
ಗುರುವಾಯೂರಿನಲ್ಲಿ ಮದುವೆ: ಕೇರಳ ಮೂಲದ ಪತ್ನಿ ಕನಸು ನನಸಾಗಿಸಿದ ಸ್ಕಾಟ್ಲೆಂಡ್ ಸಂಸದ
ತ್ರಿಶೂರ್: ಸ್ಕಾಟ್ಲೆಂಡ್ ಸಂಸತ್ ಸದಸ್ಯ (ಎಂಎಸ್‌ಪಿ) ಮಾರ್ಟಿನ್ ಡೇ (55) ಅವರು ಕೇರಳ ಮೂಲದ ತಮ್ಮ ಪತ್ನಿ ನಿತಿನ್ ಚಂದ್ (49) ಅವರೊಂದಿಗೆ ಗುರುವಾಯೂರಿನ ಶ್ರೀಕೃಷ್ಣ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.
ಗುರುವಾಯೂರು ಸನ್ನಿಧಿಯಲ್ಲೇ ಮದುವೆಯಾಗಬೇಕೆಂಬ ಪತ್ನಿ ನಿತಿನ್ ಅವರ ಬಹುಕಾಲದ ಆಸೆಯನ್ನು ಈ ಮೂಲಕ ಈಡೇರಿಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಪ್ರಸ್ತುತ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಎರ್ನಾಕುಲಂ ಜಿಲ್ಲೆಯ ಪಿರವಂ ಮೂಲದ ನಿತಿನ್ ಚಂದ್ ಹಾಗೂ ಸ್ಕಾಟಿಷ್ ನ್ಯಾಷನಲ್ ಪಾರ್ಟಿ ಮುಖಂಡ ಮಾರ್ಟಿನ್ ಡೇ 2016ರಲ್ಲಿ ಬ್ರಿಟನ್‌ನಲ್ಲಿ ಕಾನೂನು ಪ್ರಕಾರ ಮದುವೆಯಾಗಿದ್ದರು.
ಆದರೆ, ಗುರುವಾಯೂರಿನಲ್ಲಿ ಕೇರಳದ ಸಾಂಪ್ರದಾಯಿಕ ಶೈಲಿಯಲ್ಲಿ ಮದುವೆಯಾಗಬೇಕೆಂಬುದು ನಿತಿನ್ ಅವರ ಬಹುಕಾಲದ ಕನಸಾಗಿತ್ತು. 2018ರ ಕೇರಳ ಪ್ರವಾಹ ಹಾಗೂ ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಮತ್ತಷ್ಟು ವಿಳಂಬವಾಗಿತ್ತು.
ಮಂಗಳವಾರ ದೇವಸ್ಥಾನದ ಆವರಣದ ಸಭಾಂಗಣದಲ್ಲಿ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ವಿವಾಹ ಸಮಾರಂಭ ನೆರವೇರಿತ್ತು. ಮಾರ್ಟಿನ್ ಡೇ ದಂಪತಿ ಕೇರಳದ ಸಾಂಪ್ರದಾಯಿಕ ಶೈಲಿಯ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮಾರ್ಟಿನ್ ಪಂಚೆ ಧರಿಸಿದ್ದರೆ ನಿತಿನ್ ಕಸವು ಸೀರೆಯಲ್ಲಿ ಗಮನ ಸೆಳೆದಿದ್ದಾರೆ.
ಎರ್ನಾಕುಲಂ ಜಿಲ್ಲೆಯ ಪಿರವಂ ಮೂಲದ ನಿತಿನ್, ಐಟಿ ಮ್ಯಾನೇಜ್‌ಮೆಂಟ್ ಉನ್ನತ ವ್ಯಾಸಂಗಕ್ಕಾಗಿ 2008ರಲ್ಲಿ ಬ್ರಿಟನ್‌ಗೆ ತೆರಳಿದ್ದರು. ಅಲ್ಲಿ ಅವರಿಗೆ ಮಾರ್ಟಿನ್ ಡೇ ಅವರ ಪರಿಚಯವಾಗಿತ್ತು.