
ಮೈಸೂರು: ಜನರ ವಿರೋಧದ ನಡುವೆಯೂ ದಸರಾದಲ್ಲಿ ಕಂಬಳ ಆಯೋಜನೆಗೆ ಸಿದ್ಧತೆ
ಮೈಸೂರು: ಜನರ ತೀವ್ರ ವಿರೋಧದ ನಡುವೆಯೂ ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಗೆ ಸಿದ್ಧತೆ ನಡೆಯುತ್ತಿವೆ. ಸರ್ಕಾರವು ಅಧಿಕಾರಿಗಳ ಸಮಿತಿಯನ್ನೂ ರಚಿಸಿದೆ.
ಸೈಕ್ಲಿಂಗ್ ವೆಲೋಡ್ರೋಂ ನಿರ್ಮಾಣಕ್ಕಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಮೈಸೂರು ಅಭಿವೃದ್ಧಿ ಪ್ರಾಧಿಕಾರವು ಹಸ್ತಾಂತರಿಸಿರುವ ಸಾತಗಳ್ಳಿಯ ಜಮೀನಿನಲ್ಲಿ ಕಂಬಳ ನಡೆಸಲು ಸಿದ್ಧತೆ ಆರಂಭಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿಯ ತಜ್ಞರ ತಂಡ ಆಗಮಿಸಿ ಮಾರ್ಗದರ್ಶನ ನೀಡುತ್ತಿದೆ.
ಕೋಣಗಳ ಓಡಾಡಲು ಬೇಕಾಗುವ ಓಟದ ಟ್ರ್ಯಾಕ್ (ಕರೆ) ನಿರ್ಮಾಣಕ್ಕಾಗಿ ಜಾಗ ಗುರುತಿಸಲಾಗಿದೆ. ಕೋಣಗಳನ್ನು ಬಿಡುವ ಜಾಗ (ಗಂತ್) ಕ್ಕೂ ಸ್ಥಳ ಗುರುತಿಸಿ ಜೆಸಿಬಿ ಮೂಲಕ ಸ್ವಚ್ಛಗೊಳಿಸಲಾಗಿದ್ದು, ಅದಕ್ಕಾಗಿ ಮರ ತೆರವುಗೊಳಿಸಲೂ ಸಿದ್ದತೆ ನಡೆಸಿದ್ದಾರೆ. ಜಮೀನಿನ ಸುತ್ತಲಿನ ಗಿಡಗಂಟಿಗಳನ್ನು ಸ್ವಚ್ಛಗೊಳಿಸಿದ್ದಾರೆ.
ಕಂಬಳ ಆಯೋಜನೆಗೆ ಯಥೇಚ್ಛವಾಗಿ ನೀರಿನ ಅಗತ್ಯತೆ ಇದ್ದು, ಅದಕ್ಕಾಗಿ ಕೊಳವೆಬಾವಿ ಕೊರೆಸಲಾಗುತ್ತಿದೆ. ಬುಧವಾರ ತಜ್ಞರು ಆಗಮಿಸಿ ಪಾಯಿಂಟ್ ಮಾಡಿದರು.
ಡಿಸಿಎಫ್ ಪರಮೇಶ್ ಅವರು ಸೈಕ್ಲಿಂಗ್ ವೆಲೋಡ್ರೋಂಗಾಗಿ ಇರುವ ಜಮೀನಿನಲ್ಲಿ 18 ಮರ ಕಡಿಯಲು ಅನುಮತಿ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.
ಮೂರು ಮರಗಳನ್ನು ಕಡಿಯಲು ಅನುಮತಿ ನೀಡಿದ್ದು. 15 ದಿಡ ನೆಡಬೇಕೆಂದು ಸೂಚಿಸಿದ್ದೇನೆ ಎಂದು ಡಿಸಿಎಫ್ ಪರಮೇಶ್ ತಿಳಿಸಿದರು.
ಸಮಿತಿ ರಚನೆ: ಬರಗಾಲದ ನಡುವೆ ಕಂಬಳ ಆಯೋಜನೆ ಮಾಡಬಾರದು ಎಂಬ ಜನರ ಕೂಗಿನ ನಡುವೆಯೇ ಸರ್ಕಾರ ಕಂಬಳ ಆಯೋಜನೆಗೆ ಅಧಿಕಾರಿಗಳ ಸಮಿತಿಯನ್ನು ನೇಮಿಸಿದೆ.
ಸಮಿತಿ ಉಪ ವಿಶೇಷಾಧಿಕಾರಿಯಾಗಿ ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್ ಕುಮಾರ್, ಕಾರ್ಯಾಧ್ಯಕ್ಷರಾಗಿ ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ, ಸಹ ಕಾರ್ಯಾಧ್ಯಕ್ಷರಾಗಿ ಡಿಸಿಎಫ್ ಪರಮೇಶ್, ಕಾರ್ಯದರ್ಶಿ ಗಳಾಗಿ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಪದ್ಮನಾಭ, ಪಾಲಿಕೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮೈತ್ರಿ ಅವರನ್ನು ನೇಮಿಸಲಾಗಿದೆ.
