ಕೋಲಾರ: ನಿಧಿ ಆಸೆಗೆ ಶಿಲಾಯುಗದ ಸಮಾಧಿಗಳು ಬಲಿ

ಕೋಲಾರ: ನಿಧಿ ಆಸೆಗೆ ಶಿಲಾಯುಗದ ಸಮಾಧಿಗಳು ಬಲಿ

ಕೋಲಾರ: ನಿಧಿ ಆಸೆಗೆ ಶಿಲಾಯುಗದ ಸಮಾಧಿಗಳು ಬಲಿ

ವೇಮಗಲ್: ಹೋಬಳಿ ವ್ಯಾಪ್ತಿಯ ರಾಜಕಲ್ಲಹಳ್ಳಿಯು ಶಿಲಾಯುಗದ ಮಹತ್ವದ ಐತಿಹಾಸಿಕ ತಾಣವಾಗಿದೆ. ಗ್ರಾಮದ ಸರ್ವೆ ಸಂಖ್ಯೆ 179ರ ಸುಮಾರು 160 ಎಕರೆಯ ಗೋಮಾಳ ಜಮೀನಿನ 20ರಿಂದ 30 ಎಕರೆಯಲ್ಲಿ 30–40ಕ್ಕೂ ಹೆಚ್ಚು ಅಪರೂಪದ ಶಿಲಾಯುಗ ಕಾಲದ ಶಿಲಾ ಸಮಾಧಿಗಳಿವೆ. ಇತ್ತೀಚಿನ ದಿನಗಳಲ್ಲಿ ಈ ಐತಿಹಾಸಿಕ ಸಮಾಧಿಗಳು ನಿಧಿಗಳ್ಳರ ಹಾವಳಿಯಿಂದ ಹಾನಿಗೀಡಾಗುತ್ತಿವೆ.

ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಶಿಲಾಯುಗದಲ್ಲಿ ಮಾನವ ಜೀವನ ನಡೆಸಿದ ಹಲವು ಕುರುಹುಗಳನ್ನು ಇಂದಿಗೂ ಕಾಣಬಹುದು. ಶಿಲಾಯುಗದ ಬೃಹತ್ ಸಮಾಧಿಗಳು ಅಥವಾ ಶಿಲಾ ಗೋರಿಗಳು, ಅಂದಿನ ಜನರ ಧಾರ್ಮಿಕ ನಂಬಿಕೆ, ಮರಣೋತ್ತರ ಜೀವನದ ಬಗೆಗಿನ ಕಲ್ಪನೆಗಳನ್ನು ಕಾಣಬಹುದು.

ಸಮಾಧಿಗಳನ್ನು ಡೋಲ್ಮೆನ್ (ಎರಡಕ್ಕಿಂತ ಹೆಚ್ಚು ಲಂಬವಾದ ಕಲ್ಲುಗಳ ಮೇಲೆ ದೊಡ್ಡ ಸಮತಲವಾದ ಕಲ್ಲು ಅಥವಾ ಚಪ್ಪಡಿ ಇರಿಸಿ ನಿರ್ಮಿಸಲಾದ ಪ್ರಾಚೀನ ಇತಿಹಾಸಪೂರ್ವ ಕಲ್ಲಿನ ಸ್ಮಾರಕ ಅಥವಾ ಸಮಾಧಿ) ಮಾದರಿಯಲ್ಲಿ ನಿರ್ಮಿಸಲಾಗಿದೆ.

ರಾಜಕಲ್ಲಹಳ್ಳಿ ಗ್ರಾಮದ ಬಳಿ ಶಿಲಾ ವೃತ್ತಗಳು ಕಂಡುಬರುತ್ತವೆ. ಪ್ರಾಚೀನ ಕಾಲದಲ್ಲಿ ಸತ್ತ ವ್ಯಕ್ತಿಯನ್ನು ಕುಣಿ ಅಥವಾ ಮೇಲ್ಭಾಗದಲ್ಲಿ ಕಲ್ಲಿನ ಕೋಣೆಯಂತೆ ರಚನೆ ಹೂಳಲಾಗುತ್ತಿತ್ತು. ಆ ಸಮಾಧಿ ಸ್ಥಳ ಗುರುತಿಸಲು, ಕಲ್ಲಿನ ಕೋಣೆಯ ರಕ್ಷಣೆಗಾಗಿ ಸುತ್ತಲೂ ಬೃಹತ್ ಕಲ್ಲುಗಳನ್ನು ವೃತ್ತಾಕಾರದಲ್ಲಿ ಜೋಡಿಸಲಾಗುತ್ತಿತ್ತು. ಕಾಲಕ್ರಮೇಣ ಹಾಗೂ ನಿಸರ್ಗದ ಬದಲಾವಣೆಗಳಿಂದ ಮೇಲ್ಮಟ್ಟದ ಹೆಚ್ಚಿನ ಕಲ್ಲುಗಳು ಮಣ್ಣಿನೊಳಗೆ ಹೂತುಹೋಗಿದ್ದು, ಕೆಲವೇ ಕೆಲವು ಕಲ್ಲುಗಳು ಮಾತ್ರ ವೃತ್ತಾಕಾರವಾಗಿ ಕಣ್ಣಿಗೆ ಕಾಣಿಸುತ್ತಿವೆ.

