ಚಿತ್ರದುರ್ಗ | ಸಚಿವರ ಎದುರು ಜನರ ಬೇಡಿಕೆಗಳ ಸರಮಾಲೆ, ಬರಪರಿಸ್ಥಿತಿ ಅವಲೋಕನ

ಚಿತ್ರದುರ್ಗ | ಸಚಿವರ ಎದುರು ಜನರ ಬೇಡಿಕೆಗಳ ಸರಮಾಲೆ, ಬರಪರಿಸ್ಥಿತಿ ಅವಲೋಕನ

ಚಿತ್ರದುರ್ಗ | ಸಚಿವರ ಎದುರು ಜನರ ಬೇಡಿಕೆಗಳ ಸರಮಾಲೆ, ಬರಪರಿಸ್ಥಿತಿ ಅವಲೋಕನ

ಚಿತ್ರದುರ್ಗ: ಟಿ.ರಘುಮೂರ್ತಿ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಜಿಲ್ಲೆಯಾದ್ಯಂತ ಒಂದು ಸುತ್ತು ಸಂಚಾರ ಪೂರ್ಣಗೊಳಿಸಿ ಬರಪರಿಸ್ಥಿತಿಯನ್ನು ಸಮಗ್ರವಾಗಿ ಅವಲೋಕನ ಮಾಡಿದ್ದಾರೆ. ಅವರ ಮೇಲೆ ಸಾರ್ವಜನಿಕರು ಅಪಾರ ನಿರೀಕ್ಷೆ ಹೊಂದಿದ್ದು, ಹೋದಲ್ಲೆಲ್ಲಾ ಬೇಡಿಕೆಗಳ ಪಟ್ಟಿಯನ್ನೇ ತೆರೆದಿಡುತ್ತಿದ್ದಾರೆ.

ಸಚಿವರಾಗಿ ಆ. 5ರಂದು ಜಿಲ್ಲೆಗೆ ಮೊದಲ ಬಾರಿ ಬಂದಿದ್ದ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ 5 ದಿನಗಳು ಮಿಂಚಿನ ಸಂಚಾರ ನಡೆಸಿದ್ದಾರೆ. ಬೆಳಿಗ್ಗೆಯಿಂದ ರಾತ್ರಿಯವರೆಗೂ ಬರ ಅಧ್ಯಯನ ಪ್ರವಾಸ ಕೈಗೊಂಡು ರೈತರ ಸಮಸ್ಯೆಗಳನ್ನು ಆಲಿಸಿದ್ದಾರೆ. ಜೊತೆಗೆ ಸಾರ್ವಜನಿಕ ಸಮಾರಂಭಗಳಲ್ಲೂ ಪಾಲ್ಗೊಂಡು ತಮ್ಮ ಸರಳತೆಯನ್ನು ಪ್ರದರ್ಶನ ಮಾಡಿದ್ದಾರೆ. ವಿವಿಧ ಇಲಾಖೆಯ ಅಧಿಕಾರಿಗಳ ಚಳಿ ಬಿಡಿಸಿದ್ದಾರೆ. ತ್ವರಿತವಾಗಿ ಕೆಲಸ ಕಾರ್ಯ ನಿರ್ವಹಿಸುವ ಮೂಲಕ ಜನರಿಗೆ ಸ್ಪಂದಿಸಬೇಕೆಂದು ತಾಕೀತು ಮಾಡಿದ್ದಾರೆ.

ಸಚಿವರು ಹೋದಲ್ಲಿ ಬಂದಲ್ಲಿ ಸಾರ್ವಜನಿಕರು ಬೇಡಿಕೆಗಳ ಪಟ್ಟಿ ನೀಡುತ್ತಿದ್ದಾರೆ. ಮುಂದೆ ಹಿರಿಯೂರು ಕ್ಷೇತ್ರದ ಉಪ ಚುನಾವಣೆ ಸೇರಿದಂತೆ ವಿವಿಧ ಚುನಾವಣೆಗಳ ಪರ್ವ ಪ್ರಾರಂಭವಾಗಲಿದೆ. ಇರುವ ಕಡಿಮೆ ಅವಧಿಯಲ್ಲಿ ಜನರ ಬೇಡಿಕೆಗಳಿಗೆ ಸ್ಪಂದಿಸುವುದು ಸವಾಲಿನ ವಿಷಯ. ಇದನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಮೆಡಿಕಲ್‌ ಕಾಲೇಜು ಸಮಸ್ಯೆ: ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಕಟ್ಟಡ ಸ್ಥಳಾಂತರ ಸಮಸ್ಯೆ ಇಂದಿಗೂ ಗೊಂದಲವಾಗಿಯೇ ಉಳಿದಿದೆ. ಇದು ಕುಂಚಿಗನಾಳ್‌ ಕಣಿವೆಯಲ್ಲಿ ನಿರ್ಮಾಣಗೊಂಡಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ ಎಂದೇ ಹೇಳಲಾಗಿತ್ತು. ಡಿ.ಸುಧಾಕರ್‌ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಈ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಅದಕ್ಕೆ ಸರ್ಕಾರ ಒಪ್ಪದ ಕಾರಣ ಅದನ್ನು ಕೈಬಿಡಲಾಗಿತ್ತು.

