
ಉದ್ಯೋಗಖಾತ್ರಿ ಸೌಲಭ್ಯ ಪಡೆಯಲು ಜಾಬ್‌ಕಾರ್ಡ್ ಮಾಡಿಸಬೇಕೇ, ಹೀಗಿದೆ ಸರಳ ಪ್ರಕ್ರಿಯೆ
ಬೆಂಗಳೂರು: ಕರ್ನಾಟಕದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಸೌಲಭ್ಯಗಳನ್ನು ಪಡೆದುಕೊಳ್ಳಲು ನೀವಿನ್ನೂ ಜಾಬ್ ಕಾರ್ಡ್ ಮಾಡಿಸಿಕೊಂಡಿಲ್ಲವೇ, ಈಗಾಗಲೇ ಇರುವ ಜಾಬ್ ಕಾರ್ಡ್ ಅನ್ನು ಉನ್ನಕತೀರಿಸಿ ಈ ವರ್ಷಕ್ಕೂ ಸೌಲಭ್ಯ ವಿಸ್ತರಿಸಿಕೊಳ್ಳಬೇಕೇ,
ಹಾಗಿದ್ದರೆ ಈ ಕ್ರಮಗಳನ್ನು ಪಾಲಿಸಿ. ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಜಾಬ್ ಕಾರ್ಡ್ ನೀಡಲು ಒಂದು ತಿಂಗಳ ಕಾಲ ಮೇಳವನ್ನು ಆರಂಭಿಸಿದೆ. ಪ್ರತಿ ಪಂಚಾಯಿತಿಯಲ್ಲೂ ಜಾಬ್ ಮೇಳಗಳು ನಡೆಯಲಿದ್ದು, ಇದಕ್ಕಾಗಿ ಕೆಲವು ಸೂಚನೆಗಳನ್ನು ಪಾಲಿಸುವಂತೆ ತಿಳಿಸಲಾಗಿದೆ.
ಕೇಂದ್ರ ಸರ್ಕಾರವು ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ವಿಬಿ–ಜಿ ರಾಮ್–ಜಿ ಯೋಜನೆಯಾಗಿ ಬದಲಾಯಿಸಿದ್ದು, ಇದರಡಿ ಕರ್ನಾಟಕದಲ್ಲೂ ಉದ್ಯೋಗ ನೀಡುವ ಪ್ರಕ್ರಿಯೆ ಆರಂಭಗೊಂಡಿದೆ. ಹಿಂದಿನ ವರ್ಷಗಳವರೆಗೂ ವರ್ಷಕ್ಕೆ 100 ದಿನ ಕಡ್ಡಾಯವಾಗಿ ಉದ್ಯೋಗ ನೀಡಲಾಗುತ್ತಿತ್ತು. ಈಗ ಯೋಜನೆಯಲ್ಲಿ ಕೆಲವು ಬದಲಾವಣೆ ಮಾಡಲಾಗಿದ್ದು, ಉದ್ಯೋಗ ದಿನಗಳು ಹಾಗೂ ಕೂಲಿ ಮೊತ್ತವನ್ನು ಹೆಚ್ಚಿಸಲಾಗಿದೆ. ಹಲವಾರು ಕೆಲಸಗಳನ್ನೂ ಇದರಡಿ ಸೇರಿಸಲಾಗಿದೆ.
ಕರ್ನಾಟಕದಲ್ಲಿ ಜುಲೈ 1ರಿಂದಲೇ ಈ ಸಾಲಿನ ಉದ್ಯೋಗ ಖಾತ್ರಿ ಯೋಜನೆ ಶುರುವಾಗಿದೆ. ಜಾಬ್ ಕಾರ್ಡ್, ಅನುದಾನ ಹಂಚಿಕೆ ವಿಚಾರದಲ್ಲಿ ಇರುವ ಗೊಂದಲಗಳನ್ನು ಬಗೆಹರಿಸಿ ಜನರಿಗೆ ಉದ್ಯೋಗ ನೀಡಲು ಸೂಚನೆ ನೀಡಲಾಗಿದ್ದರೂ ಜನರಲ್ಲಿ ಜಾಗೃತಿಯೂ ಕಡಿಮೆಯಿದೆ.
ಈ ಕಾರಣದಿಂದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಅವರು ಆಗಸ್ಟ್ 15ರಿಂದ ಸೆ.15ರವರೆಗೆ ಜಾಬ್ ಕಾರ್ಡ್ ಮೇಳವನ್ನು ಆರಂಭಿಸಿ ಅಗತ್ಯ ಇರುವವರಿಗೆ ಕಾರ್ಡ್ ನೀಡುವಂತೆ ಸೂಚನೆ ನೀಡಿದ್ದಾರೆ.
