ಮಳೆ ಕೊರತೆ; ರಾಮನಗರದಲ್ಲಿ ಶೇ 1.37ರಷ್ಟು ಮಾತ್ರ ಬಿತ್ತನೆ

ಮಳೆ ಕೊರತೆ; ರಾಮನಗರದಲ್ಲಿ ಶೇ 1.37ರಷ್ಟು ಮಾತ್ರ ಬಿತ್ತನೆ

ಮಳೆ ಕೊರತೆ; ರಾಮನಗರದಲ್ಲಿ ಶೇ 1.37ರಷ್ಟು ಮಾತ್ರ ಬಿತ್ತನೆ

ರಾಮನಗರ: ಮಳೆರಾಯನ ಮುನಿಸಿನಿಂದಾಗಿ ಜಿಲ್ಲೆಯಲ್ಲಿ ಬರದ ತೀವ್ರತೆ ಹೆಚ್ಚಾಗಿದೆ. ಇದುವರೆಗೆ ನಡೆದಿರುವ ಮುಂಗಾರು ಹಂಗಾಮಿನ ಬಿತ್ತನೆ ಕೇವಲ ಶೇ 1.37ರಷ್ಟು ಮಾತ್ರ! ತೋಟಗಾರಿಕೆ, ಕೃಷಿ ಹಾಗೂ ಹೈನುಗಾರಿಕೆ ಪ್ರಧಾನವಾಗಿರುವ ಜಿಲ್ಲೆಯನ್ನು ಆವರಿಸಿರುವ ಬರದಿಂದಾಗಿ ಅನ್ನದಾತರು ಕಂಗಾಲಾಗಿದ್ದಾರೆ.

ಕೃಷಿ ಇಲಾಖೆಯು ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಾದ್ಯಂತ 80,758 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದೆ. ಆದರೆ, ಇದುವರೆಗೆ ಕೇವಲ 1,106 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಕಾರ್ಯ ನಡೆದಿದೆ. ಮಳೆ ಕೊರತೆಯಿಂದಾಗಿ ರೈತರು ಇನ್ನೂ ಕೆಲ ಬೆಳೆಗಳ ಬಿತ್ತನೆಗೆ ಮುಂದಾಗಿಲ್ಲ.

‘ರಾಗಿಯನ್ನು ಜಿಲ್ಲೆಯಲ್ಲಿ ಅತಿ ಹೆಚ್ಚು ಬೆಳೆಯಲಾಗುತ್ತದೆ. ಆದರೆ, ಈ ಬೆಳೆಯ ಬಿತ್ತನೆ ಗುರಿಯು 65 ಸಾವಿರ ಹೆಕ್ಟೇರ್ ಇದ್ದು, ಇಡೀ ಜಿಲ್ಲೆಯ ಬಿತ್ತನೆ ಗುರಿ ಪೈಕಿ ಮುಕ್ಕಾಲು ಪಾಲು ರಾಗಿಯದ್ದೇ ಇದೆ. ಆದರೆ, ಇದುವರೆಗೆ 130 ಹೆಕ್ಟೇರ್‌ನಲ್ಲಷ್ಟೇ ರಾಗಿ ಬಿತ್ತನೆ ನಡೆದಿದ್ದು ಶೇ 0.2ರಷ್ಟು ನಿರಾಶದಾಯಕ ಪ್ರಗತಿ ಕಂಡಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಅಂಬಿಕಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಗಿ ಬಿಟ್ಟರೆ ಜಿಲ್ಲೆಯಲ್ಲಿ ಅತಿ ಹೆಚ್ಚು ಭತ್ತ ಬೆಳೆಯಲಾಗುತ್ತದೆ. ಈ ಸಲ ಭತ್ತದ ಬಿತ್ತನೆ ಗುರಿ ಪ್ರದೇಶ 3,005 ಹೆಕ್ಟೇರ್ ಆಗಿದೆ. ಆದರೆ, ಮಳೆ ಇಲ್ಲದೆ ಇದುವರೆಗೆ ಬಿತ್ತನೆಯೇ ನಡೆದಿಲ್ಲ. ಆರಂಭದಲ್ಲೇ ಮುಂಗಾರು ಮಳೆ ಕೈ ಕೊಟ್ಟ ಕಾರಣದಿಂದಾಗಿ ರೈತರು ಬಿತ್ತನೆ ಮಾಡಿಲ್ಲ. ಸುಮಾರು 1,440 ಹೆಕ್ಟೇರ್ ಬಿತ್ತನೆ ಗುರಿಯ ಜೋಳ ಪ್ರದೇಶದಲ್ಲೂ ಬಿತ್ತನೆ ನಡೆದಿಲ್ಲ. ಹರಳು, ಹುಚ್ಚೆಳ್ಳು, ಸಾಸಿವೆ ಬೆಳೆಗಳ ಬಿತ್ತನೆಯೂ ಶೂನ್ಯವಾಗಿದೆ’ ಎಂದು ಹೇಳಿದರು.

ಮಳೆಯಾಶ್ರಿತವೇ ಹೆಚ್ಚು: ‘ಜಿಲ್ಲೆಯ ಕೃಷಿ ಪ್ರದೇಶವು ಬಹುತೇಕ ಮಳೆಯಾಶ್ರಿತವಾಗಿದೆ. ರಾಗಿ, ಭತ್ತ, ಮುಸುಕಿನ ಜೋಳ, ಜೋಳ, ತೊಗರಿ, ಹುರುಳಿ, ಅಲಸಂದೆ, ಅವರೆ ಸೇರಿದಂತೆ ಜಿಲ್ಲೆಯಲ್ಲಿ ಪ್ರಮುಖವಾಗಿ ಬೆಳೆಯುವ ಸುಮಾರು 15 ಬಗೆಯ ಬೆಳೆಗಳಿಗೆ ಇಲ್ಲಿನ ರೈತರು ಮಳೆಯನ್ನೇ ಆಶ್ರಯಿಸಿದ್ದಾರೆ’ ಎಂದು ಅಂಬಿಕಾ ಪರಿಸ್ಥಿತಿ ಬಿಚ್ಚಿಟ್ಟರು.

‘ಕನಕಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು 11,023 ಹೆಕ್ಟೇರ್ ಬಿತ್ತನೆ ಪ್ರದೇಶದ ಗುರಿ ಹೊಂದಿದ್ದು, ಆ ಪೈಕಿ ಇದುವರೆಗೆ ಕೇವಲ 240 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ನಡೆದಿದೆ. ಅತಿ ಕಡಿಮೆ 9,208 ಹೆಕ್ಟೇರ್ ಬಿತ್ತನೆ ಪ್ರದೇಶದ ಗುರಿ ಇರುವ ರಾಮನಗರದಲ್ಲಿ 272 ಹೆಕ್ಟೇರ್ ಹಾಗೂ 10,133 ಹೆಕ್ಟೇರ್ ಬಿತ್ತನೆ ಪ್ರದೇಶದ ಗುರಿ ಇರುವ ಹಾರೋಹಳ್ಳಿ ತಾಲ್ಲೂಕಿನಲ್ಲಿ ಕೇವಲ 4 ಹೆಕ್ಟೇರ್ ಮಾತ್ರ ಬಿತ್ತನೆ ನಡೆದಿದೆ’ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಮಳೆ ಕೊರತೆ ಹೆಚ್ಚುತ್ತಲೇ ಇದೆ. ಆಗಲೋ ಈಗಲೋ ಒಮ್ಮೆ ಸುರಿಯುವ ಮಳೆಯು ಕೃಷಿ ಚಟುವಟಿಕೆಗೆ ಪೂರಕವಾಗಿಲ್ಲ. ಇದರಿಂದಾಗಿ ರೈತರು ಬಿತ್ತನೆಗೆ ಹಿಂದೇಟು ಹಾಕುತ್ತಿದ್ದಾರೆ. ಕೈ ಕೊಡುವ ಮಳೆ ನೆಚ್ಚಿಕೊಂಡು ಬಿತ್ತನೆ ಮಾಡಿದರೆ ನಷ್ಟದ ಕುಣಿಕೆಗೆ ಸಿಲುಕಬೇಕಾಗುತ್ತದೆ ಎಂಬ ಭಯ ರೈತರನ್ನು ಕಾಡುತ್ತಿದೆ. ಜಿಲ್ಲೆಯಲ್ಲಿ ಜೂನ್‌ನಲ್ಲಿ ವಾಡಿಕೆ ಮಳೆ 68.5 ಮಿ.ಮೀ. ಪೈಕಿ 76.5 ಮಿ.ಮೀ. ಸುರಿದಿತ್ತು. ಆದರೆ, ಮಾಗಡಿಯಲ್ಲಿ ವಾಡಿಕೆ ಮಳೆ 85.4 ಮಿ.ಮೀ. ಪೈಕಿ -23 ಮಿ.ಮೀ. ಕೊರತೆಯಾಗಿತ್ತು. ಆದರೆ, ಮಳೆ ಹಂಚಿಕೆಯಲ್ಲಿ ಭಾರಿ ವ್ಯತ್ಯಾಸವಾಗಿದ್ದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆ ನಡೆದಿಲ್ಲ. ಇನ್ನು ಜುಲೈನಲ್ಲಿ ವಾಡಿಕೆ ಮಳೆ 87.7 ಮಿ.ಮೀ. ಪೈಕಿ ಸುರಿದಿದ್ದು ಕೇವಲ 28.7 ಮಿ.ಮೀ. ಮಾತ್ರ. ಮುಂಗಾರು ಬಿತ್ತನೆ ಚುರುಕುಗೊಳ್ಳುವ ತಿಂಗಳಲ್ಲಿ ಮಳೆ ಕೈ ಕೊಟ್ಟಿತು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260807-14-662695947

Post a Comment

If u have any queries, Please let us know

Previous Post Next Post