ಈಗ ವೈದ್ಯಕೀಯ ಕಾಲೇಜು, ಕಟ್ಟಡ ಸಮಸ್ಯೆ ಎದುರಿಸುತ್ತಿದೆ. ದಾವಣಗೆರೆ ವಿಶ್ವವಿದ್ಯಾಲಯದ ಜಿ.ಆರ್‌. ಹಳ್ಳಿ ಅಧ್ಯಯನ ಕೇಂದ್ರದಲ್ಲಿ ನಡೆಯುತ್ತಿರುವ ಕಾಲೇಜಿಗೆ ಮೂಲ ಸೌಲಭ್ಯಗಳಿಲ್ಲ. ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಡೆಯುತ್ತಿರುವ ಕಟ್ಟಡಕ್ಕೆ ಕಾಲೇಜು ಸ್ಥಳಾಂತರ ಮಾಡುವುದು ಬೇಡ ಎಂಬ ಆಗ್ರಹವಿದೆ. ಮುಂದೆ ಸಚಿವರು ಕೈಗೊಳ್ಳುವ ನಿರ್ಧಾರ ವೈದ್ಯಕೀಯ ಕಾಲೇಜಿನ ಭವಿಷ್ಯ ನಿರ್ಧರಿಸುತ್ತದೆ.

‘ಈಗಿರುವ ಜಿ.ಆರ್‌.ಹಳ್ಳಿ ಅಧ್ಯಯನ ಕೇಂದ್ರದಲ್ಲೇ ಮೆಡಿಕಲ್‌ ಕಾಲೇಜು ಮುಂದುವರಿಸಬೇಕು. ವಿವಿ ಅಧ್ಯಯನ ಕೇಂದ್ರವನ್ನೇ ಕುಂಚಿಗನಾಳ್‌ ಕಣಿವೆಯಲ್ಲಿರುವ ಕಟ್ಟಡಕ್ಕೆ ಸ್ಥಳಾಂತರ ಮಾಡಬೇಕು’ ಎಂದು ವಿವಿಧ ಸಂಘಟನೆಗಳ ಸದಸ್ಯರು ಒತ್ತಾಯಿಸಿದ್ದಾರೆ.

ದುರ್ಗೋತ್ಸವ ಆರಂಭಗೊಳ್ಳುವುದೇ?: ಚಿತ್ರದುರ್ಗದ ಐತಿಹಾಸಿಕ ಕೋಟೆಯ ಪರಂಪರೆಯನ್ನು ಬಿಂಬಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ದುರ್ಗೋತ್ಸವ ಆಚರಣೆ ನಡೆಯಬೇಕು ಎಂಬುದು ಜಿಲ್ಲೆಯ ಜನರ ಬಹುಕಾಲದ ಬೇಡಿಕೆಯಾಗಿದೆ. ಎಚ್‌. ಆಂಜನೇಯ ಅವರು ಉಸ್ತುವಾರಿ ಸಚಿವರಾಗಿದ್ದಾಗ ದುರ್ಗೋತ್ಸವ ನಡೆದಿತ್ತು. ಆದರೆ, ಸರ್ಕಾರಿ ಆದೇಶವಾಗದ ಕಾರಣ ಅದು ಮುಂದುವರಿಯಲಿಲ್ಲ.

‘ರಘುಮೂರ್ತಿ ಅವರು ದುರ್ಗೋತ್ಸವ ಆಚರಣೆಗೆ ಸರ್ಕಾರಿ ಆದೇಶ ಮಾಡಿಸಬೇಕು. ಪ್ರತಿ ವರ್ಷ ವೈಭವಯುತವಾಗಿ ಉತ್ಸವ ನಡೆಸಲು ಚಾಲನೆ ನೀಡಬೇಕು. ಧ್ವನಿ– ಬೆಳಕು ಕಾರ್ಯಕ್ರಮವನ್ನೂ ರೂಪಿಸಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಹಲವು ವರ್ಷಗಳಿಂದ ಕಲ್ಲಿನಕೋಟೆಗೆ ಹೋಗಲು ಸುಸಜ್ಜಿತವಾದ ರಸ್ತೆ ಇಲ್ಲ. ಪ್ರವಾಸಿಗರು ಬಹಳ ಕಷ್ಟಪಟ್ಟು ಕೋಟೆ ಬಳಿ ತೆರಳಬೇಕಾಗಿದೆ. ರಾಷ್ಟ್ರೀಯ ಹೆದ್ದಾರಿಯಿಂದ ನೇರವಾಗಿ ಕಲ್ಲಿನಕೋಟೆಗೆ ಸಂಪರ್ಕ ಕಲ್ಪಿಸುವ ಯೋಜನೆ ಈಗ ನನೆಗುದಿಗೆ ಬಿದ್ದಿದೆ. ರಘುಮೂರ್ತಿ ಅವರು ಸಚಿವರಾದ ನಂತರ ನೇರ ರಸ್ತೆ ಯೋಜನೆಗೆ ಜೀವ ತುಂಬುತ್ತಾರೆ ಎಂಬ ನಿರೀಕ್ಷೆಗಳು ಹೆಚ್ಚಾಗಿವೆ.

