ಅಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ: ಯಾರಾಗ್ತಾರೆ ಕೋಲಾರ ಜಿಲ್ಲೆಯ ‘ಕೈ’ ಕಮಾಂಡ್‌?

ಅಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ: ಯಾರಾಗ್ತಾರೆ ಕೋಲಾರ ಜಿಲ್ಲೆಯ ‘ಕೈ’ ಕಮಾಂಡ್‌?

ಅಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ: ಯಾರಾಗ್ತಾರೆ ಕೋಲಾರ ಜಿಲ್ಲೆಯ ‘ಕೈ’ ಕಮಾಂಡ್‌?

ಕೋಲಾರ: ಕೋಲಾರ ಜಿಲ್ಲಾ ಕಾಂಗ್ರೆಸ್‌ಗೆ ಹೊಸ ಸಾರಥಿಯ ಹುಡುಕಾಟ ನಡೆದಿದ್ದು, ಪಟ್ಟಿ ದಿನೇದಿನೇ ಬೆಳೆಯುತ್ತಲೇ ಇದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇರುವ ಕಾರಣ ಈ ಸ್ಥಾನಕ್ಕೆ ಭಾರಿ ಪೈಪೋಟಿ ಇದ್ದು, ಜಿಲ್ಲೆಯ ‘ಕೈ‘ ಕಮಾಂಡ್‌ ಯಾರಾಗುತ್ತಾರೆ ಎಂಬ ಕುತೂಹಲ ಪಕ್ಷದ ಕಾರ್ಯಕರ್ತರಲ್ಲಿ ಹೆಚ್ಚಿದೆ.

ಜಿಲ್ಲೆಯ ವಿವಿಧ ತಾಲ್ಲೂಕುಗಳಿಗೆ ತೆರಳಿ ಸತತ ಸಭೆ ನಡೆಸುತ್ತಿರುವ ಎಐಸಿಸಿ ಜಿಲ್ಲಾ ವೀಕ್ಷಕ ರಾಮಕೃಷ್ಣನ್‌ ಓಜಾ ಹಸ್ತಕ್ಷೇಪ, ಶಿಫಾರಸುಗಳಿಗೆ ಮಣೆ ಹಾಕದೆ, ಕಾರ್ಯಕರ್ತರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ನೇಮಕ ಪ್ರಕ್ರಿಯೆಯಲ್ಲಿ ಹಿಂದಿನ ಎಲ್ಲಾ ಸಂಪ್ರದಾಯ ವಿಧಾನಗಳಿಗೆ ವಿದಾಯ ಹೇಳಿ ಯುವಪಡೆ ಕಟ್ಟಲು ಮುಂದಾಗಿದ್ದಾರೆ.

ಹಿರಿತನವೊಂದೇ ಆಯ್ಕೆಗೆ ಮಾನದಂಡವಲ್ಲ ಎಂದು ಸ್ಪಷ್ಟಪಡಿಸಿದ್ದು, ಯುವಶಕ್ತಿ ಜೊತೆಗೆ ಅವರ ಅರ್ಹತೆ, ಕಾರ್ಯಕ್ಷಮತೆ, ಜನಪ್ರಿಯತೆ, ಸಂಘಟನಾ ಶಕ್ತಿ, ಎಲ್ಲರನ್ನೂ ಜೊತೆಗೆ ಕರೆದೊಯ್ಯುವ ಸಾಮರ್ಥ್ಯದಂಥ ಅಂಶಗಳೂ ಸೇರಿವೆ. ಜೊತೆಗೆ ಜಾತಿ, ಧರ್ಮದ ಲೆಕ್ಕಾಚಾರವೂ ಇದೆ. ಆರು ಸಂಭಾವ್ಯ ಹೆಸರನ್ನು ಹೈಕಮಾಂಡ್‌ಗೆ ಶಿಫಾರಸು ಮಾಡಲಿದ್ದಾರೆ. ಆದರೆ, ಜಿಲ್ಲೆಯಲ್ಲಿ ದಶಕದಿಂದ ಇರುವ ಬಣ ರಾಜಕೀಯ ವೀಕ್ಷಕರನ್ನೂ ಗೊಂದಲಕ್ಕೆ ಸಿಲುಕಿಸಿದೆ.

