
ಬರದ ಛಾಯೆಯಲ್ಲೂ ರೈತನ ಕೈಹಿಡಿದ ನೈಸರ್ಗಿಕ ಕೃಷಿ: ವಾರ್ಷಿಕ ₹15 ಲಕ್ಷ ಗಳಿಕೆ
ಗೂಳೂರು (ಬಾಗೇಪಲ್ಲಿ): ಮಳೆ ಕೊರತೆಯಿಂದ ತಾಲ್ಲೂಕಿನಲ್ಲಿ ತೀವ್ರ ಬರಗಾಲದ ಛಾಯೆ ಆವರಿಸಿದೆ. ಇಂಥ ಬರದ ಸಂದಿಗ್ಧ ಸ್ಥಿತಿಯಲ್ಲೂ ತಾಲ್ಲೂಕಿನ ಮುಮ್ಮಡಿವಾರಿಪಲ್ಲಿ ಗ್ರಾಮದ ಎಸ್. ಹರಿನಾಥರೆಡ್ಡಿ ಮಿಶ್ರಬೆಳೆ, ನೈಸರ್ಗಿಕ ಕೃಷಿ ಮಾಡುವ ಮೂಲಕ ವಾರ್ಷಿಕ ರೂಪಾಯಿ ಲಾಭ ಗಳಿಸುತ್ತಿದ್ದಾರೆ.
ತಾಲ್ಲೂಕಿನ ಗೂಳೂರು ಹೋಬಳಿಯ ಮಾರ್ಗಾನುಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಮ್ಮಡಿವಾರಿಪಲ್ಲಿ ಆಂಧ್ರಪ್ರದೇಶದ ಗಡಿ ಅಂಚಿನಲ್ಲಿದೆ. ಹರಿನಾಥರೆಡ್ಡಿ ಅವರು ಎಂಜಿನಿಯರಿಂಗ್ ಪದವೀಧರರಾಗಿದ್ದರೂ, ಕೃಷಿಯನ್ನೇ ಜೀವಾಳವಾಗಿಸಿಕೊಂಡಿದ್ದಾರೆ. ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಬಹುಬೆಳೆಗಳನ್ನು ಬೆಳೆಯುವ ಮೂಲಕ ಇತರ ರೈತರಿಗೂ ಮಾದರಿಯಾಗಿದ್ದಾರೆ.
ನಾಲ್ಕು ಎಕರೆಯಲ್ಲಿ ಒಂದೇ ಬೆಳೆ ಬೆಳೆದು ಅದರ ಮೇಲೆ ಮಾತ್ರವೇ ಅವಲಂಬಿಸುವ ಬದಲಿಗೆ ಜಮೀನನ್ನು ವೈಜ್ಞಾನಿಕವಾಗಿ ಸಂಯೋಜಿಸಿ ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ. ಪ್ರತಿ ಋತುವಿನಲ್ಲಿ ಟೊಮೆಟೊ, ಬದನೆಕಾಯಿ, ಕ್ಯಾರೆಟ್, ಮೂಲಂಗಿ, ಬೆಂಡೆಕಾಯಿ, ಕ್ಯಾಪ್ಸಿಕಂ, ಸೋರೆಕಾಯಿ ಹಾಗೂ ಸೊಪ್ಪು ಸೇರಿದಂತೆ 30ಕ್ಕೂ ಹೆಚ್ಚು ತರಕಾರಿಗಳನ್ನು ಬೆಳೆದಿದ್ದಾರೆ. ಒಂದೇ ಬೆಳೆಯ ಮೇಲೆ ಅವಲಂಬನೆಯಾದಲ್ಲಿ, ಆ ಬೆಳೆ ಕೈಕೊಟ್ಟರೆ ಎದುರಾಗಬಹುದಾದ ಆರ್ಥಿಕ ಸಂಕಷ್ಟವನ್ನು ತಪ್ಪಿಸಲು ಹಾಗೂ ಮಣ್ಣಿನ ಜೀವವೈವಿಧ್ಯವನ್ನು ಹೆಚ್ಚಿಸಲು ಬಹುಬೆಳೆ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾಗಿ ಅವರು ಹೇಳುತ್ತಾರೆ.
