
ಕೊಪ್ಪ: ತಾಲ್ಲೂಕಿನ ಅಸೂಡಿ ರಸ್ತೆ ದುರಸ್ತಿ ಕಾಣದೆ ಜನರ ಪರದಾಟ
ಕೊಪ್ಪ: ತಾಲ್ಲೂಕಿನ ಗ್ರಾಮೀಣ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಹಲವು ರಸ್ತೆಗಳು ವರ್ಷಗಳಿಂದ ಡಾಂಬರು ಕಾಣದೆ ಉಳಿದಿವೆ. ಕೆಲವು ರಸ್ತೆಗಳು ಇದುವರೆಗೂ ಡಾಂಬರು ಕಂಡಿಲ್ಲ. ಹಿರೇಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಸೂಡಿ ರಸ್ತೆಯೂ ಇದಕ್ಕೆ ಹೊರತಾಗಿಲ್ಲ.
ಹೊಂಡ ಗುಂಡಿಗಳಿಂದ ಕೂಡಿರುವ ಅಸೂಡಿ ರಸ್ತೆಯಲ್ಲಿ ನಿತ್ಯ ಸಂಚಾರ ದುಸ್ತರವಾಗಿದೆ. ಕಡಿದಾದ ಹಾಗೂ ತಿರುವುಗಳಿಂದ ಕೂಡಿರುವ ಈ ರಸ್ತೆಯಲ್ಲಿ ವಾಹನಗಳ ಸಂಚಾರವೇ ಕಷ್ಟಕರವಾಗಿದೆ. ಮಳೆಗಾಲದಲ್ಲಿ ರಸ್ತೆ ಕೆಸರುಮಯವಾಗುವುದರಿಂದ ನಡೆದುಕೊಂಡು ಹೋಗುವವರೂ ಜಾರಿ ಬೀಳುವ ಅಪಾಯ ಎದುರಿಸುತ್ತಿದ್ದಾರೆ.
ಈ ರಸ್ತೆ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಕೊರೋಡಿ ಬಳಿ ಆರಂಭಗೊಂಡು ಬೊಮ್ಮಲಾಪುರವನ್ನು ಸಂಪರ್ಕಿಸುತ್ತದೆ. ಶೆಟ್ಟಿಹಡ್ಲು ಗ್ರಾಮಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದ್ದು, ಅಲ್ಲಿಂದ ಅಬ್ಬಿಗುಂಡಿ ಹಾಗೂ ಅಸೂಡಿ ಭಾಗದ ನಿವಾಸಿಗಳು ಹದಗೆಟ್ಟ ರಸ್ತೆಯಲ್ಲೇ ಸಂಚರಿಸಬೇಕಾಗಿದೆ.
ರಸ್ತೆಯ ಕೆಲವೆಡೆ ಕಲ್ಲುಗಳು ಎದ್ದು ಬಂದಿದ್ದರೆ, ಇನ್ನೂ ಕೆಲವೆಡೆ ಕೆಸರು ಹಾಗೂ ಹೊಂಡಗಳು ನಿರ್ಮಾಣವಾಗಿವೆ. ಮಳೆಗಾಲದಲ್ಲಿ ವಾಹನಗಳ ಸಂಚಾರ ಮತ್ತಷ್ಟು ದುಸ್ತರವಾಗುತ್ತದೆ. ಸುಮಾರು ಎರಡು ಕಿ.ಮೀ. ವ್ಯಾಪ್ತಿಯಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದೆ.
ರಸ್ತೆಯ ಮೇಲೆಯೇ ನಿರಂತರವಾಗಿ ನೀರು ಹರಿಯುತ್ತಿರುವುದರಿಂದ ಜಾರುವಂತಾಗಿದೆ. ಅಲ್ಲಲ್ಲಿ ಕೊರಕಲು ಬಿದ್ದಿದ್ದು, ವಿದ್ಯಾರ್ಥಿಗಳು ಹಾಗೂ ವೃದ್ಧರು ಓಡಾಡಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ರಸ್ತೆ ಬೊಮ್ಮಲಾಪುರಕ್ಕೆ ಸಂಪರ್ಕ ಕಲ್ಪಿಸುವುದರಿಂದ ಅಭಿವೃದ್ಧಿಪಡಿಸಿದರೆ ನಾಲ್ಕೈದು ಕಿ.ಮೀ. ಸುತ್ತು ಬಳಸಿ ಸಂಚರಿಸುವುದು ತಪ್ಪಲಿದೆ. ಅಸೂಡಿಯ ಹತ್ತಾರು ಕುಟುಂಬಗಳ ಜತೆಗೆ ನೂರಾರು ಮನೆಗಳಿರುವ ಬೊಮ್ಮಲಾಪುರ ಗ್ರಾಮಕ್ಕೂ ಸಂಪರ್ಕ ಸುಗಮವಾಗಲಿದೆ ಎನ್ನುತ್ತಾರೆ ಸ್ಥಳೀಯರು.
ಕಳೆದ ಬಾರಿ ಅಸೂಡಿ ನಿವಾಸಿಯೊಬ್ಬರ ಪುತ್ರಿ ವಸತಿ ಶಾಲೆಯಲ್ಲಿ ಮೃತಪಟ್ಟ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ಅವರು ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಆಗ ಶಾಸಕರು 4X4 ಥಾರ್ ವಾಹನದಲ್ಲಿ ಇದೇ ರಸ್ತೆಯಲ್ಲಿ ಸಂಚರಿಸಿದ್ದರು. ರಸ್ತೆಯ ದುಃಸ್ಥಿತಿಯನ್ನು ಗಮನಿಸಿದ್ದ ಅವರು ದುರಸ್ತಿ ಮಾಡಿಸುವ ಭರವಸೆ ನೀಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
‘ಆದಷ್ಟು ಬೇಗ ಕಾಮಗಾರಿ ನಡೆಸಲಿ’
‘ಆರು ತಿಂಗಳ ಹಿಂದೆ ರಸ್ತೆ ದುರಸ್ತಿ ಕುರಿತು ವಿಚಾರಿಸಿದಾಗ, ಸರ್ಕಾರದಿಂದ ₹50 ಲಕ್ಷ ಅನುದಾನ ಮೀಸಲಿಡಲಾಗಿದೆ. ಮಳೆಗಾಲ ಮುಗಿದ ಬಳಿಕ ಕಾಮಗಾರಿ ನಡೆಸುವುದಾಗಿ ತಿಳಿಸಿದ್ದರು. ಆದಷ್ಟು ಬೇಗ ರಸ್ತೆ ಕಾಮಗಾರಿ ಆರಂಭಿಸಬೇಕು ಎಂಬುದು ನಮ್ಮ ಆಗ್ರಹ ಎನ್ನುತ್ತಾರೆ ಅಸೂಡಿಯ ನಿವಾಸಿ ಗುರುಮೂರ್ತಿ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260831-126-1558475209