ಸದ್ಯ ಮೂರೂವರೆ ವರ್ಷಗಳಿಂದ ಅಧ್ಯಕ್ಷರಾಗಿ ಮಾಲೂರಿನ ಸಿ.ಲಕ್ಷ್ಮಿನಾರಾಯಣ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ನೇತೃತ್ವದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾಲ್ವರು ಕಾಂಗ್ರೆಸ್‌ ಶಾಸಕರು ಆಯ್ಕೆಯಾಗಿದ್ದರು. ರಾಹುಲ್‌ ಗಾಂಧಿ ಪಾಲ್ಗೊಂಡಿದ್ದ ಎರಡು ಸಮಾವೇಶಗಳು ಯಶಸ್ವಿಯಾಗಿ ನಡೆದಿದ್ದವು.

ಆದರೆ, ಜಿಲ್ಲೆಯಲ್ಲಿ ಬಣ ರಾಜಕೀಯ ಹೆಚ್ಚುತ್ತಲೇ ಇದೆ. ಕಾಂಗ್ರೆಸ್‌ನ ಬಹುತೇಕ ಸಭೆಗಳು ಜಗಳವಿಲ್ಲದೆ ಮುಗಿಯುತ್ತಿಲ್ಲ. ಅಲ್ಲದೇ, ಶಾಸಕರು ತಮ್ಮ ಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಸಿದಾಗ ಜಿಲ್ಲಾ ಅಧ್ಯಕ್ಷರನ್ನು ಪರಿಗಣಿಸುವುದಿಲ್ಲ, ಪೋಸ್ಟರ್‌ಗಳಲ್ಲಿ ಭಾವಚಿತ್ರ ಹಾಕುವುದಿಲ್ಲ ಎಂಬ ದೂರುಗಳೂ ಇವೆ. ಪ್ರತಿಪಕ್ಷಗಳ ವಿರುದ್ಧದ ಪ್ರತಿಭಟನೆ ನಡೆದಾಗ, ಕಾಂಗ್ರೆಸ್‌ ಕಚೇರಿಯಲ್ಲಿ ಕಾರ್ಯಕ್ರಮ ನಡೆದಾಗ ಕೆಲ ಶಾಸಕರು ಬರುವುದಿಲ್ಲ ಎಂಬ ಟೀಕೆಯೂ ಇದೆ. ಇದು ಜಿಲ್ಲಾ ಅಧ್ಯಕ್ಷರ ತಲೆನೋವಿಗೂ ಕಾರಣವಾಗಿದೆ. ಹೊಸದಾಗಿ ಆಯ್ಕೆಯಾಗುವವರಿಗೆ ಸವಾಲಾಗಿದೆ.

ಜಿಲ್ಲಾಧ್ಯಕ್ಷರಾಗಲು ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಿದೆ. ಈ ಪೈಕಿ ಕೆ.ಎಚ್.ಮುನಿಯಪ್ಪ ಬೆಂಬಲಿಗರೇ ಹೆಚ್ಚಿದ್ದಾರೆ. ಜೊತೆಗೆ ಘಟಬಂಧನ್‌ ಬಣದ ಅಭ್ಯರ್ಥಿಗಳು ಇದ್ದಾರೆ. ಆಯಾ ಕ್ಷೇತ್ರದ ಶಾಸಕರ ಬೆಂಬಲದೊಂದಿಗೆ ಅಭ್ಯರ್ಥಿಗಳು ಕಸರತ್ತು ನಡೆಸುತ್ತಿದ್ದಾರೆ. ಆದರೆ, ಒಬ್ಬ ಮಹಿಳೆಯ ಹೆಸರೂ ಕೇಳಿ ಬರುತ್ತಿಲ್ಲ.

