
ತುಮಕೂರು: ಜಿಲ್ಲೆಯಲ್ಲಿ 2.37 ಲಕ್ಷ ಮತದಾರರು ಹೊರಕ್ಕೆ
ತುಮಕೂರು: ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಅಡಿಯಲ್ಲಿ ಜಿಲ್ಲೆಯ 2.37 ಲಕ್ಷ ಮಂದಿ ಮತದಾರರು ಹೊರಗುಳಿದಿದ್ದಾರೆ. ಈ ಪ್ರಮಾಣ ಒಟ್ಟು ಮತದಾರರ ಪೈಕಿ ಶೇ 10.31ರಷ್ಟಿದೆ.
ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಎಲ್ಲ 22,98,879 ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸಲಾಗಿತ್ತು. ಈ ಪೈಕಿ ಅಂತಿಮವಾಗಿ 20,61,784 ಮತದಾರರ ಡಿಜಿಟಲೀಕರಣ ಕಾರ್ಯ ಪೂರ್ಣಗೊಂಡಿದೆ. ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಗರಿಷ್ಠ ಶೇ 93.37, ತುಮಕೂರು ನಗರ ಕ್ಷೇತ್ರದಲ್ಲಿ ಕನಿಷ್ಠ ಶೇ 72.74ರಷ್ಟು ಗಣಕೀಕರಣವಾಗಿದೆ.
ಎಸ್‌ಐಆರ್ ಪ್ರಕ್ರಿಯೆ ವೇಳೆ ಜಿಲ್ಲೆಯ 2,37,095 ಮಂದಿ ಮತದಾರರನ್ನು ಎಎಸ್‌ಡಿಡಿಒ ಪಟ್ಟಿಗೆ (ಮೃತ, ಸ್ಥಳಾಂತರ, ಒಂದಕ್ಕಿಂತ ಹೆಚ್ಚು ಕಡೆ ನೋಂದಣಿ, ಗೈರು, ಇತರೆ) ಸೇರಿಸಲಾಗಿದೆ. ಈ ಪೈಕಿ 49,084 ಮಂದಿ ಮೃತಪಟ್ಟಿದ್ದಾರೆ. ಸಂಪರ್ಕಕ್ಕೆ ಸಿಗದೇ ಗೈರಾದವರು 33,021 ಇದ್ದಾರೆ. ಶಾಶ್ವತವಾಗಿ ಸ್ಥಳಾಂತರಗೊಂಡವರಲ್ಲಿ 1,34,265 ಮತದಾರರು ಇದ್ದಾರೆ. ಒಂದಕ್ಕಿಂತ ಹೆಚ್ಚು ಕಡೆ ನೋಂದಣಿ 18,830 ಹಾಗೂ 1,895 ಮಂದಿಯನ್ನು ಇತರೆ ಪಟ್ಟಿಯಲ್ಲಿ ಗುರುತಿಸಲಾಗಿದೆ.
ಮತಪಟ್ಟಿಯಿಂದ ಹೊರಗುಳಿದವರ ಪೈಕಿ ತುಮಕೂರು ನಗರ ಕ್ಷೇತ್ರದ ಮತದಾರರು ಶೇ 27.26ರಷ್ಟಿದ್ದಾರೆ. ಇತರೆ ವಿಧಾನಸಭಾ ಕ್ಷೇತ್ರಗಳಿಗೆ ಹೋಲಿಕೆ ಮಾಡಿದಲ್ಲಿ ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರ ಸಂಖ್ಯೆ ಕೂಡ ಗರಿಷ್ಠವಾಗಿದೆ.
ಮೃತಪಟ್ಟವರು ಹೊರಗುಳಿಯುವುದು ಖಚಿತ. ಒಂದಕ್ಕಿಂತ ಹೆಚ್ಚು ಕಡೆ ನೋಂದಣಿ ಮಾಡಿಕೊಂಡವರು ಬರುವ ಸಂಭವ ಕೂಡ ಕಡಿಮೆ. ಕರಡು ಪಟ್ಟಿ ಪ್ರಕಟಗೊಂಡ ನಂತರ ಸ್ಥಳಾಂತರಗೊಂಡವರು ಹಾಗೂ ಗೈರಾದವರು ಅರ್ಜಿ ಸಲ್ಲಿಕೆಗೆ ಅವಕಾಶ ಇದೆ. ಈ ಪೈಕಿ ಎಷ್ಟು ಮಂದಿ ಅರ್ಜಿ ಸಲ್ಲಿಸುತ್ತಾರೆ ಎಂಬುದು ಮುಂದೆ ಗೊತ್ತಾಗಲಿದೆ.
ಜಿಲ್ಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಆ.18ಕ್ಕೆ ಮುಕ್ತಾಯಗೊಂಡಿದೆ. ಆ.24ರಂದು ಕರಡು ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ. ಆ.24ರಿಂದ ಸೆ.23ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಇದ್ದು, ಅವು ಅಕ್ಟೋಬರ್ 22ರೊಳಗೆ ವಿಲೇವಾರಿ ಆಗಲಿವೆ. ಅ.27ಕ್ಕೆ ಅಂತಿಮ ಪಟ್ಟಿ ಪ್ರಕಟಗೊಳ್ಳಲಿದೆ.
‘ಕರಡು ಮತದಾರರ ಪಟ್ಟಿ ಪ್ರಕಟಗೊಂಡ ದಿನದಿಂದ ಸೆ.23ರವರೆಗೆ ಅರ್ಜಿಸಲ್ಲಿಕೆಗೆ ಅವಕಾಶ ಇರಲಿದೆ. ಎಲ್ಲ ದಾಖಲೆ ಕೊಟ್ಟಿದ್ದರೂ ಹೆಸರು ಪಟ್ಟಿಯಿಂದ ಹೊರಗುಳಿದಿದ್ದರೆ ಅರ್ಜಿ ನಮೂನೆ–7 ಸಲ್ಲಿಸಬಹುದು. ಹೀಗೆ ಸಲ್ಲಿಕೆಯಾದ ಅರ್ಜಿ ನಮೂನೆ–6, 7, 8ನ್ನು ಅಕ್ಟೋಬರ್ 22ರೊಗಳಗೆ ವಿಲೇವಾರಿ ಮಾಡಲಾಗುವುದು’ ಎಂದು ಚುನಾವಣಾ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260822-17-892783786