
ಲಿಂಗಸುಗೂರು: ಸರ್ಕಾರಿ ಶಾಲೆಯಲ್ಲಿ 207 ವಿದ್ಯಾರ್ಥಿಗಳಿಗೆ ಎರಡೇ ಕೊಠಡಿ
ಲಿಂಗಸುಗೂರು: ಶಾಲೆಯ ಎರಡೇ ಕೊಠಡಿಯಲ್ಲಿ 207 ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ದುಸ್ಥಿತಿ ತಾಲ್ಲೂಕಿನ ಸುಣಕಲ್ ಗ್ರಾಮದ ಸರ್ಕಾರಿ ಹಿರಿಯ ಶಾಲೆಯಲ್ಲಿ ಕಂಡು ಬಂದಿದೆ.
ಸುಣಕಲ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದರೂ, ಎಲ್‌ಕೆಜಿ, ಯುಕೆಜಿ ಹಾಗೂ 1ರಿಂದ 7ನೇ ತರಗತಿವರೆಗೆ ಒಟ್ಟು 207 ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಒಟ್ಟು ನಾಲ್ಕು ಕೊಠಡಿಗಳಿವೆ, ಇದರಲ್ಲಿ ಎರಡು ಮಾತ್ರ ತರಗತಿ ಕೊಠಡಿಗಳು, ಒಂದು ಕಂಪ್ಯೂಟರ್ ಕೊಠಡಿ, ಮತ್ತೊಂದು ಕಚೇರಿಯನ್ನಾಗಿ ಬಳಕೆ ಮಾಡಲಾಗುತ್ತಿದೆ. ಆದರೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ತರಗತಿ ಕೊಠಡಿಗಳು ಇಲ್ಲಿ ಇಲ್ಲದಾಗಿದೆ.
ಖಾಸಗಿ ಮನೆಯಲ್ಲಿ ಪಾಠ: ಶಾಲೆಯಲ್ಲಿ ತರಗತಿ ಕೊಠಡಿ ಕೊರತೆಯಿಂದಾಗಿ ಶಾಲಾ ಆವರಣದಲ್ಲಿ ಮರದ ಕಳಗೆ ಪಾಠ ಮಾಡಲಾಗುತ್ತಿದೆ. ಆದರೆ ಮಳೆ ಬಂದಾಗ ಪಾಠಕ್ಕೆ ಮತ್ತಷ್ಟು ಸಮಸ್ಯೆಯಾಗಲಿದೆ. ಕೊಠಡಿಯ ವರಾಂಡದಲ್ಲಿ ಹಾಗೂ ಕಳೆದ ಎರಡು ವರ್ಷಗಳಿಂದ ಗ್ರಾಮದ ಖಾಸಗಿ ಮನೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ತರಗತಿ ನಡೆಸಬೇಕಾದ ಅನಿವಾರ್ಯತೆ ಶಿಕ್ಷಕರಿಗೆ ಎದುರಾಗಿದೆ.
‘ಕೊಠಡಿ ನಿರ್ಮಾಣಕ್ಕೆ ಶಾಲೆಯಲ್ಲಿ ಸಾಕಷ್ಟು ಸ್ಥಳಾವಕಾಶವಿದ್ದರೂ ಕೊಠಡಿ ಮಂಜೂರು ಮಾಡುವಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ತಾಲ್ಲೂಕಿನ ಕೆಲವೊಂದು ಶಾಲೆಯಲ್ಲಿ ಸ್ಥಳಾವಕಾಶ ಇಲ್ಲದಿದ್ದರೂ ಹೆಚ್ಚುವರಿ ಕೊಠಡಿ ಮಂಜೂರು ಮಾಡಲಾಗುತ್ತಿದೆ. ಆದರೆ, ಇಲ್ಲಿ ಅಗತ್ಯತೆ ಹಾಗೂ ಮಕ್ಕಳು ಅನುಭವಿಸುವ ತೊಂದರೆ ಬಗ್ಗೆ ಅಧಿಕಾರಿಗಳ ಗಮನಕ್ಕಿದ್ದರೂ ಕೊಠಡಿ ಮಂಜೂರು ಆಗುತ್ತಿಲ್ಲ’ ಎಂದು ಪೋಷಕರು ಹೇಳುತ್ತಾರೆ.