ಮಹಾರಾಜರ ಕಾಲದಲ್ಲಿ ‘ಕಲ್ಲುಹಳ್ಳಿ’ ಎಂದು ಕರೆಯಲ್ಪಡುತ್ತಿದ್ದ ಇಂದಿನ ರಾಜಕಲ್ಲಹಳ್ಳಿಯು ಚೋಳರು ಹಾಗೂ ವಿಜಯನಗರ ಸಾಮ್ರಾಜ್ಯದ ಕಾಲಘಟ್ಟದಲ್ಲಿ ಅತ್ಯಂತ ಮಹತ್ವದ ಯುದ್ಧ ಭೂಮಿಯೂ ಆಗಿತ್ತು. ಈ ಪ್ರದೇಶದಲ್ಲಿ ಇಂದಿಗೂ ಲಭ್ಯವಿರುವ ಹಲವಾರು ಶಿಲಾಶಾಸನಗಳು ರಾಜಕಲ್ಲಹಳ್ಳಿಯ ಸುದೀರ್ಘ ಹಾಗೂ ಭವ್ಯ ಇತಿಹಾಸವನ್ನು ಸಾರುತ್ತವೆ.

ಆದರೆ, ಇಷ್ಟೆಲ್ಲಾ ಅಪಾರ ಐತಿಹಾಸಿಕ ಮೌಲ್ಯ ಹೊಂದಿರುವ ಈ ಪುರಾತನ ಪರಂಪರೆಯು ಇಂದು ತೀವ್ರ ನಿರ್ಲಕ್ಷ್ಯ ಹಾಗೂ ನಿಧಿಗಳ್ಳರ ಅನಿಯಂತ್ರಿತ ಹಾವಳಿಯಿಂದ ವಿನಾಶದ ಅಂಚಿಗೆ ತಲುಪಿದೆ. ಈ ಪ್ರದೇಶಕ್ಕೆ ಯಾವುದೇ ಸೂಕ್ತ ರಕ್ಷಣೆ ಇಲ್ಲದ ಕಾರಣ, ನಿಧಿಗಳ್ಳರು ಇಲ್ಲಿ ಅಮೂಲ್ಯ ಸಂಪತ್ತು ಇದೆ ಎಂಬ ಭ್ರಮೆಯಲ್ಲಿ ಹಲವಾರು ಸಮಾಧಿಗಳನ್ನು ಅಗೆದು ಸಂಪೂರ್ಣವಾಗಿ ಹಾಳುಗೆಡವಿದ್ದಾರೆ. ಅಗೆದು ಹಾಳುಮಾಡಲಾದ ಸಮಾಧಿಗಳಲ್ಲಿ ಮಡಿಕೆ ಚೂರುಗಳು ಹಾಗೂ ಪ್ರಾಚೀನ ಆವಶೇಷಗಳು ಸಿಕ್ಕಿವೆ.

ಇತಿಹಾಸಕಾರರು ಮತ್ತು ಸರ್ಕಾರದ ಗಮನದಿಂದ ಮರೆಯಾಗಿರುವ ಈ ಅಮೂಲ್ಯ ಐತಿಹಾಸಿಕ ತಾಣದ ರಕ್ಷಣೆಗೆ ಪುರಾತತ್ವ ಇಲಾಖೆ ಮತ್ತು ಸಂಬಂಧಪಟ್ಟ ಆಡಳಿತವು ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು ಎಂಬುದು ಸ್ಥಳೀಯರ ಒತ್ತಾಯ. ಈ ಪ್ರದೇಶದಲ್ಲಿರುವ ಶಿಲಾ ಸಮಾಧಿಗಳು ಹಾಗೂ ಶಿಲಾ ವೃತ್ತಗಳ ಕಾಲಘಟ್ಟ, ಅವುಗಳ ರಚನೆ ಹಾಗೂ ಒಡಲಲ್ಲಿರುವ ಇತಿಹಾಸವನ್ನು ವೈಜ್ಞಾನಿಕವಾಗಿ ಮತ್ತು ಸಮಗ್ರವಾಗಿ ಅಧ್ಯಯನ ನಡೆಸಬೇಕು. ಈ ಪ್ರದೇಶವನ್ನು ‘ಸಂರಕ್ಷಿತ ಐತಿಹಾಸಿಕ ವಲಯ’ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260814-18-1820863188

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