಂಚಾರಕ್ಕೂ, ಪಾದಚಾರಿಗಳ ಓಡಾಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬಸ್ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯನ್ನು ನೇಮಿಸಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕುಳಿತುಕೊಳ್ಳಲು ನೆಲಹಾಸೇ ಗತಿ
ಬಸ್ ನಿಲ್ದಾಣದ ಒಂದು ಬದಿಯಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸೂಕ್ತ ಆಸನಗಳ ವ್ಯವಸ್ಥೆ ಇಲ್ಲ. ಹೀಗಾಗಿ ವಿಧಿಯಿಲ್ಲದೇ ನೆಲಹಾಸಿನ ಮೇಲೆಯೇ ಕುಳಿಕೊಳ್ಳಬೇಕಾದ ದುಃಸ್ಥಿತಿ ಪ್ರಯಾಣಿಕರದ್ದಾಗಿದೆ.
ಬಸ್ ನಿಲ್ದಾಣದ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವೂ ಇಲ್ಲ. ಎಲ್ಲೆಂದರಲ್ಲಿ ಕಸ, ಕಡ್ಡಿ, ಕುರುಕಲ ತಿಂಡಿಯ ಪ್ಯಾಕೆಟ್‌ಗಳು ಹಾಗೂ ನೀರಿನ ಬಾಟಲ್‌ಗಳು ಬಿದ್ದಿರುತ್ತವೆ. ಆವರಣದಲ್ಲಿನ ಚರಂಡಿ, ಶೌಚಾಲಯಗಳು ದುರ್ನಾತ ಬೀರುತ್ತವೆ. ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಸ್ವಚ್ಛತೆಗೆ ಆದ್ಯತೆ ನೀಡುವ ಜೊತೆಗೆ ಮೂಲ ಸೌಕರ್ಯ ಕಲ್ಪಿಸುವುದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260825-19-1211381342