
ನವಲಗುಂದ: ಕುಡುಕರ ಅಡ್ಡೆಯಾದ ಶಾಲಾ ಮೈದಾನ
ನವಲಗುಂದ: ಪಟ್ಟಣದ ಮಾಡೆಲ್ ಹೈಸ್ಕೂಲ್ ಶಾಲೆಯ ಮೈದಾನ ಹಾಗೂ ಪೊಲೀಸ್ ಇಲಾಖೆಯ ಫೈರಿಂಗ್ ಮೈದಾನ ಮದ್ಯವ್ಯಸನಿಗಳ ಅಡ್ಡೆಯಾಗಿವೆ. ಕಿಡಿಗೇಡಿಗಳು ರಾತ್ರಿ ವೇಳೆ ಮದ್ಯ ಸೇವಿಸಿ, ಅಲ್ಲಿಯೇ ಬಾಟಲ್‌ಗಳನ್ನು ಬಿಸಾಡಿ, ಒಡೆದು ಹೋಗುತ್ತಿದ್ದಾರೆ.
ಗುಟ್ಕಾ ಜಗಿದು ಉಗುಳಿರುವ ಗುರುತು ಮೈದಾನದ ಎಲ್ಲೆಂದರಲ್ಲಿ ಕಾಣುತ್ತವೆ. ಒಡೆದ ಗಾಜಿನ ಚೂರು, ಬಳಸಿ ಬಿಸಾಡಿದ ಊಟದ ತಟ್ಟೆ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಮೈದಾನದಿಂದ ಆರಿಸಿ ತೆಗೆಯುವುದೇ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಿತ್ಯ ಕೆಲಸವಾಗಿದೆ.
‘ರಾತ್ರಿ 12ರವರೆಗೆ ಮೈದಾನವನ್ನು ಅಡ್ಡೆಯನ್ನಾಗಿ ಮಾಡಿಕೊಳ್ಳುವ ಮದ್ಯವ್ಯಸನಿಗಳು, ಮತ್ತಿನಲ್ಲಿ ಜೋರಾಗಿ ಕಿರುಚಾಡುತ್ತಾರೆ. ಅಕ್ಕ–ಪಕ್ಕದ ನಿವಾಸಿಗಳ ನಿದ್ದೆಗೂ ಸಮಸ್ಯೆಯಾಗಿದೆ. ಪೊಲೀಸ್ ಇಲಾಖೆಯ ಫೈರಿಂಗ್ ಮೈದಾನ ಸಹ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ. ಪೊಲೀಸ್ ಇಲಾಖೆ ರಾತ್ರಿ ಗಸ್ತು ನಡೆಸಿ, ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಅಕ್ಕಪಕ್ಕದ ನಿವಾಸಿಗಳು ಆಗ್ರಹಿಸಿದ್ದಾರೆ.
‘ಮೈದಾನಗಳಲ್ಲಿ ಕಸ ಹಾಕುವುದು,ಗಾಜಿನ ಬಾಟಲಿಗಳನ್ನು ಬಿಸಾಕುವುದು,ಇನ್ನಿತರೇ ಚಟುವಟಿಕೆ ತಕ್ಷಣ ನಿಲ್ಲಿಸಬೇಕು. ಮೈದಾನಗಳ ಸ್ವಚ್ಛತೆ ಮತ್ತು ಸುರಕ್ಷತೆ ಕಾಪಾಡಲು ಸೂಕ್ತ ವ್ಯವಸ್ಥೆ ಮಾಡಬೇಕು’ ಎಂದು ಮುಖ್ಯ ಶಿಕ್ಷಕ ಜೆ.ಎಂ. ಮಾಕಣ್ಣವರ ವಿನಂತಿಸಿದ್ದಾರೆ.
ಮೈದಾನ ಅಭಿವೃದ್ಧಿಗೆ ಶಾಲಾ ಆಡಳಿತ ಮಂಡಳಿ ಕ್ರಮ ಕೈಗೊಳ್ಳಲಿದೆ. ಹಣಕಾಸು ನೆರವಿಗೆ ಹಳೆಯ ವಿದ್ಯಾರ್ಥಿಗಳ ಸಹಕಾರ ಅಗತ್ಯವಾಗಿದೆ ಕೆ.ಎನ್. ಗಡ್ಡಿ, ಅಧ್ಯಕ್ಷ, ಮಾಡೆಲ್ ಹೈಸ್ಕೂಲ್
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260820-24-1198363997