
ಯಲ್ಲೊ ಬೋರ್ಡ್‌ಗೆ ಅವಕಾಶ ಕೊಡಿ: ಬೈಕ್ ಟ್ಯಾಕ್ಸಿ ಅಸೋಸಿಯೇಷನ್
ಬೆಂಗಳೂರು: ‘ಬೈಕ್ ಟ್ಯಾಕ್ಸಿಗಳಿಗೆ ಹಳದಿ ನೋಂದಣಿ ಫಲಕ ನೀಡುವಂತೆ ಕೋರಿ ಅರ್ಜಿ ಸಲ್ಲಿಸಲು ನಾವು ಸಿದ್ಧರಿದ್ದೇವೆ. ಅವಕಾಶ ಮಾಡಿಕೊಡಿ, ಇಲ್ಲವೇ ನಿಯಮ ರೂಪಿಸುವವರೆಗೆ ಬೈಕ್ ಟ್ಯಾಕ್ಸಿಗಳು ಸಂಚರಿಸಲು ಬಿಡಿ..’
ಬೈಕ್ ಟ್ಯಾಕ್ಸಿಗಳನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ವಶಪಡಿಸಿಕೊಳ್ಳುತ್ತಿರುವುದಕ್ಕೆ ಬೈಕ್ ಟ್ಯಾಕ್ಸಿ ಅಸೋಸಿಯೇಷನ್ ಈ ರೀತಿ ಪ್ರತಿಕ್ರಿಯಿಸಿದೆ.
ಬೈಕ್ ಟ್ಯಾಕ್ಸಿ ನಿಷೇಧ ಮಾಡಲು ರಾಜ್ಯ ಸರ್ಕಾರ ಕಳೆದ ವರ್ಷ ಕೈಗೊಂಡಿದ್ದ ನಿರ್ಧಾರವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಬೈಕ್ ಟ್ಯಾಕ್ಸಿಗಳ ಮೇಲೆ ಬಲವಂತದ ಕ್ರಮ ಕೈಗೊಳ್ಳಬೇಡಿ. ಬೈಕ್ ಟ್ಯಾಕ್ಸಿಗಳಿಗಾಗಿ ನಿಯಮ ರೂಪಿಸಿ ಎಂದು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಆದರೆ, ