
ಉಕ್ತಲೇಖನ ಸ್ಪರ್ಧೆ ವಿಜೇತರಿಗೆ ಪುರಸ್ಕಾರ, ಕನ್ನಡ ಭಾಷೆ ಅಭ್ಯಾಸಕ್ಕೆ ಒತ್ತು
ಕನಕಪುರ:‘ಮಾತೃ ಭಾಷೆಯಾದ ಕನ್ನಡ ಭಾಷೆಯಲ್ಲಿ ಓದುವುದು ಮತ್ತು ಬರೆಯುವುದನ್ನು ಚೆನ್ನಾಗಿ ಅಭ್ಯಾಸ ಮಾಡಿಕೊಳ್ಳಬೇಕು. ತಪ್ಪಿಲ್ಲದಂತೆ ಸ್ಪಷ್ಟವಾಗಿ ಬರೆಯಬೇಕೆಂದು’ ನಿವೃತ್ತ ಮುಖ್ಯ ಶಿಕ್ಷಕ ದಾಸರಾಜ್ ತಿಳಿಸಿದರು.
ಇಲ್ಲಿನ ಐಪಿಪಿ ಆಸ್ಪತ್ರೆ ಪಕ್ಕದ ನೀಲಕಂಠೇಶ್ವರ ಶಾಲೆಯಲ್ಲಿ ಜಿಲ್ಲಾ ಲೇಖಕರ ವೇದಿಕೆ ವತಿಯಿಂದ ಗುರುವಾರ ನಡೆದ ಉಕ್ತಲೇಖನ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದರು.
‘ವಿದ್ಯಾರ್ಥಿಗಳು ಪ್ರಾರಂಭದಲ್ಲಿಯೇ ಕಾಗುಣಿತದಲ್ಲಿ ತಪ್ಪಿಲ್ಲದಂತೆ ಬರೆಯುವುದನ್ನು ಅಭ್ಯಾಸ ಮಾಡಿಕೊಂಡಾಗ ಭಾಷೆ ಮೇಲೆ ಹಿಡಿತ ಬೆಳೆಯುತ್ತದೆ. ಅದಕ್ಕಾಗಿ ಜಿಲ್ಲಾ ಲೇಖಕರ ವೇದಿಕೆಯು ಮಕ್ಕಳಿಗೆ ಉಕ್ತಲೇಖನ ಸ್ಪರ್ಧೆಯನ್ನು ನಡೆಸಿದ್ದಾರೆ’ ಎಂದು ತಿಳಿಸಿದರು.
ಜಿಲ್ಲಾ ಲೇಖಕರ ವೇದಿಕೆ ಅಧ್ಯಕ್ಷ ಕೂಗಿ ಗಿರಿಯಪ್ಪ, ‘ಮಕ್ಕಳಿಗೆ ಭಾಷೆ ಮೇಲೆ ಹಿಡಿತ ಸಾಧಿಸಲು ಮತ್ತು ಕಾಗುಣಿತ ತಪ್ಪಿಲ್ಲದಂತೆ ಬರೆಯುವುದನ್ನು ಅಭ್ಯಾಸ ಮಾಡಿಸಲು ಉಕ್ತಲೇಖನ ಸ್ಪರ್ಧೆಯನ್ನು ನಡೆಸುತ್ತಿರುವುದಾಗಿ’ ಹೇಳಿದರು.
ಶಾಲೆ ಮುಖ್ಯ ಶಿಕ್ಷಕ ಚನ್ನನರಸಿಂಹಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿಗಳಾದ ಎಲ್ಲೇಗೌಡ ಬೆಸಗರಹಳ್ಳಿ, ಚಿಕ್ಕಮರಿಗೌಡ, ವಿಜಯ್ ಕುಮಾರ್, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260807-14-1646751416