
ವಿಶ್ವ ಆನೆ ದಿನ ಇಂದು: ನಾಗರಹೊಳೆಯಲ್ಲಿ ಆನೆ ವಂಶಾಭಿವೃದ್ಧಿಗೆ ಪೂರಕ ಪರಿಸರ
ಹುಣಸೂರು: ನಾಗರಹೊಳೆ ಅರಣ್ಯಕ್ಕೆ ಹೊಂದಿಕೊಂಡಿರುವ ಗ್ರಾಮ ಹಾಗೂ ಪಟ್ಟಣಗಳ ಯುವಕರಲ್ಲಿ ಆನೆ ಸಂರಕ್ಷಣೆ ಕುರಿತು ಅರಣ್ಯ ಇಲಾಖೆ ಜಾಗೃತಿ ಮೂಡಿಸಿ ಏಷ್ಯಾ ಆನೆಗಳ ರಕ್ಷಣೆಗೆ ಒತ್ತು ನೀಡುವ ದಿಕ್ಕಿನಲ್ಲಿ ಕಾರ್ಯೋನ್ಮುಖವಾಗಿದೆ.
ಇಲಾಖೆಯು ಆನೆಗಳ ಸಂತತಿ ನಿರ್ನಾಮದಿಂದ ಉದ್ಭವಿಸುವ ಸಮಸ್ಯೆಯನ್ನು ಅರಣ್ಯದಂಚಿನ ಜನರಿಗೆ ಮನವರಿಕೆ ಮಾಡಿಕೊಟ್ಟಿದೆ. ಅಂದಹಾಗೆ ಆ.12 ವಿಶ್ವ ಆನೆ ದಿನ.
ರಾಜ್ಯದ ಪ್ರಮುಖ ಅರಣ್ಯ ಪ್ರದೇಶಗಳಲ್ಲಿ ಒಂದಾದ ನಾಗರಹೊಳೆ ಅಭಯಾರಣ್ಯದಲ್ಲಿ ಆನೆ ಸಾಂದ್ರತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಇದಕ್ಕೆ ಪೂರಕವಾಗಿ 868 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಕಬಿನಿ, ತಾರಕ, ಕಾವೇರಿ ನದಿಗಳ ಹಿನ್ನೀರು ಪ್ರದೇಶ ಇವುಗಳ ಸಂತತಿ ವೃದ್ಧಿಗೆ ಪ್ರಶಸ್ತ ಸ್ಥಳಗಳಾಗಿವೆ.
ಆನೆ ವಂಶಾಭಿವೃದ್ಧಿಗೆ ಪೂರಕವಾದ ಪರಿಸರ ಮತ್ತು ಹೇರಳವಾಗಿ ಆಹಾರ ನಾಗರಹೊಳೆಯಲ್ಲಿ ಸಿಗುತ್ತಿದೆ. ದಿನದ 17ರಿಂದ 18 ಗಂಟೆ ಆಹಾರ ಸೇವಿಸಲಿದ್ದು, ಆನೆಯ ಲದ್ದಿಯಿಂದ ಹೊರ ಬರುವ ಬೀಜಗಳು ಅರಣ್ಯಾಭಿವೃದ್ಧಿಗೆ ಸಹಕಾರಿಯಾಗಿದೆ.
ಜೀವನ ಶೈಲಿ: ಆನೆ ಸಾಮಾಜಿಕ ಪ್ರಾಣಿಯಾಗಿದ್ದು, ಸಾಮಾನ್ಯವಾಗಿ ಗುಂಪಿನಲ್ಲಿ ಇರುತ್ತವೆ. ಹೆಣ್ಣಾನೆ ಗುಂಪಿನ ನಾಯಕನಾಗಿರುತ್ತದೆ. ಗುಂಪಿನಲ್ಲಿ ಮರಿಗಳಿಗೆ ರಕ್ಷಣೆ, ಆರೈಕೆಯನ್ನು ನೀಡುವು ದರೊಂದಿಗೆ ಒಗ್ಗಟ್ಟಿನಲ್ಲಿ ಬಲ ಪ್ರದರ್ಶಿಸುತ್ತವೆ. ಆನೆ ವಿವಿಧ ಧ್ವನಿ, ದೇಹಭಾಷೆ ಮತ್ತು ಸ್ಪರ್ಶದ ಮೂಲಕ ಪರಸ್ಪರ ಸಂವಹನ ನಡೆಸಿ ಸ್ವರಕ್ಷಣೆ ಮಾಡಿಕೊಳ್ಳುತ್ತವೆ.
2025ರ ಗಣತಿ ಪ್ರಕಾರ 868 ಚದರ ಕಿ.ಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ನಾಗರಹೊಳೆಯ 1 ಚದರ ಕಿ.ಮಿ. ವ್ಯಾಪ್ತಿಯಲ್ಲಿ 1 ಆನೆ ಕಂಡು ಬಂದಿದ್ದು, ಒಟ್ಟು 781 ಆನೆಗಳು ಇವೆ ಎಂದು ನಾಗರಹೊಳೆ ಅರಣ್ಯ ಸಂರಕ್ಷಣಾಧಿಕಾರಿ ಸೀಮಾ ಮಾಹಿತಿ ನೀಡಿದರು.