ಜಿಲ್ಲೆ ಹಾಗೂ ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಗಸ್ಟ್ 15ರಿಂದ ಸೆಪ್ಟೆಂಬರ್ 15ರವರೆಗೆ ಜಾಬ್ ಕಾರ್ಡ್ ಮೇಳ ನಡೆಯಲಿದೆ. ಐಇಸಿ ಸಂಯೋಜಕರು, ಪಿಡಿಒ ಹಾಗೂ ಸಿಬ್ಬಂದಿ, ಗ್ರಾಮ ಕಾಯಕ ಮಿತ್ರರು, ಮಹಿಳಾ ಸ್ವಸಹಾಯ ಸಂಘಗಳು, ಸಮುದಾಯ ಸಂಘಟನೆಗಳು, ಜಲಾನಯನ ಅಭಿವೃದ್ಧಿ ಸಂಘಗಳು ಮತ್ತು ಹಾಲು ಉತ್ಪಾದಕರ ಸಂಘಗಳ ಸದಸ್ಯರು ಜಂಟಿಯಾಗಿ ಮನೆ–ಮನೆಗೆ ಭೇಟಿ ನೀಡಲಿದ್ದಾರೆ
ಹೊಸ ಕಾಯ್ದೆಯಡಿ ವಾರ್ಷಿಕ ಉದ್ಯೋಗ ಖಾತರಿಯನ್ನು 100 ರಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ. ದಿನಗೂಲಿ ₹370ರಿಂದ ₹382ಕ್ಕೆ ಹೆಚ್ಚಿಸಲಾಗಿದ್ದು, ಅರ್ಹ ಕುಟುಂಬವು 125 ದಿನ ಉದ್ಯೋಗ ಪಡೆದರೆ ₹47,750ವರೆಗೆ ಕೂಲಿ ಪಡೆಯಬಹುದು ಎನ್ನುವುದು ಅಧಿಕಾರಿಗಳ ವಿವರಣೆ,
ಕಾರ್ಡ್ ಮಾಡಿಸಲು ಏನು ಬೇಕು
* ಹೊಸದಾಗಿ ಕಾರ್ಡ್ ಮಾಡಿಸಬಯಸುವವರು ಕಡ್ಡಾಯವಾಗಿ ಆಧಾರ್ ಕಾರ್ಡ್ ಹೊಂದಿರಬೇಕು
* ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯ ಪಾಸ್ ಬುಕ್ ಬೇಕು.
* ಈ ಎರಡೂ ದಾಖಲೆಗಳೊಂದಿಗೆ ಸಮೀಪದ ಪಂಚಾಯಿತಿ ಕಚೇರಿಗೆ ಹೋದರೆ ಐದು ನಿಮಿಷದಲ್ಲಿ ನೊಂದಣಿ ಮಾಡಿಸಿಕೊಡುತ್ತಾರೆ
* ಅಲ್ಲಿಯೇ ಭಾವಚಿತ್ರವನ್ನು ತೆಗೆದುಕೊಂಡು ಹೊಸದಾಗಿ ಕಾರ್ಡ್ ಕೊಡುವ ವ್ಯವಸ್ಥೆಯನ್ನೂ ಮಾಡುತ್ತಾರೆ.
* ಅರ್ಹತೆಯನ್ನು ಸ್ಥಳದಲ್ಲೇ ಪರಿಶೀಲಿಸಿ ಜಾಬ್ ಕಾರ್ಡ್ ವಿತರಿಸಲಾಗುತ್ತದೆ.
* ಯೋಜನೆಯಡಿ ನೋಂದಣಿಯಾಗದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಶೇಷಚೇತನರು, ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಮಹಿಳಾ ಪ್ರಧಾನ ಕುಟುಂಬಗಳನ್ನು ಗುರುತಿಸಿ, ನಮೂನೆ–1ರಲ್ಲಿ ಅರ್ಜಿ ಪಡೆದು ಹೊಸ ಜಾಬ್ ಕಾರ್ಡ್ ನೀಡಲಾಗುತ್ತದೆ
* ಶೇ 40ಕ್ಕಿಂತ ಹೆಚ್ಚಿನ ಅಂಗವೈಕಲ್ಯ ಹೊಂದಿರುವ ವಿಶೇಷಚೇತನರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಉದ್ಯೋಗ ಚೀಟಿ ನೀಡುವ ಯೋಜನೆಯನ್ನೂ ರೂಪಿಸಲಾಗಿದೆ.