ಬಿಎಂಎಲ್‌ಟಿಎ: ಆರಂಭಕ್ಕೆ ಮುನ್ನ ‘ತಡೆ’
ಬೆಂಗಳೂರು: ಲಂಡನ್‌ನ ಟ್ರಾನ್ಸ್‌ಪೋರ್ಟ್ ಫಾರ್ ಲಂಡನ್ (ಟಿಎಫ್‌ಎಲ್) ಅಥವಾ ಸಿಂಗಪುರದ ಲ್ಯಾಂಡ್ ಟ್ರಾನ್ಸ್‌ಪೋರ್ಟ್ ಅಥಾರಿಟಿ (ಎಲ್‌ಟಿಎ) ಮಾದರಿಯಲ್ಲಿ ಬೆಂಗಳೂರಿನ ಸಾರಿಗೆ ವ್ಯವಸ್ಥೆಗೆ ಸಮಗ್ರ ಪರಿಹಾರ ಸಿಗಲಿದೆ ಎಂದು ನಿರೀಕ್ಷಿಸಲಾಗಿದ್ದ ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ (ಬಿಎಂಎಲ್‌ಟಿಎ) ಕಾರ್ಯಾರಂಭ ಮಾಡುವ ಮೊದಲೇ ತನ್ನ ಮೂಲ ಉದ್ದೇಶ ಮತ್ತು ಅಧಿಕಾರಗಳನ್ನು ಕಳೆದುಕೊಳ್ಳುತ್ತಿದೆ.
ವಿಧಾನ ಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ಕಾಯ್ದೆ ತಿದ್ದುಪಡಿಗೆ ಸೋಮವಾರ ಅಂಗೀಕಾರ ದೊರೆತಿದ್ದು, ₹1.5 ಲಕ್ಷ ಕೋಟಿಗೂ ಅಧಿಕ ಮೌಲ್ಯದ ಸಾರಿಗೆ, ಸಂಚಾರ ಯೋಜನೆಗಳನ್ನು ಪರಿಶೀಲಿಸುವಲ್ಲಿ ಪ್ರಾಧಿಕಾರಕ್ಕಿದ್ದ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ.
ಯಾವುದೇ ಚರ್ಚೆ ಅಥವಾ ಸಮರ್ಪಕವಾದ ವಿಚಾರ ವಿಮರ್ಶೆ ಇಲ್ಲದೆ ತರಾತುರಿಯಲ್ಲಿ ಅಂಗೀಕರಿಸಲಾದ ಈ ತಿದ್ದುಪಡಿಯಿಂದ, ಈ ಹಿಂದೆ ಯೋಜನೆಗಳಿಗೆ ಸರ್ಕಾರ ನೀಡಿದ್ದ ವಿನಾಯಿತಿ ನಿಯಮಗಳಿಗೆ ಬಲ ನೀಡಿದೆ. ಸರ್ಕಾರದ ಹಿಂದಿನ ವಿನಾಯಿತಿ ನಿಯಮವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಇದೀಗ ಅದನ್ನು, ಕಾಯ್ದೆ ತಿದ್ದುಪಡಿ ಮೂಲಕ ಕಾನೂನು ಬದ್ಧಗೊಳಿಸಲು ಸರ್ಕಾರ ಮುಂದಾಗಿದೆ.
ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ (ಬಿಎಂಎಲ್‌ಟಿಎ) ಮಸೂದೆ, 2026ರ ಸೆಕ್ಷನ್ 19ರ ಅಡಿಯಲ್ಲಿ ಸೇರಿಸಲಾ ಗಿರುವ ಹೊಸ ನಿಬಂಧನೆ ಪ್ರಕಾರ, ಕಾಯ್ದೆ ಜಾರಿಗೆ ಬಂದ 2022ರಿಂದ ಹಿಡಿದು ಬಿಎಂಎಲ್‌ಟಿಎ ನಿಯಮಗಳು– 2026 ಅಧಿಸೂಚನೆಯಾಗುವ ಹಿಂದಿನ ದಿನದವರೆಗೆ ಆರಂಭಿಸಲಾದ ಎಲ್ಲ ಯೋಜನೆಗಳನ್ನು, ಕಾಯ್ದೆಯಡಿ ಈಗಾಗಲೇ ಅನುಮೋದನೆ ಪಡೆದ ಯೋಜನೆಗಳೆಂದು ಪರಿಗಣಿಸಿ ವಿನಾಯಿತಿ ನೀಡಲಾಗುತ್ತದೆ.
ಈಗಾಗಲೇ ಕೈಗೊಂಡಿರುವ ನಿರ್ಧಾರಗಳು, ಸಿದ್ಧಪಡಿಸಿದ ಯೋಜನೆಗಳು, ಕೈಗೊಳ್ಳಲಾದ ಕಾರ್ಯಾಚರಣೆಗಳು, ಬಾಕಿ ಇರುವ ಪ್ರಕ್ರಿಯೆಗಳು ಈ ತಿದ್ದುಪಡಿಯಲ್ಲಿ ಒಳಗೊಂಡಿವೆ. ಇದಲ್ಲದೆ, ನಗರದ ನಾಲ್ಕೂ ದಿಕ್ಕುಗಳಲ್ಲಿ ಹಾದುಹೋಗಲಿ ರುವ ಕನಿಷ್ಠ 3 ಸುರಂಗ ರಸ್ತೆ ಯೋಜನೆಗಳಾದ ಉತ್ತರ–ದಕ್ಷಿಣ, ಪೂರ್ವ–ಪಶ್ಚಿಮ, ಹೆಬ್ಬಾಳ ಸುರಂಗ ರಸ್ತೆ, 9 ಪ್ರತ್ಯೇಕ ಮೇಲ್ಸೇತುವೆಗಳು ಹಾಗೂ ಎರಡು ಎಲಿವೇಟೆಡ್ ಕಾರಿಡಾರ್‌ಗಳಿಗೂ ಈ ತಿದ್ದುಪಡಿಯಿಂದ ರಕ್ಷಣೆ ದೊರೆಯುತ್ತದೆ.
ಈ ಎಲ್ಲ ಯೋಜನೆಗಳು ವಿವಾದಕ್ಕೆ ಒಳಗಾಗಿವೆ. ಇವು ಮುಂಬರುವ ನಮ್ಮ ಮೆಟ್ರೊ ಯೋಜನೆಗಳಿಗೆ ಧಕ್ಕೆಯಾಗುವ ರೀತಿಯಲ್ಲಿವೆ ಎಂಬ ಆಕ್ಷೇಪಗಳು ವ್ಯಕ್ತವಾಗಿದ್ದವು. ಈ ತಿದ್ದುಪಡಿಯು ಹೆಚ್ಚಿನ ಚರ್ಚೆಗೆ ಒಳಗಾಗದ ಯೋಜನೆಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಕೈಗೊಳ್ಳಲಾದ ನಿರ್ಧಾರಗಳು, ನಡೆದ ಪ್ರಕ್ರಿಯೆಗಳಿಗೆ ಹಿಂದಿನಿಂದಲೇ ಅನ್ವಯವಾಗು ವಂತೆ ಕಾನೂನುಬದ್ಧ ಮಾನ್ಯತೆ ನೀಡಿದಂತಾಗಿದೆ.
ನಮ್ಮ ಮೆಟ್ರೊ ಸೇರಿದಂತೆ ಪ್ರಮುಖ ಸಾರಿಗೆ ಯೋಜನೆಗಳಿಗೆ ಅನುಮೋದನೆ ನೀಡುವಲ್ಲಿ ಬಿಎಂಎಲ್‌ಟಿಎಗೆ ಆದ್ಯತೆಯನ್ನು ಮೂಲ ಬಿಎಂಎಲ್‌ಟಿಎ ಕಾಯ್ದೆ ನೀಡಿತ್ತು. ಆದರೆ, ಈ ತಿದ್ದುಪಡಿಯಿಂದ ಬಿಎಂಎಲ್‌ಟಿಎ ಅನ್ನು ಪರಿಣಾಮಕಾರಿಯಲ್ಲದ ಪ್ರಾಧಿಕಾರವನ್ನಾಗಿ ಮಾಡಲಾಗುತ್ತಿದೆ.
‘ಹೈಕೋರ್ಟ್ ಭೀತಿಯಿಂದ ತಿದ್ದುಪಡಿ’
‘ಕಾರುಗಳನ್ನು ಗಮನದಲ್ಲಿಟ್ಟುಕೊಂಡು ಮಾಡುವ ಎಲ್ಲ ಯೋಜನೆಗಳಿಗೆ ಅನುಮೋದನೆ ನೀಡಲು ಜಾರಿಗೆ ತಂದಿದ್ದ ನಿಯಮವನ್ನು ಹೈಕೋರ್ಟ್ ರದ್ದುಗೊಳಿಸಬಹುದೆಂಬ ಭೀತಿಯಿಂದ ಸರ್ಕಾರ ಈ ತಿದ್ದುಪಡಿಯನ್ನು ಅಂಗೀಕರಿಸಿದೆ. ಹೈಕೋರ್ಟ್ ಕೂಡ ಈ ವಿಚಾರದಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಪ್ರಮುಖ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಒಂದು ವರ್ಷ ಕಳೆದಿದ್ದರೂ, ಇನ್ನೂ ವಿಚಾರಣೆಗೆ ಬಂದಿಲ್ಲ. ನ್ಯಾಯ ನೀಡುವುದು ವಿಳಂಬವಾದರೆ ಅದು ನ್ಯಾಯ ನಿರಾಕರಣೆಗೆ ಸಮ’ ಎಂದು ಸಂಚಾರ ತಜ್ಞ ಸತ್ಯ ಅರಿಕುತಾರಂ ಅಭಿಪ್ರಾಯಪಟ್ಟರು.
ನಾಗರಿಕ ವ್ಯವಹಾರಗಳ ತಜ್ಞ ವಿ. ರವಿಚಂದರ್, ‘ಲಂಡನ್ ಮತ್ತು ಸಿಂಗಪುರದಲ್ಲಿನ ಸಾರಿಗೆ ಪ್ರಾಧಿಕಾರಗಳು ಸಮಗ್ರ ಸಾರಿಗೆ ಯೋಜನೆ ಮತ್ತು ನಿಯಂತ್ರಣದ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳನ್ನು ನೀಡಿವೆ. ನಮಗೂ ಸಾರಿಗೆ ಮತ್ತು ಸಂಚಾರ ಸಮಸ್ಯೆಗಳನ್ನು ಸಮಗ್ರ ದೃಷ್ಟಿಕೋನದಿಂದ ಪರಿಗಣಿಸುವಂತಹ ಸಾರಿಗೆ ಪ್ರಾಧಿಕಾರದ ಅಗತ್ಯವಿದೆ’ ಎಂದು ಹೇಳಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260825-4-1832922137