
ನರೇಗಲ್: ಮಳೆಯಿಂದ ಹೆಸರು ಬೆಳೆ ರಕ್ಷಿಸಲು ರೈತರ ಪರದಾಟ, ಇಳುವರಿ ಕುಸಿತ
ನರೇಗಲ್: ಮುಂಗಾರಿನ ಪ್ರಮುಖ ಬೆಳೆ ಹೆಸರಿನ ಪ್ರಮಾಣವು, ಮಳೆಯ ಕೊರತೆಯಿಂದ ಈ ಬಾರಿ ತೀವ್ರವಾಗಿ ಇಳಿಮುಖವಾಗಿದೆ. ಅಳಿದುಳಿದ ಫಸಲನ್ನು ಕಟಾವು ಮಾಡಲು ಇದೀಗ ಮಳೆ ಅಡ್ಡಿಯಾಗಿದೆ. ಆಗಾಗ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ, ಹೆಸರು ಬೆಳೆ ರಕ್ಷಿಸಲು ರೈತರು ಪರದಾಡುವಂತಾಗಿದೆ.
ನರೇಗಲ್ ಪಟ್ಟಣ, ಕೋಡಿಕೊಪ್ಪ, ಕೋಚಲಾಪೂರ, ತೋಟಗಂಟಿ, ಮ್ಲಲಾಪುರ, ದ್ಯಾಂಪುರ, ಬೂದಿಹಾಳ, ಜಕ್ಕಲಿ, ಮಾರನಬಸರಿ, ಹಾಲಕೆರೆ, ನಿಡಗುಂದಿ, ನಿಡಗುಂದಿಕೊಪ್ಪ, ಕಳಕಾಪುರ, ಹೊಸಳ್ಳಿ, ಅಬ್ಬಿಗೇರಿ, ಯರೇಬೇಲೇರಿ, ಗುಜಮಾಗಡಿ, ಡ.ಸ ಹಡಗಲಿ ಸೇರಿದಂತೆ ಹೋಬಳಿಯಾದ್ಯಂತ ಒಟ್ಟು 37,679 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಮಳೆಯ ಅಭಾವದಿಂದಾಗಿ 33,326 ಹೆಕ್ಟೇರ್ (ಶೇ 88.44ರಷ್ಟು) ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಈ ಪೈಕಿ 17,046 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಲಾಗಿತ್ತು. ತೇವಾಂಶದ ಕೊರತೆಯಿಂದಾಗಿ ಸಾಕಷ್ಟು ರೈತರು ಹೆಸರು ಬೆಳೆಯನ್ನು ನಾಶ ಮಾಡಿದ್ದರು.
ಕೆಲ ರೈತರು, ಲಭ್ಯವಾದಷ್ಟು ಹೆಸರಿನ ಫಸಲನ್ನು ರಾಶಿ ಮಾಡುತ್ತಿದ್ದಾರೆ. ಆದರೆ ಈಗ ಮಳೆ ಕಾಟ ಶುರುವಾಗಿದೆ. ನರೇಗಲ್‌ನ ದ್ಯಾಂಪುರ ರಸ್ತೆ, ಅಬ್ಬಿಗೇರಿ ರಸ್ತೆ, ಗದಗ ರಸ್ತೆ, ವೀರಪ್ಪಜ್ಜನಮಠದ ರಸ್ತೆ, ಗಜೇಂದ್ರಗಡ ರಸ್ತೆ, ಹಂಚಿನಾಳ ರಸ್ತೆ, ಮಾರನಬಸರಿ ಗ್ರಾಮದ ಆಂಜನೇಯ ದೇವಸ್ಥಾನದ ಆವರಣ, ಅಲ್ಲಲ್ಲಿ ವಿಂಡ್ ಕಂಪನಿಯವರು ಬಳಕೆ ಮಾಡಿ ಖಾಲಿಯಾಗಿರುವ ಸ್ಥಳ ಸೇರಿದಂತೆ ವಿವಿಧೆಡೆ ಹೆಸರನ್ನು ಹರಡಿಕೊಂಡು, ಮಳೆಯಿಂದ ಬೆಳೆ ಸಂರಕ್ಷಿಸಲು ರೈತರು ಹರಸಾಹಸಪಡುತ್ತಿದ್ದಾರೆ.