ಕಂಬಳ ಆಯೋಜನೆಗೆ ವಿರೋಧ ವ್ಯಕ್ತಪಡಿಸಿ ಪರಿಸರ, ರೈತ ಹಾಗೂ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ‘ಪ್ರಜಾವಾಣಿ’ ನಡೆಸಿದ ಜನಾಭಿಮತದಲ್ಲೂ ಕಂಬಳ ಆಯೋಜನೆಗೆ ವಿರೋಧ ವ್ಯಕ್ತಪಡಿಸಿ, ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇವೆಲ್ಲದರ ನಡುವೆಯೇ ಸರ್ಕಾರ ಕಂಬಳ ಆಯೋಜಿಸಲೇ ಬೇಕು ಎಂದು ಹಠ ತೊಟ್ಟಿದೆ.
ಸಿದ್ದರಾಮಯ್ಯ ಭೇಟಿ: ಕಂಬಳ ಆಯೋಜನೆ ವಿರೋಧಿಸುತ್ತಿರುವ ಸಂಘಟನೆಗಳ ಮುಖಂಡರು ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಗುರುವಾರ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿದ್ದಾರೆ.
ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ದಲಿತ ಸಂಘರ್ಷ ಸಮಿತಿ ಮುಖಂಡ ಇಂದೂಧರ ಹೊನ್ನಾಪುರ, ಗುರುಪ್ರಸಾದ್ ಕೆರಗೋಡು, ಪರಿಸರಕ್ಕಾಗಿ ನಾವು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ, ಪ್ರಗತಿಪರ ಸಂಘಟನೆಗಳ ಪರವಾಗಿ ಪ್ರೊ. ಕಾಳಚನ್ನೇಗೌಡ ನಿಯೋಗ ಭೇಟಿ ನೀಡಿ ಕಂಬಳ ಆಯೋಜನೆ ನಿಲ್ಲಿಸುವಂತೆ ಮನವಿ ಸಲ್ಲಿಸಲಿದ್ದಾರೆ.
ಮರ–ಗಿಡ ಕಡಿಯದೆ ಕಂಬಳ: ಅಶೋಕ್ ರೈ
ಕಂಬಳಕ್ಕಾಗಿ ಮರ– ಗಿಡ ಕಡಿಯುವ ಅವಶ್ಯಕತೆ ಇಲ್ಲ. ಅವುಗಳನ್ನು ಉಳಿಸಿಕೊಂಡು, ಪೊದೆಗಳನ್ನಷ್ಟೇ ತೆಗೆದು ಸ್ವಚ್ಛಗೊಳಿಸಲಾಗಿದೆ ಎಂದು ಕಂಬಳ ಆಯೋಜನೆಯ ಜವಬ್ದಾರಿ ವಹಿಸಿಕೊಂಡಿರುವ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ‘ಪ್ರಜಾವಾಣಿ’ಗೆ ತಿಳಿಸಿದರು.
ಮೈಸೂರು ದಸರಾದಲ್ಲಿ ಕಂಬಳ ನಡೆಯಬೇಕು ಎಂಬುದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕನಸು. ಅದರ ಜವಾಬ್ದಾರಿಯನ್ನು ನನಗೆ ನೀಡಿದ್ದಾರೆ. ಅದ್ದೂರಿಯಾಗಿ ಕಂಬಳ ನಡೆಸಲಿದ್ದು, ಸುಮಾರು 150 ಜೊತೆ ಕೋಣಗಳು ಮೈಸೂರು ಕಂಬಳಕ್ಕೆ ನೋಂದಣಿ ಮಾಡಿಕೊಂಡಿವೆ ಎಂದರು.
ಕಂಬಳದ ತಜ್ಞರ ತಂಡ ಮೈಸೂರಿಗೆ ತೆರಳಿ ಓಟದ ಟ್ರಾಕ್ ಹಾಗೂ ಇನ್ನಿತರೆ ಕೆಲಸ ಮಾಡಲು ನಿರ್ದೇಶನ ನೀಡುತ್ತಿದೆ ಎಂದು ವಿವರಿಸಿದರು.
ಕೆರೆ–ಕಟ್ಟೆ ಜಾಗದಲ್ಲಿ ಸಿದ್ಧತೆ
ಜಲಮೂಲ ಉಳಿಸುವುದು ಸರ್ಕಾರದ ಕರ್ತವ್ಯ. ಅದರಲ್ಲಿ ಲೋಪ ವಾದಾಗ ಪ್ರಶ್ನಿಸುವುದು ಸಾರ್ವಜನಿಕರ ಹಕ್ಕು. ಈಗ ಕೆರೆ– ಕಟ್ಟೆ ಜಾಗದಲ್ಲಿ ಕಂಬಳಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಪರಿಸರಕ್ಕಾಗಿ ನಾವು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ ಆರೋಪಿಸಿದರು.
ಮೈಸೂರು ಅಭಿವೃದ್ಧಿ ಪ್ರಾಧಿಕಾರವು 25.28 ಎಕರೆ ವಿಸ್ತೀರ್ಣದ ಜಮೀನಿನಲ್ಲಿ ಕೆರೆ–ಕಟ್ಟೆ ಜಾಗ ಹೊರತುಪಡಿಸಿ, 17.37 ಎಕರೆ ಜಾಗವನ್ನು ಸೈಕ್ಲಿಂಗ್ ವೆಲೋಡ್ರೋಂ ನಿರ್ಮಾಣಕ್ಕಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಉಲ್ಲೇಖಿಸಿದೆ. ಆದರೆ ಈಗ ಕಂಬಳಕ್ಕಾಗಿ ಕೆರೆ–ಕಟ್ಟೆಯ ಜಾಗವನ್ನೇ ಬಳಸುತ್ತಿರುವುದು ತಪ್ಪು ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260820-39-1721941919