ಜಿಲ್ಲಾ ಕೇಂದ್ರ ಚಿತ್ರದುರ್ಗದಲ್ಲಿ ಒಳಚರಂಡಿ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದ್ದು, ಮಳೆ ಬಂದಾಗ ಚರಂಡಿಗಳು ಉಕ್ಕಿ ಹರಿದು ಇಡೀ ನಗರ ಕೊಳಚೆಯಾಗುತ್ತದೆ. ಇದನ್ನು ತಪ್ಪಿಸಲು ಸಮಗ್ರ ಯೋಜನೆ ರೂಪಿಸಬೇಕು ಎಂದು ಶಾಸಕ ಕೆ.ಸಿ. ವೀರೇಂದ್ರ ಒತ್ತಾಯಿಸಿದ್ದಾರೆ. ಜೊತೆಗೆ ನಗರದ ಅಭಿವೃದ್ಧಿಗೆ ಒಂದು ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಬೇಕು ಎಂದು ಕೋರಿದ್ದಾರೆ. ನೂತನ ಸಚಿವರು ಶಾಸಕರ ಮನವಿಗೆ ಸ್ಪಂದಿಸಲಿದ್ದಾರೆ ಎಂಬ ನಿರೀಕ್ಷೆಯೂ ಜನರಲ್ಲಿದೆ.

‘ರಘುಮೂರ್ತಿ ಅವರು ಸಚಿವರಾಗಿರುವುದು ಚಿತ್ರದುರ್ಗ ಜಿಲ್ಲೆಯ ಜನರಲ್ಲಿ ಆಶಾಭಾವ ಮೂಡಿಸಿದೆ. ಸ್ವತಃ ಸಿವಿಲ್‌ ಎಂಜಿನಿಯರ್‌ ಆಗಿರುವ ಅವರು ಐತಿಹಾಸಿಕ ನಗರಕ್ಕೆ ಹೊಸ ರೂಪ ನೀಡಲಿದ್ದಾರೆ ಎಂಬ ನಿರೀಕ್ಷೆ ಎಲ್ಲರಲ್ಲೂ ಇದೆ’ ಎಂದು ವಕೀಲರಾದ ಎಸ್‌.ಮಂಜುನಾಥ್‌ ಹೇಳಿದರು.

ಈಗಲಾದರೂ ಬಿ.ಡಿ ರಸ್ತೆ ವಿಸ್ತರಣೆಯಾಗುವುದೇ?

ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಬಿ.ಡಿ. ರಸ್ತೆಯು ಈಗಲಾದರೂ ವಿಸ್ತರಣೆಯಾಗುವುದೇ ಎಂಬ ನಿರೀಕ್ಷೆ ಈಗ ಗರಿಗೆದರಿದೆ. ಚಳ್ಳಕೆರೆ ಗೇಟ್‌ನಿಂದ ಕನಕ ವೃತ್ತದವರೆಗೆ ಜನ ಸಂಕಷ್ಟದ ನಡುವೆ ಓಡಾಡುತ್ತಿದ್ದಾರೆ. 2 ಹಂತದಲ್ಲಿ ರಸ್ತೆ ವಿಸ್ತರಣೆ ಮಾಡುವುದಾಗಿ ಜಿಲ್ಲಾಡಳಿತ ಘೋಷಣೆ ಮಾಡಿತ್ತು. ಈ ಕುರಿತು ಸರ್ಕಾರದ ಅನುಮತಿಗಾಗಿ ಪ್ರಸ್ತಾವವನ್ನೂ ಸಲ್ಲಿಸಿತ್ತು. ಆದರೆ ಯಾವುದೂ ಕಾರ್ಯಗತಗೊಳ್ಳಲಿಲ್ಲ.

ಬಿ.ಡಿ ರಸ್ತೆಯ ವರ್ತಕರ ಲಾಬಿಗೆ ಜಿಲ್ಲಾಡಳಿತ ಮಣಿಯುತ್ತಿದೆ ಎಂದೇ ಸಾರ್ವಜನಿಕರು ಆರೋಪಿಸುತ್ತಾರೆ. ಟಿ. ರಘುಮೂರ್ತಿ ಅವರು ಚಳ್ಳಕೆರೆ ಪಟ್ಟಣದಲ್ಲಿ ಮುಖ್ಯರಸ್ತೆಯನ್ನು ವಿಸ್ತರಣೆ ಮಾಡಿ ಮಾದರಿಯಾಗಿದ್ದಾರೆ. ಅದೇ ರೀತಿ ಜಿಲ್ಲಾ ಕೇಂದ್ರದ ಬಿ.ಡಿ. ರಸ್ತೆಯನ್ನೂ ವಿಸ್ತರಣೆ ಮಾಡಬೇಕು. ಯಾವುದೇ ಒತ್ತಡಗಳಿಗೆ ಮಣಿಯದೇ ದಿಟ್ಟ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260811-44-827574780

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