ಶಾಲೆಯಲ್ಲಿ ತರಗತಿ ಕೊಠಡಿ ಕೊರತೆ ಜೊತೆಗೆ ಶೌಚಾಲಯಕ್ಕೂ ವಿದ್ಯಾರ್ಥಿಗಳು ಬಯಲು ಪ್ರದೇಶವನ್ನೇ ಆಶ್ರಯಿಸಬೇಕಾಗಿದೆ. ಕೃತಗ್ಯತಾ ಟ್ರಸ್ಟ್ ವತಿಯಿಂದ ಶೌಚಾಲಯ ನಿರ್ಮಿಸಿಕೊಲಾಗುತ್ತಿದೆ.
ಒಂದು ಕೊಠಡಿಯಲ್ಲಿ ಒಂದಕ್ಕಿಂತ ಹೆಚ್ಚು ತರಗತಿಗಳನ್ನು ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾದರೆ ವಿದ್ಯಾರ್ಥಿಗಳ ಕಲಿಕೆಗೆ ಸಹಜವಾಗಿಯೇ ತೊಂದರೆಯಾಗುತ್ತದೆ. ಶಿಕ್ಷಕರು ಪಾಠ ಮಾಡುವಾಗ ಮತ್ತೊಂದು ತರಗತಿಯ ವಿದ್ಯಾರ್ಥಿಗಳ ಚಟುವಟಿಕೆಗಳಿಂದ ಗಮನ ಬೇರೆಡೆ ಸೆಳೆಯುವ ಸಾಧ್ಯತೆ ಇದೆ. ಸಣ್ಣ ಮಕ್ಕಳಿಗೆ ಏಕಾಗ್ರತೆಯಿಂದ ಕಲಿಯಲು ಸೂಕ್ತ ವಾತಾವರಣವೂ ಇಲ್ಲದಂತಾಗಿದೆ. ಕೊಠಡಿಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳನ್ನು ನಿರ್ವಹಿಸುವುದು ಶಿಕ್ಷಕರಿಗೂ ದೊಡ್ಡ ಸವಾಲಾಗಿದೆ.
ಶಾಲೆಗೆ ಹೆಚ್ಚುವರಿ ತರಗತಿ ಕೊಠಡಿಗಳು, ಸುಸಜ್ಜಿತ ಬಿಸಿಯೂಟದ ಕೊಠಡಿ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಶೀಘ್ರವಾಗಿ ಒದಗಿಸಬೇಕು. ಮಕ್ಕಳನ್ನು ಬಯಲಿನಲ್ಲಿ ಕೂರಿಸಿ ಪಾಠ ಮಾಡುವ ಪರಿಸ್ಥಿತಿಗೆ ಶಾಶ್ವತ ಪರಿಹಾರ ನೀಡಲು ಶಾಸಕರು ಹಾಗೂ ಅಧಿಕಾರಿಗಳು ಮುಂದಾಗಬೇಕು’ ಎಂದು ಗ್ರಾಮಸ್ಥ ಮಹೆಬೂಬ ಸಾಬ ಒತ್ತಾಯಿಸಿದ್ದಾರೆ.
ಮೆಟ್ಟಿಲು ಕೆಳಗೆ ಬಿಸಿಯೂಟ ತಯಾರಿ
ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರಿಸಲು ಅಡುಗೆ ಕೋಣೆ ಇಲ್ಲದಾಗಿದೆ. ಮೆಟ್ಟಿಲು ಕೆಳಗೆ ನಿತ್ಯವೂ ಬಿಸಿಯೂಟ ತಯಾರಿಸಲಾಗುತ್ತಿದೆ. ಮಳೆಬಂದಾಗ ಬಿಸಿಯೂಟದ ಸಿಬ್ಬಂದಿ ತೊಂದರೆ ಪಡುವಂತಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260820-32-1227679276