ಬಂಗಾರಪೇಟೆಯ ಕೆ.ಚಂದ್ರಾರೆಡ್ಡಿ ಈ ಹಿಂದೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಆದರೆ, ಅವರು ಮಧ್ಯದಲ್ಲಿ ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಹೋಗಿದ್ದರು. ಮತ್ತೆ ಕ್ಷೇತ್ರದ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ನೇತೃತ್ವದಲ್ಲಿ ತವರು ಪಕ್ಷಕ್ಕೆ ಮರಳಿದ್ದಾರೆ. ಅವರು ಶಾಸಕರ ನೆರವಿನಿಂದ ಅಧ್ಯಕ್ಷರಾಗಲು ಪ್ರಯತ್ನ ನಡೆಸುತ್ತಿದ್ದಾರೆ. ಮೊದಲೇ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ನಾರಾಯಣಸ್ವಾಮಿ ಯಾವ ನಿಲುವು ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲವಿದೆ.

ಹಾಲಿ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ ಹೆಸರೂ ಮತ್ತೆ ಕೇಳಿಬರುತ್ತಿದೆ. ಜಿಲ್ಲಾ ಕಾಂಗ್ರೆಸ್‌ ಎಸ್‌ಸಿ ಘಟಕದ ಅಧ್ಯಕ್ಷರಾಗಿರುವ ಕೆ.ಜಯದೇವ್‌ ಹೆಸರೂಮುಂಚೂಣಿಯಲ್ಲಿದೆ. ಇವರೆಲ್ಲಾ ಮುನಿಯಪ್ಪ ಬೆಂಬಲಿಗರು. ಅಲ್ಪಸಂಖ್ಯಾತ ಸಮುದಾಯದಿಂದ ಅಬ್ದುಲ್‌ ಖಯ್ಯೂಂ ಹೆಸರು ಕೂಡ ಮುನ್ನೆಲೆಯಲ್ಲಿದೆ. ಅವರು ಈ ಹಿಂದೆ ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಇತ್ತ ವೀಕ್ಷಕರು 50 ವರ್ಷದೊಳಗಿನವರಿಗೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗಿದ್ದಾರೆ. ಆದರೆ, ಹಲವು ಆಕಾಂಕ್ಷಿಗಳ ವಯಸ್ಸು 50 ದಾಟಿದೆ.

ಈಗಾಗಲೇ ಎಐಸಿಸಿ ವೀಕ್ಷಕರು ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಬಂಗಾರಪೇಟೆ, ಕೆಜಿಎಫ್‌ ಬಾಕಿ ಇದೆ. ಕೋಲಾರದಲ್ಲಿ ಶುಕ್ರವಾರ ಮಾಹಿತಿ ಸಂಗ್ರಹಿಸಲಿದ್ದಾರೆ. ಆ.16ರೊಳಗೆ ಎಐಸಿಸಿಗೆ ಪಟ್ಟಿ ಸಲ್ಲಿಸಬೇಕಿದೆ. ಆ.24ರೊಳಗೆ ಹೆಸರನ್ನು ಹೈಕಮಾಂಡ್‌ ಘೋಷಿಸುವ ನಿರೀಕ್ಷೆ ಇದೆ.

ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿರುವವರು

lಸಿ.ಲಕ್ಷ್ಮಿನಾರಾಯಣ (ಹಾಲಿ ಅಧ್ಯಕ್ಷ), ಮಧುಸೂದನ್, ಸತೀಶ್‌ ರಾಜಣ್ಣ (ಮಾಲೂರು)

lಕೆ.ಜಯದೇವ್‌, ಅಬ್ದುಲ್‌ ಖಯ್ಯೂಂ, ಊರುಬಾಗಿಲು ಶ್ರೀನಿವಾಸ್‌, ಪ್ರಸಾದ್‌ ಬಾಬು, ನಂದಿನಿ ಪ್ರವೀಣ್‌ (ಕೋಲಾರ)

l ಮ್ಯಾಕಲ ನಾರಾಯಣಸ್ವಾಮಿ (ಶ್ರೀನಿವಾಸಪುರ)

lರಾಮಲಿಂಗಾರೆಡ್ಡಿ (ಮುಳಬಾಗಿಲು)

lಕೆ.ಚಂದ್ರಾರೆಡ್ಡಿ (ಬಂಗಾರಪೇಟೆ)

ಕೋಲಾರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ಬಯಸಿರುವ ಅಭ್ಯರ್ಥಿಗಳು ಒಂದೊಂದು ಬಣಗಳಲ್ಲಿ ಗುರುತಿಸಿಕೊಂಡಿರುವ ಕಾರಣ ಯಾರೇ ‘ಕೈ’ ಕಮಾಂಡ್‌ ಆದರೂ ಮತ್ತೆ ಕಿತ್ತಾಟ ಖಚಿತ ಎಂಬಂಥ ಪರಿಸ್ಥಿತಿ ನೆಲೆಸಿದೆ.

ಜಿಲ್ಲಾ ಅಧ್ಯಕ್ಷರನ್ನು ಆಯ್ಕೆ ಮಾಡಲು ಬಂದಿರುವ ಎಐಸಿಸಿ ವೀಕ್ಷಕರಿಗೂ ಇದು ತಲೆನೋವು ತಂದೊಡ್ಡಿದೆ. ಈಗಾಗಲೇ ನಡೆದಿರುವ ಮುಖಂಡರು ಹಾಗೂ ಕಾರ್ಯಕರ್ತರ ಸಭೆಗಳಲ್ಲಿ ಭಿನ್ನಾಭಿಪ್ರಾಯ, ಬಣ ರಾಜಕೀಯ ವ್ಯಕ್ತವಾಗಿರುವುದು ಅವರ ಗಮನಕ್ಕೆ ಬಂದಿದೆ.

ಜಿಲ್ಲಾಧ್ಯಕ್ಷರಿಗೆ ಮತ್ತಷ್ಟು ಶಕ್ತಿ

ಕಾಂಗ್ರೆಸ್‌ನ ಹೊಸ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ ಆಗುವವರಿಗೆ ಇನ್ನುಮುಂದೆ ಹೆಚ್ಚಿನ ಶಕ್ತಿ ದೊರೆಯಲಿದೆ. ಎಲ್ಲಾ ಚುನಾವಣೆಗಳಲ್ಲಿ ಟಿಕೆಟ್‌ ಹಂಚಿಕೆಯಲ್ಲೂ ಅವರ ಮಾತು ನಡೆಯಲಿದೆ. ಶಾಸಕರಷ್ಟೇ ‍ಪ್ರಭಾವವನ್ನು ಅಧ್ಯಕ್ಷರು ಹೊಂದಿರುತ್ತಾರೆ. ಹೊಸ ಅಧ್ಯಕ್ಷರಿಗೆ ತರಬೇತಿ ನೀಡಲಾಗುತ್ತದೆ. ಈ ಸಂಬಂಧ ಎಐಸಿಸಿಯಿಂದ ಸೂಚನೆ ಇದೆ. ಜಿಲ್ಲೆಯಲ್ಲಿ ಎಐಸಿಸಿ ವೀಕ್ಷಕರು ತಾಲ್ಲೂಕುವಾರು ಸಭೆ ನಡೆಸಿ ಕಾರ್ಯಕರ್ತರ ಅಭಿಪ್ರಾಯ ಆಲಿಸುತ್ತಿದ್ದಾರೆ. ಈ ಸ್ಥಾನಕ್ಕೆ ಹಲವು ಆಕಾಂಕ್ಷಿಗಳು ಇದ್ದಾರೆ

ಸಿ.ಲಕ್ಷ್ಮಿನಾರಾಯಣ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260814-18-948539979

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