
22 ಮಂದಿಗೆ ಗಲ್ಲು: ಯುಪಿ ನ್ಯಾಯಾಧೀಶರ ನ್ಯಾಯಾಲಯದಿಂದ 100 ಕೊಲೆ ಪ್ರಕರಣ ವರ್ಗಾವಣೆ
ಮುಜಫರ್‌ನಗರ: ಕಳೆದ ನಾಲ್ಕು ತಿಂಗಳಲ್ಲಿ 10 ಪ್ರಕರಣಗಳಲ್ಲಿ 22 ಮಂದಿಗೆ ಗಲ್ಲು ಶಿಕ್ಷೆ ವಿಧಿಸಿದ್ದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದ್ದ ಸುಮಾರು 100 ಕೊಲೆ ಪ್ರಕರಣಗಳನ್ನು ಬೇರೆ ನ್ಯಾಯಾಲಯಗಳಿಗೆ ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಆಡಳಿತಾತ್ಮಕ ಆದೇಶದ ಮೂಲಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ನ್ಯಾಯಾಲಯಕ್ಕೆ ಪ್ರಕರಣಗಳನ್ನು ವರ್ಗಾಯಿಸಲಾಗಿದೆ.
ನ್ಯಾಯಾಲಯವು ಮರಣದಂಡನೆ ವಿಧಿಸುತ್ತಿರುವ ಪ್ರಮಾಣದ ಕುರಿತು ವಕೀಲರು ಹಾಗೂ ಕಕ್ಷಿದಾರರಲ್ಲಿ ಆತಂಕ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪ್ರಮೋದ್ ತ್ಯಾಗಿ ಹೇಳಿದ್ದಾರೆ.
ರವಿಕುಮಾರ್ ಅವರು 2025ರ ನವೆಂಬರ್‌ನಿಂದ ಮುಜಫರ್‌ನಗರದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
2022ರಲ್ಲಿ ವಾರಾಣಸಿಯ ಜ್ಞಾನವಾಪಿ ಸಂಕೀರ್ಣದ ವಿಡಿಯೊಗ್ರಫಿ ಸಮೀಕ್ಷೆಗೆ ಆದೇಶ ನೀಡಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದ ನ್ಯಾಯಾಧೀಶ ರವಿಕುಮಾರ್ ಕಠಿಣ ತೀರ್ಪುಗಳಿಂದಲೇ ಹೆಸರುವಾಸಿಯಾಗಿದ್ದಾರೆ.
ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಒಳಪಡುವ ಈ ಪ್ರಕರಣಗಳನ್ನು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರ ನ್ಯಾಯಾಲಯದಿಂದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ವೀರೇಂದ್ರ ಕುಮಾರ್ ಸಿಂಗ್ ಅವರ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಸರ್ಕಾರಿ ವಕೀಲರು ಪಿಟಿಐಗೆ ತಿಳಿಸಿದ್ದಾರೆ.