
ಈದ್ ಮಿಲಾದ್ ಆಚರಣೆಗೆ ಹಟ್ಟಿ ಸಜ್ಜು - ಮುಸ್ಲಿಂ ಸಮುದಾಯದ ಸಿದ್ಧತೆ
ಹಟ್ಟಿ ಚಿನ್ನದ ಗಣ: ಬುಧವಾರ (ಆ.26) ಈದ್ ಮಿಲಾದ್ ಹಬ್ಬ ನಡೆಯಲಿದ್ದು, ಮುಸ್ಲಿಂ ಸಮುದಾಯದವರು ಸಿದ್ಧತೆ ಮಾಡಿಕೊಂಡಿದ್ದಾರೆ.
ಗುರುಗುಂಟಾ, ಕೋಠಾ, ನಿಲೋಗಲ್, ಗೆಜ್ಜಲಗಟ್ಟಾ, ಗೌಡೂರು ಸೇರಿ ವಿವಿಧ ಗ್ರಾಮಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಮುಸ್ಲಿಂ ಸಮುದಾಯದವರು ವಾಸವಿರುವ ಪ್ರದೇಶಗಳು ಹಾಗೂ ಇತರೆ ಕಡೆಗಳಲ್ಲಿ ಹಸಿರು ಬಣ್ಣದ ಧ್ವಜಗಳನ್ನು ಕಟ್ಟಲಾಗಿದೆ. ಮಸೀದಿಗಳನ್ನು ಅಲಂಕಾರ ಮಾಡಲಾಗಿದೆ.
ಪಟ್ಟಣದ ಕಾಕಾನಗರದಿಂದ ಪಾಮನಕೆಲ್ಲೂರು ಕ್ರಾಸ್‌ವರೆಗೆ ಧ್ವಜಗಳನ್ನು ಕಟ್ಟಲಾಗಿದೆ. ಕಾಕಾನಗರ ಬಳಿಯ ಈದ್ಗಾ ಮೈದಾನವನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ವೃತ್ತದ ಒಂದು ಬದಿಯಲ್ಲಿ ಹಬ್ಬದ ಶುಭಾಶಯ ಕೋರುವ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ.
ಖರೀದಿ ಜೋರು: ಮಾರುಕಟ್ಟೆಗಳಲ್ಲಿ ಟೋಪಿಗಳು, ಧ್ವಜಗಳು ಹಾಗೂ ಇತರೆ ವಸ್ತುಗಳ ಮಾರಾಟ ನಡೆಯುತ್ತಿದೆ. ಮುಸ್ಲಿಂ ಸಮುದಾಯದವರು ಅಂಗಡಿಗಳಿಗೆ ಭೇಟಿ ನೀಡಿ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ.
ಶಾಂತಿ ಸಭೆ: ಈದ್ ಮಿಲಾದ್ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸ್ ಇಲಾಖೆಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಶಾಂತಿ ಸಭೆಗಳನ್ನು ನಡೆಸಲಾಗುತ್ತಿದೆ. ‘ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಶಾಂತಿ ಕದಡಿದರೆ, ಕಾನೂನು ಕ್ರಮ ಕೈಳ್ಳಬೇಕಾಗುತ್ತದೆ’ ಎಂದು ಹಟ್ಟಿ ಠಾಣೆಯ ಪಿಐ ಶಿವಾನಂದ ಗಾಣಿಗೆರ್ ತಿಳಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260826-32-589959831