ಮಧ್ಯವರ್ತಿಗಳ ಅವಲಂಬನೆ ಇಲ್ಲದೆ ಬೆಳೆದ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುತ್ತಾರೆ. ಇದರಿಂದಾಗಿ ತಾವು ಉತ್ಪಾದಿಸುವ ಯಾವುದೇ ವಸ್ತುವಿನ ಲಾಭವನ್ನು ಸಂಪೂರ್ಣವಾಗಿ ತಾವೇ ಪಡೆಯುತ್ತಾರೆ. ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆದ ರೈತರ ಸಂತೆ ಹಾಗೂ ವಿವಿಧ ಪ್ರದರ್ಶನಗಳಲ್ಲಿ ತಾವು ಅಳವಡಿಸಿದ ಬಹುಬೆಳೆ ಪದ್ಧತಿ ತರಕಾರಿಗಳನ್ನು ನೇರವಾಗಿ ಗ್ರಾಹಕರಿಗೆ ಪರಿಚಯಿಸಿದ್ದಾರೆ. ಕಡಿಮೆ ಎಕರೆ ಪ್ರದೇಶದಲ್ಲಿ ವೈಜ್ಞಾನಿಕ ಯೋಜನೆ, ಬೆಳೆ ವೈವಿಧ್ಯತೆ, ಮೌಲ್ಯವರ್ಧನೆ ಮತ್ತು ನೇರ ಮಾರುಕಟ್ಟೆ ಮೂಲಕ ಉತ್ತಮ ಆದಾಯ ಗಳಿಸುತ್ತಿದ್ದಾರೆ.
ಬಹುಬೆಳೆ ತರಕಾರಿಗಳಿಂದ ವಾರ್ಷಿಕ ₹10.20 ಲಕ್ಷ, ಮಾವು ಮತ್ತು ಇತರೆ ಕೃಷಿ ಉತ್ಪನ್ನಗಳಿಂದ ₹2 ಲಕ್ಷ, ನುಗ್ಗೆ ಪುಡಿ ಮತ್ತು ಮೌಲ್ಯವರ್ಧಿತ ಉತ್ಪನ್ನಗಳಿಂದ ₹5 ಲಕ್ಷ ಸೇರಿ ವಾರ್ಷಿಕ ₹17.28 ಲಕ್ಷದ ವರಮಾನ ಗಳಿಸುತ್ತಾರೆ. ಈ ಪೈಕಿ ₹2 ಲಕ್ಷ ವೆಚ್ಚ ಮಾಡುತ್ತಾರೆ. ಉಳಿದ ₹15 ಲಕ್ಷ ನಿವ್ವಳ ಲಾಭ ಎನ್ನುತ್ತಾರೆ ಹರಿನಾಥರೆಡ್ಡಿ.
ಯಾವುದೇ ರೈತ ನನ್ನ ಜಮೀನಿಗೆ ಭೇಟಿ ನೀಡಿ, ಕೃಷಿ ಪದ್ಧತಿಯನ್ನು ನೋಡಿ ಕಲಿಯಬಹುದು. ಯುವಕರು ಕೃಷಿಯತ್ತ ಆಸಕ್ತಿ ತೋರಿಸಬೇಕು. ರೈತರು ನೈಸರ್ಗಿಕ ಕೃಷಿ ಮಾಡಬೇಕು. ಮಣ್ಣಿನ ಆರೋಗ್ಯ, ರೈತನ ಸಮೃದ್ಧಿ, ಗ್ರಾಹಕರ ಆರೋಗ್ಯವು ನನ್ನ ಕೃಷಿಯ ಮೂರು ಪ್ರಮುಖ ಗುರಿಗಳು. ಒಟ್ಟಿಗೆ ಸಾಧಿಸಿದ ಫಲವೇ ಭೂ ಸಂಕಲ್ಪ ಆಗ್ಯಾರ್ನಿಕ್ಸ್ ಎಂದು ರೈತ ಎಸ್.