ಆಲಮೇಲ ತಾಲ್ಲೂಕಿನಲ್ಲಿ ಬರದ ಕರಿನೆರಳು | ಕಂಗಾಲಾದ ಅನ್ನದಾತ: ಪರಿಹಾರಕ್ಕೆ ಮೊರೆ

ಆಲಮೇಲ ತಾಲ್ಲೂಕಿನಲ್ಲಿ ಬರದ ಕರಿನೆರಳು | ಕಂಗಾಲಾದ ಅನ್ನದಾತ: ಪರಿಹಾರಕ್ಕೆ ಮೊರೆ

ಆಲಮೇಲ ತಾಲ್ಲೂಕಿನಲ್ಲಿ ಬರದ ಕರಿನೆರಳು | ಕಂಗಾಲಾದ ಅನ್ನದಾತ: ಪರಿಹಾರಕ್ಕೆ ಮೊರೆ

ಆಲಮೇಲ: ‘ಮಳೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಬ್ಯಾಂಕ್ ಹಾಗೂ ಕೈಗಡ ಸಾಲ ಮಾಡಿ ತೊಗರಿ ಮತ್ತು ಮೆಕ್ಕೆಜೋಳ ಬಿತ್ತನೆ ಮಾಡಿದ್ದೇವೆ. ಮಳೆ ಕೈಕೊಟ್ಟಿದ್ದರಿಂದ ಮೊಳಕೆಯೊಡೆದ ಪೈರುಗಳು ಒಣಗುತ್ತಿವೆ. ಬಿತ್ತನೆಗೆ ಹಾಕಿದ ಬಂಡವಾಳವೂ ಮಣ್ಣು ಪಾಲಾಗುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ತಕ್ಷಣ ನೆರವಿಗೆ ಧಾವಿಸಿ ಎಕರೆಗೆ ಕನಿಷ್ಠ ₹25 ಸಾವಿರ ಪರಿಹಾರ ನೀಡಬೇಕು. ಕೃಷಿ ಸಾಲವನ್ನೂ ಮನ್ನಾ ಮಾಡಬೇಕು’ ಎಂಬುದು ಆಲಮೇಲದ ಕೃಷಿಕ ಮಹಿಬೂಬ ಸೌದಾಗರ ಅವರ ಮೊರೆ.

‘ಬೆಳೆ ನಷ್ಟದ ಜತೆಗೆ ಮುಂದಿನ ದಿನಗಳಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಕೊರತೆಯ ಆತಂಕವೂ ಎದುರಾಗಬಹುದು. ತಾಲ್ಲೂಕನ್ನು ಬರಪೀಡಿತ ಪ್ರದೇಶ ವೆಂದು ಘೋಷಿಸಿ, ಅಗತ್ಯವಿರುವ ಗ್ರಾಮಗಳಲ್ಲಿ ಮೇವು ಬ್ಯಾಂಕ್ ಹಾಗೂ ಗೋಶಾಲೆಗಳನ್ನು ಆರಂಭಿಸಬೇಕು’ ಎಂಬುದು ಕುರಬತಹಳ್ಳಿಯ ರೈತ ಮಹಾಂತೇಶ ದೇಸಾಯಿ ಆಗ್ರಹ.

ಆಲಮೇಲ ತಾಲ್ಲೂಕಿನಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಕೃಷಿ ಚಟುವಟಿಕೆಗಳ ಮೇಲೆ ಕರಿನೆರಳು ಆವರಿಸಿದೆ. ನೀರಾವರಿ ತಾಲ್ಲೂಕು ಎಂಬ ಹೆಗ್ಗಳಿಕೆ ಹೊಂದಿದ್ದರೂ ಮಳೆ ಕೊರತೆಯಿಂದ ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದ್ದು, ಕಬ್ಬು ಸೇರಿದಂತೆ ವಿವಿಧ ಬೆಳೆಗಳು ಒಣಗುವ ಹಂತ ತಲುಪಿವೆ.

ಜೂನ್‌ನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿದ್ದರೂ, ಜುಲೈನಲ್ಲಿ ಸುರಿದ ಮಳೆಯಿಂದ ರೈತರು ಕೊಂಚ ನೆಮ್ಮದಿಪಟ್ಟಿದ್ದರು. ಆದರೆ, ನಂತರ ಮಳೆ ಬಿಡುವು ನೀಡಿರುವುದರಿಂದ ಜಮೀನಿನ ತೇವಾಂಶ ಕಡಿಮೆಯಾಗುತ್ತಿದೆ.

ಮೊಳಕೆಯೊಡೆದ ಪೈರುಗಳು ಬಿಸಿಲಿನ ತಾಪಕ್ಕೆ ಕಮರುವ ಆತಂಕ ಎದುರಾಗಿದೆ. ಇದರ ಜತೆಗೆ ಹತ್ತಿ ಬೆಳೆಯಲ್ಲಿ ಸಸ್ಯ ಹೇನಿನ ಬಾಧೆಯೂ ಹೆಚ್ಚಾಗುತ್ತಿರುವುದು ರೈತರ ಚಿಂತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ತಾಲ್ಲೂಕಿನಲ್ಲಿ ಹತ್ತಿ 30658 ಹೆಕ್ಟೇರ್, ತೊಗರಿ 6060 ಹೆಕ್ಟೇರ್, ಕಬ್ಬು 16230 ಹೆಕ್ಟೇರ್ ಹಾಗೂ ಮೆಕ್ಕೆಜೋಳ 250 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಮುಂಗಾರು ಜೋಳ, ಸಜ್ಜೆ , ಹೆಸರು, ಉದ್ದು, ಸೂರ್ಯಕಾಂತಿ, ಸೋಯಾಬೀನ್ ಸೇರಿದಂತೆ ವಿವಿಧ ಬೆಳೆಗಳನ್ನು ರೈತರು ಬೆಳೆದಿದ್ದಾರೆ. ಒಟ್ಟಾರೆ 53225 ಹೆಕ್ಟೇರ್ ಇಷ್ಟು ದೊಡ್ಡ ಪ್ರಮಾಣದ ಪ್ರದೇಶದಲ್ಲಿ ಬೆಳೆ ನಷ್ಟವಾದರೆ ರೈತರ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ.

ಮಳೆ ಕೊರತೆಯ ನೈಜ ಪರಿಸ್ಥಿತಿಯನ್ನು ಪರಿಶೀಲಿಸಿ, ಗ್ರಾಮವಾರು ಬೆಳೆ ನಷ್ಟದ ಸಮೀಕ್ಷೆ ನಡೆಸಬೇಕು. ಅರ್ಹ ರೈತರಿಗೆ ತಕ್ಷಣ ಪರಿಹಾರ, ಕೃಷಿ ಸಾಲಕ್ಕೆ ವಿನಾಯಿತಿ, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಒದಗಿಸಬೇಕು ಎಂಬುದು ರೈತರ ಒತ್ತಾಯವಾಗಿದೆ. ಸರ್ಕಾರ ತುರ್ತು ಕ್ರಮ ಕೈಗೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಆಲಮೇಲ ತಾಲ್ಲೂಕಿನ ಕೃಷಿ ವಲಯ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಆತಂಕ ರೈತರದ್ದಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260825-26-20652397

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