ರಾಯಚೂರು | ಬರ ಘೋಷಿಸಿ, ರೈತರ ಸಾಲಮನ್ನಾ ಮಾಡಿ: ಶಾಸಕ ಶಿವರಾಜ ಪಾಟೀಲ ಒತ್ತಾಯ

ರಾಯಚೂರು | ಬರ ಘೋಷಿಸಿ, ರೈತರ ಸಾಲಮನ್ನಾ ಮಾಡಿ: ಶಾಸಕ ಶಿವರಾಜ ಪಾಟೀಲ ಒತ್ತಾಯ

ರಾಯಚೂರು | ಬರ ಘೋಷಿಸಿ, ರೈತರ ಸಾಲಮನ್ನಾ ಮಾಡಿ: ಶಾಸಕ ಶಿವರಾಜ ಪಾಟೀಲ ಒತ್ತಾಯ

ರಾಯಚೂರು: ಜಿಲ್ಲೆಯಲ್ಲಿ ಮುಂದುವರಿದಿರುವ ಬರಗಾಲದಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕೃಷಿಗೆ ಮಾಡಿದ ಅಪಾರ ವೆಚ್ಚವೂ ಕೈಗೆ ಸಿಗದ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಬೇಕು. ಬರ ಪರಿಹಾರ ಕೊಡುವ ಜತೆಗೆ ರೈತರ ಸಾಲ ಮನ್ನಾ ಮಾಡಬೇಕು’ ಎಂದು ಎಂದು ನಗರ ಶಾಸಕ ಶಿವರಾಜ ಪಾಟೀಲ ಒತ್ತಾಯಿಸಿದರು.

‘ರೈತರು ಮೂರು ಬಾರಿ ಬಿತ್ತನೆ ಮಾಡಿದ್ದಾರೆ. ಪ್ರತಿ ಎಕರೆಗೆ ಸುಮಾರು ₹15 ಸಾವಿರಕ್ಕೂ ಹೆಚ್ಚು ವೆಚ್ಚ ಮಾಡಿ ಬಿತ್ತನೆ ನಡೆಸಿದರೂ ಮಳೆ ಕೊರತೆಯಿಂದ ಬೆಳೆ ಸಂಪೂರ್ಣ ನಷ್ಟವಾಗಿದೆ. ರಾಜ್ಯ ಸರ್ಕಾರ ಪ್ರತಿ ಎಕರೆಗೆ ಕನಿಷ್ಠ ₹50 ಸಾವಿರ ಬರ ಪರಿಹಾರ ಘೋಷಿಸಿ ರೈತರ ನೆರವಿಗೆ ಧಾವಿಸಬೇಕು’ ಎಂದು ಮಾಧ್ಯಮ ಗೋಷ್ಠಿಯಲ್ಲಿ ಆಗ್ರಹಿಸಿದರು.

‘ರೈತರು ದೇಶದ ಬೆನ್ನೆಲುಬು ಮತ್ತು ರಾಷ್ಟ್ರದ ಅಮೂಲ್ಯ ಆಸ್ತಿಯಾಗಿದ್ದಾರೆ. ಆದರೆ, ನಿರಂತರ ನಷ್ಟದಿಂದ ರೈತ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ತಮ್ಮ ಮಕ್ಕಳನ್ನು ಉದ್ಯೋಗ ಅರಸಿ ಬೆಂಗಳೂರಿನಂತಹ ಮಹಾನಗರಗಳಿಗೆ ಕಳುಹಿಸುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಕೃಷಿ ಲಾಭದಾಯಕವಾಗದ ಕಾರಣ ಗ್ರಾಮೀಣ ಜೀವನವೇ ಸಂಕಷ್ಟಕ್ಕೆ ಸಿಲುಕುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಈ ವರ್ಷ ಹತ್ತಿ ಸೇರಿದಂತೆ ವಿವಿಧ ಬೆಳೆಗಳು ಬರದ ಹೊಡೆತಕ್ಕೆ ಸಿಲುಕಿವೆ. ಅದರಲ್ಲೂ ಹತ್ತಿ ಬೆಳೆಗೆ ಪಿಂಕ್ ಬೋಲ್‌ವರ್ಮ್ (ಪಿಂಕ್ ರೋಗ) ಕಾಟ ಹೆಚ್ಚಾಗಿರುವುದರಿಂದ ರೈತರು ಮತ್ತಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಬೆಳೆ ಹಾನಿ, ಉತ್ಪಾದನೆ ಕುಸಿತ ಮತ್ತು ಹೆಚ್ಚುತ್ತಿರುವ ಕೃಷಿ ವೆಚ್ಚದಿಂದ ರೈತರು ಆರ್ಥಿಕವಾಗಿ ಸಂಪೂರ್ಣ ಕುಗ್ಗುವಂತಾಗಿದೆ’ ಎಂದು ಹೇಳಿದರು.

‘ನನಗೆ ಬಾಲ್ಯದಿಂದಲೇ ಕೃಷಿಯ ಬಗ್ಗೆ ಚೆನ್ನಾಗಿ ಗೊತ್ತು. ರೈತರ ನೋವು, ಕಷ್ಟಗಳನ್ನು ಹತ್ತಿರದಿಂದ ಕಂಡಿದ್ದೇನೆ. ರೈತರು ಉಳಿದರೆ ಮಾತ್ರ ದೇಶ ಉಳಿಯುತ್ತದೆ. ಆದ್ದರಿಂದ ಸರ್ಕಾರ ರೈತರ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣವೇ ಬರ ಪರಿಹಾರ, ಸಾಲಮನ್ನಾ ಹಾಗೂ ಇತರೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು’ ಎಂದು ಆಗ್ರಹಿಸಿದರು.

‘ಬರಗಾಲದಿಂದ ಜಾನುವಾರುಗಳಿಗೆ ಮೇವು ಕೊರತೆಯೂ ತೀವ್ರವಾಗಿ ಎದುರಾಗಿದ್ದು, ರೈತರು ಜಾನುವಾರುಗಳನ್ನು ಸಾಕುವುದೂ ಕಷ್ಟಕರವಾಗಿದೆ. ಸರ್ಕಾರ ತುರ್ತು ಕ್ರಮ ಕೈಗೊಂಡು ಮೇವು ಬ್ಯಾಂಕ್‌ಗಳನ್ನು ಸ್ಥಾಪಿಸಬೇಕು. ಜಾನುವಾರುಗಳಿಗೆ ಅಗತ್ಯ ಮೇವು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಬರ ನಿರ್ವಹಣೆಗೆ ಸಮಗ್ರ ಪರಿಹಾರ ಕ್ರಮಗಳನ್ನು ಜಾರಿಗೊಳಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ರೈತ ಸಮುದಾಯವನ್ನು ಸಂಕಷ್ಟದಿಂದ ಹೊರತರುವ ನಿಟ್ಟಿನಲ್ಲಿ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿ, ಕೃಷಿ ಚಟುವಟಿಕೆಗಳಿಗೆ ಹೊಸ ಚೈತನ್ಯ ತುಂಬುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

Post a Comment

If u have any queries, Please let us know

Previous Post Next Post