ಹರಿನಾಥರೆಡ್ಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ನೈಸರ್ಗಿಕ ಕೃಷಿ ಎಂದರೆ ಕೇವಲ ರಾಸಾಯನಿಕಗಳನ್ನು ಬಳಸದೆ ಬೆಳೆ ಬೆಳೆಯುವುದಷ್ಟೇ ಅಲ್ಲ. ಅದು ಸಂಪೂರ್ಣ ಉದ್ಯಮದ ಮಾದರಿ. ಬೆಳೆ ವೈವಿಧ್ಯತೆ ಅಪಾಯ ಕಡಿಮೆ ಮಾಡಲಿದೆ. ಮೌಲ್ಯವರ್ಧನೆ ರೈತರ ಆದಾಯ ಹೆಚ್ಚಸಲಿದೆ. ನೇರ ಮಾರುಕಟ್ಟೆಯು ಗ್ರಾಹಕರ ವಿಶ್ವಾಸವು ಹೆಚ್ಚಸಲಿದೆ. ಕೃಷಿಯಲ್ಲಿ ಯಶಸ್ಸು ಪಡೆಯಲು ದೊಡ್ಡ ಜಮೀನು ಬೇಕಿಲ್ಲ. ಆದರೆ ಸರಿಯಾದ ಜ್ಞಾನ, ಯೋಜನೆ, ಪರಿಶ್ರಮ ಮತ್ತು ಮಾರುಕಟ್ಟೆಯ ಅರಿವು ಬೇಕು. ಮಳೆ ಕೈಕೊಟ್ಟಿದೆ ಎಂದು ಬಿತ್ತನೆ ಮಾಡದೆ ಕೈಹೊತ್ತು ಕೂರುವ ಬದಲಿಗೆ ಬಹುಬೆಳೆಗಳನ್ನು ಬೆಳೆಯಬೇಕು ಎಂದು ಹೇಳಿದರು.
ಉತ್ಪನ್ನಗಳ ಮೌಲ್ಯವರ್ಧನೆಗೆ ಒತ್ತು
ರೈತನ ಆದಾಯ ದ್ವಿಗುಣ ಅಥವಾ ಹೆಚ್ಚಳಕ್ಕೆ ರೈತ ಬೆಳೆ ಬೆಳೆಯುವುದಕ್ಕೆ ಸೀಮಿತವಾದರೆ ಸಾಲದು. ಜೊತೆಗೆ, ತಾನು ಬೆಳೆದ ಬೆಳೆಯನ್ನು ಮೌಲ್ಯವರ್ಧನೆ ಮಾಡುವ ಕೌಶಲವನ್ನೂ ಅರಿತಿರಬೇಕು. ಇದನ್ನು ಅರಿತಿರುವ ಹರಿನಾಥರೆಡ್ಡಿ, ತಾವು ಬೆಳೆದ ಬೆಳೆಗಳ ಮೌಲ್ಯವರ್ಧನೆಗೂ ಹೆಚ್ಚು ಒತ್ತು ನೀಡುತ್ತಾರೆ.
ನುಗ್ಗೆಕಾಯಿ ಎಲೆಗಳಿಂದ ನುಗ್ಗೆ ಸೊಪ್ಪಿನ ಪುಡಿ, ನುಗ್ಗೆ ಚಹಾ, ಬ್ಯಾಗ್‌ಗಳು, ಎನರ್ಜಿ ಬಾರ್, ನುಗ್ಗೆ ಲಡ್ಡು, ನುಗ್ಗೆ ಜ್ಯೂಸ್‌ನಂಥ ಉತ್ಪನ್ನಗಳನ್ನು ಸ್ವತಃ ತಾವೇ ಸಿದ್ಧಪಡಿಸುತ್ತಾರೆ. ಜೊತೆಗೆ ಮಾವಿನಹಣ್ಣು, ಸಿರಿಧಾನ್ಯ ಆಧಾರಿತ ಆಹಾರ ಉತ್ಪನ್ನ ಹಾಗೂ ಜೇನುತುಪ್ಪದಂತಹ ವೈವಿಧ್ಯಮಯ ಉತ್ಪನ್ನಗಳನ್ನು ತಯಾರಿಸುತ್ತಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260812-16-1121429019