ಒಂದು ಎಕರೆಗೆ ಒಂದು ಚೀಲವೂ ಇಲ್ಲ: ಪ್ರಸಕ್ತ ವರ್ಷ ಹೆಸರು ಬೆಳೆಯ ಕನಿಷ್ಠ ಇಳುವರಿ ದೊರೆತಿದೆ. ತೇವಾಂಶ ಕೊರತೆ, ಹಳದಿ ರೋಗ, ಕೀಟ ಬಾಧೆ ಸೇರಿದಂತೆ ಹತ್ತು ಹಲವು ಕಾರಣಗಳಿಂದಾಗಿ ಹೆಸರು ಇಳುವರಿಯ ಎಕರೆಗೆ 1 ಚೀಲವೂ ಬರುತ್ತಿಲ್ಲ. ಸಾಲ ಮಾಡಿ ಬಿತ್ತನೆ ಮಾಡಿದ್ದ ರೈತರಿಗೆ ಹೆಸರು ಬೆಳೆಯಿಂದ ನಿರೀಕ್ಷಿತ ಆದಾಯ ದಕ್ಕುತ್ತಿಲ್ಲ. ಪ್ರಸಕ್ತ ವರ್ಷದ ಮಾರುಕಟ್ಟೆಯಲ್ಲಿ ಹೆಸರು ಬೆಳೆಯ ಬೆಲೆ ಏರಳಿತ ಕಾಣುತ್ತಿದೆ. ಕ್ವಿಂಟಲ್ ಹೆಸರಿಗೆ ₹7,000ದಿಂದ ₹10,600 ದರವಿದೆ.
ಬೆಳೆ ವಿಮೆಯಾದರೂ ಕೈಹಿಡಿಯಬಹುದು ಎಂಬ ಕಾರಣಕ್ಕೆ ಹಲವಾರು ರೈತರು ಹೆಸರು ಬೆಳೆಗೆ ವಿಮೆ ಮಾಡಿಸಿದ್ದಾರೆ. ಆದರೆ, 2025–26 ನೇ ಸಾಲಿನ ಬೆಳೆ ವಿಮೆ ಪರಿಹಾರದಲ್ಲಿ ಹೆಸರು ಬೆಳೆಯನ್ನು ಕೈಬಿಟ್ಟು, ಅಲ್ಪ ಪ್ರಮಾಣದಲ್ಲಿ ಬಿತ್ತನೆಯಾದ ಹತ್ತಿ, ತೋಗರಿ, ಗೋವಿನಜೋಳಕ್ಕೆ ವಿಮೆ ಹಣ ನೀಡಲಾಗಿದೆ. ಇದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.
ಹಿಂಗಾರು ಬಿತ್ತನೆಗೂ ಅಡ್ಡಿ
‘ಹೆಸರನ್ನು ಕಟಾವು ಮಾಡಿದ ನಂತರ ಕಡಲೆ, ಜೋಳ, ಗೋಧಿ ಇನ್ನಿತರ ಹಿಂಗಾರು ಬೆಳೆಗಳನ್ನು ಬೆಳೆಯುವುದು ರೂಢಿ. ಆದರೆ, ಸತತ ಮಳೆ, ಮೋಡ ಕವಿದ ವಾತಾವರಣದ ಪರಿಣಾಮ ಹೆಸರು ಕಟಾವು ಮಾಡುವುದು ವಿಳಂಬವಾಗುತ್ತಿದೆ. ಇದರಿಂದಾಗಿ ಹಿಂಗಾರಿ ಬಿತ್ತನೆಗೆ ಜಮೀನು ಸ್ವಚ್ಛಗೊಳಿಸಿ, ಬಿತ್ತನೆ ಮಡುವುದಕ್ಕೂ ಹಿನ್ನಡೆಯಾಗುತ್ತಿದೆ. ಒಂದು ವಾರ ಉತ್ತಮವಾಗಿ ಬಿಸಿಲು ಬಿದ್ದಲ್ಲಿ ಹೆಸರು ಕಟಾವು ಸರಾಗವಾಗಿ ನಡೆಯಲಿದೆ’ ಎನ್ನುತ್ತಾರೆ ರೈತರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260820-23-1258545550