
ಮರಿಯಮ್ಮನಹಳ್ಳಿ: ಮತ್ತೆ ಗರಿಗೆದರಿದ ಕೃಷಿ ಚಟುವಟಿಕೆ
ಮರಿಯಮ್ಮನಹಳ್ಳಿ: ಪಟ್ಟಣದ ಹೋಬಳಿ ವ್ಯಾಪ್ತಿಯಲ್ಲಿ ಕೆಲ ದಿನಗಳಿಂದ ಬೀಳುತ್ತಿರುವ ಉತ್ತಮ ಮಳೆಗೆ ಬಹುತೇಕ ಸ್ಥಗಿತಗೊಂಡಿದ್ದ ಕೃಷಿ ಚಟುವಟಿಕೆಗಳು ಮತ್ತೆ ನಿಧಾನಕ್ಕೆ ಗರಿಗೆದರಿದ್ದು, ಬಿತ್ತನೆ ಕಾರ್ಯ ಚುರುಕುಗೊಂಡಿದೆ.
ಆರಂಭದಲ್ಲಿ ಮುಂಗಾರು ಮುನಿಸಿನಿಂದಾಗಿ ಬಿತ್ತಿ ಬೆಳೆ ಜೋಳ, ಮುಸಕಿನ ಜೋಳದ ಬೆಳೆಗಳು ಸಂಪೂರ್ಣ ಎರಡು ತಿಂಗಳು ಕಾಲ ಮಳೆಯಿಲ್ಲದೆ, ತೇವಾಂಶ ಕೊರತೆಯಿಂದಾಗಿ ಬಹುತೇಕ ಬೆಳೆಗಳು ಕುಂಠಿತಗೊಂಡಿದ್ದು, ಒಣಗುವ ಹಂತ ತಲುಪಿದ್ದವು. ಅಲ್ಲದೆ ಬರಗಾಲ ಆವರಿಸಿದ್ದರಿಂದ ಕೆಲ ರೈತರು ಬೆಳೆ ನಾಶವನ್ನು ಮಾಡಿದ್ದರು.
ಸದ್ಯ ಸುರಿಯುತ್ತಿರುವ ಉತ್ತಮ ಮಳೆಗೆ ಮತ್ತೆ ರೈತರು ಹೊಲಗಳತ್ತ ಮುಖ ಮಾಡಿದ್ದು, ಬಿತ್ತನೆಯಾಗದೆ ಖಾಲಿ ಉಳಿದಿದ್ದ ಪ್ರದೇಶಗಳಲ್ಲಿ ರಾಗಿ, ನವಣೆ, ಸಜ್ಜೆ ಬಿತ್ತನೆಯಲ್ಲಿ ರೈತರು ಮಗ್ನರಾಗಿರುವುದು ಕಳೆದ ಎರಡ್ಮೂರು ದಿನಗಳಿಂದ ವ್ಯಾಪ್ತಿಯಲ್ಲಿ ಕಂಡು ಬರುತ್ತಿದೆ.
ಹೋಬಳಿ ವ್ಯಾಪ್ತಿಯ ನಂದಿಬಂಡಿ, ಗೊಲ್ಲರಹಳ್ಳಿ, ಗರಗ, ನಾಗಲಾಪುರ, ಬ್ಯಾಲಕುಂದಿ, ಗರಗ, ಹಾರುವನಹಳ್ಳಿ, ತಿಮ್ಮಲಾಪುರ ಸೇರಿದಂತೆ ಇತರೆಡೆ ರೈತರು ಪರ್ಯಾಯ ಬೆಳೆಯತ್ತ ಮುಖ ಮಾಡಿದ್ದು, ಬಿತ್ತನೆ ಕಾರ್ಯ ಭರದಿಂದ ಸಾಗಿದೆ. ಕೆಲ ಕಡೆ ಮುಸುಕಿನ ಜೋಳ, ಶೇಂಗಾ ಬಿತ್ತನೆಗೂ ಮುಂದಾಗಿದ್ದಾರೆ ರೈತರು.
‘ನೋಡ್ರಿ ಎರಡು ತಿಂಗಳು ಮಳೆ ಸಂಪೂರ್ಣ ಹೋಗಿ ಬಿತ್ತನೆ ಹಸನು ಮಾಡಿದ ಭೂಮಿ ಖಾಲಿಯಾಗಿತ್ತು. ಆದರ ಸದ್ಯ ಬೀಳುತ್ತಿರುವ ಮಳೆಗೆ ಬೇರೆ ದಾರಿಯಿಲ್ಲದೆ ಅಲ್ಪವಾಧಿ ಬೆಳೆಯಾದ ರಾಗಿ, ಸಜ್ಜೆ, ನವಣೆ ಬಿತ್ತಲಿಕ್ಕೆ ಮುಂದಾಗಿದ್ದೇವೆ’ ಎನ್ನುತ್ತಾರೆ ವ್ಯಾಪ್ತಿಯ ರೈತರಾದ ಶ್ರೀನಿವಾಸ, ಮಂಜುನಾಥ, ಬಸವರಾಜ ಹಾಗೂ ಇತರರು
ರೈತ ಸಂಪರ್ಕ ಕೇಂದ್ರಗಳಿಲ್ಲಿ ರೈತರಿಗೆ ಅಲ್ಪಾವಧಿ ಬೆಳೆಗಳಾದ ಸಜ್ಜೆ, ನವಣೆ, ರಾಗಿ ಬಿತ್ತನೆ ಬೀಜ ಲಭ್ಯವಿದ್ದು, ರೈತರು ಹೆಚ್ಚು ಮಳೆ ಬೇಡದ ಈ ಪರ್ಯಾಯ ಬೆಳೆಗಳನ್ನು ಬೆಳೆಯುವದರಿಂದ ಅನುಕೂಲವಾಗಲಿದೆ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಎಸ್.ಮನೋಹರಗೌಡ.