ರಾಜ್ಯದಲ್ಲಿ ಆನೆಗಳ ಸಂಖ್ಯೆ ಇತರೆ ರಾಜ್ಯಗಳಿಗೆ ಹೋಲಿಸಿದರೆ ಉತ್ತಮವಾಗಿದೆ. 2010ರ ಗಣತಿ ಪ್ರಕಾರ 5,740, 2012ರಲ್ಲಿ 6,074, 2017ರಲ್ಲಿ 6,049, 2023 ರಲ್ಲಿ 6,395 ಮತ್ತು 2025 ರ ಗಣತಿ ಪ್ರಕಾರ 6,013 ಆನೆಗಳಿವೆ ಎಂದು ಹೇಳಿದರು.
ನಿರಂತರ ಸಂಘರ್ಷ: ನಾಗರಹೊಳೆ ಆರಣ್ಯದಂಚಿಗೆ ಹೊಂದಿಕೊಂಡಂತೆ ಒಟ್ಟು 90 ಗ್ರಾಮಗಳಿದ್ದು, ಈ ಪ್ರದೇಶದಲ್ಲಿ ನಿರಂತರ ಆನೆ ಮಾನವ ಸಂಘರ್ಷ ನಡೆದು ಜೀವ ಮತ್ತು ಫಸಲು ಹಾನಿಯಾಗಿ, ಅನ್ನದಾತರು ಪ್ರತಿಭಟನೆ ಹಾದಿ ತುಳಿದಿದ್ದಾರೆ. ಇದನ್ನು ನಿಯಂತ್ರಿಸಲು ಇಲಾಖೆ ಅರಣ್ಯದಂಚಿನಲ್ಲಿ ಕಂದಕ ನಿರ್ಮಿಸಿ ಆನೆ ಅರಣ್ಯದಿಂದ ಹೊರ ಬಾರದಂತೆ ಕ್ರಮ ವಹಿಸಿತ್ತಾದರೂ ಯಶಸ್ಸು ಸಿಕ್ಕಿದ್ದು ಅಷ್ಟಕಷ್ಟೇ. ನಂತರದಲ್ಲಿ ಸೋಲಾರ್ ರೋಪ್ ಬೇಲಿ, ಈಗ ರೈಲ್ವೆ ಹಳಿಯ ತಡೆಗೋಡೆ ನಿರ್ಮಿಸಿದೆ.
ಪ್ರಕರಣ: ನಾಗರಹೊಳೆ ಅರಣ್ಯದಲ್ಲಿ 2025-26 ನೇ ಸಾಲಿನಲ್ಲಿ 1,880 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ₹2.1 ಕೋಟಿ ಪರಿಹಾರ ಸಿಕ್ಕಿದೆ. 2016-27ನೇ ಸಾಲಿನ ಏಪ್ರಿಲ್ ಅಂತ್ಯದವರೆಗೆ 465 ಪ್ರಕರಣಗಳು ಸಂಭವಿಸಿ ಇಲಾಖೆ ₹86 ಲಕ್ಷ ಪರಿಹಾರ ನೀಡಿದೆ.
ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ 120 ಕಿ.ಮಿ. ರೈಲ್ವೆ ತಡೆಗೋಡೆ ನಿರ್ಮಿಸಲಾಗಿದ್ದು, 240 ಕಿ.ಮಿ. ಸೋಲಾರ್ ಬಾರ್, 257 ಕಿ.ಮಿ ಆನೆ ಕಂದಕ ನಿರ್ಮಿಸಿದೆ. ಅಲ್ಲದೆ ಎಐ ತಂತ್ರಜ್ಞಾನ ಬಳಸಿ ಸಿ.ಸಿ ಕ್ಯಾಮೆರಾ ಅಳವಡಿಸಿ ಆನೆಗಳ ಚಲನವಲನ ನಿಯಂತ್ರಣಕ್ಕೆ ಕಡಿವಾಣ ಹಾಕಿದ್ದು, ಇದನ್ನು ಮೀರಿ ಅವಘಡ ಸಂಭವಿಸುವ ಪ್ರಕರಣಕ್ಕೆ ಪರಿಹಾರ ನೀಡಲಾಗುತ್ತಿದೆ ಎಂದು ಡಿಸಿಎಫ್ ಸೀಮಾ ಮಾಹಿತಿ ನಿಡಿದರು.
ವಾಟ್ಸ್‌ಆ್ಯಪ್ ಮೂಲಕ ಸಂದೇಶ
ಅರಣ್ಯದಂಚಿನ ಗ್ರಾಮಗಳಲ್ಲಿ ಆನೆ –ಮಾನವ ಸಂಘರ್ಷ ಬಹುತೇಕ ನಿಯಂತ್ರಣದಲಿದ್ದು, ಇಲಾಖೆ ರೈಲ್ವೆ ತಡೆಗೋಡೆ ನಿರ್ಮಿಸುವ ಜೊತೆಗೆ ವಾಟ್ಸ್‌ಆ್ಯಪ್ ಗುಂಪುಗಳ ಮೂಲಕ ಗ್ರಾಮಸ್ಥರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಆನೆ ಅರಣ್ಯ ದಾಟುತ್ತಿದ್ದಂತೆ ಸಂದೇಶ ಬರುತ್ತದೆ, ಇದರಿಂದ ಎಚ್ಚೆತ್ತುಕೊಳ್ಳಲು ನೆರವಾಗುತ್ತದೆ.
ಸುಭಾಷ್, ಮುದಗನೂರು ನಿವಾಸಿ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260812-38-329596020