
ಸಫಾಯಿ ಕರ್ಮಚಾರಿ ಜನಜಾಗೃತಿ ಜಾಥಾ ನಾಳೆ ತುಮಕೂರಿಗೆ ಆಗಮನ
ತುಮಕೂರು: ಮಲಹೊರುವ ಪದ್ಧತಿ ಸಂಪೂರ್ಣ ನಿರ್ಮೂಲನೆಯಾಗಬೇಕು, ಗುರುತಿಸಿರುವ ಸ್ಕ್ಯಾವೆಂಜರ್ಸ್ ಪ್ರತಿ ಕುಟುಂಬಕ್ಕೂ ಮನೆ, ಉದ್ಯೋಗ, ಆರೋಗ್ಯ, ಶಿಕ್ಷಣ ಸೌಲಭ್ಯಕ್ಕೆ ಆಗ್ರಹಿಸಿ ಕರ್ನಾಟಕ ಸಫಾಯಿ ಕರ್ಮಚಾರಿ ಕಾವಲು ಸಮಿತಿ ಆರಂಭಿಸಿರುವ ರಾಜ್ಯ ಮಟ್ಟದ ಜನ ಜಾಗೃತಿ ಜಾಥಾ ಆ.28ರಂದು ನಗರಕ್ಕೆ ಬರಲಿದೆ.
ಕೈಯಿಂದ ಮಲ ಬಾಚಿಸುವುದು, ಅಪಾಯಕಾರಿ ಹಾಗೂ ಅಮಾನವೀಯ ಕೃತ್ಯಗಳಲ್ಲಿ ನಿಯೋಜಿಸುವುದು ಮನುಷ್ಯನ ಘನತೆಗೆ ವಿರುದ್ಧವಾಗಿದೆ. ಮಲಹೊರುವ ವೃತ್ತಿಯಲ್ಲಿ ನೇಮಕ ನಿಷೇಧ ಹಾಗೂ ಅವರ ಪುನರ್ವಸತಿ ಕಾಯ್ದೆ 2013ರ ಜಾರಿಗೆ ಬಂದಿದೆ. ಈ ಕಾಯ್ದೆಯನ್ನು ರಾಜ್ಯದಾದ್ಯಂತ ಸಮಗ್ರವಾಗಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಜನಜಾಗೃತಿ ನಡೆಸಲಾಗುತ್ತಿದೆ ಎಂದು ಎಸ್‌ಕೆಕೆಎಸ್ ಜಿಲ್ಲಾ ಸಂಚಾಲಕ ಸಿದ್ಧಗಂಗಯ್ಯ ತಿಳಿಸಿದ್ದಾರೆ.
ಮಲಸ್ವಚ್ಛತಾ ಕೆಲಸವನ್ನು ಯಂತ್ರೋಪಕರಣಗಳ ಮೂಲಕ ನಿರ್ವಹಿಸುವುದನ್ನು ಕಡ್ಡಾಯಗೊಳಿಸಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯವಿರುವ ಸ್ಥಳಗಳಲ್ಲಿ ಸೂಕ್ತ ಯಂತ್ರೋಪಕರಣಗಳನ್ನು ತಕ್ಷಣವೇ ಅಳವಡಿಸಬೇಕು ಎಂದು ಒತ್ತಾಯಿಸುವುದಾಗಿ ಹೇಳಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260827-17-391400272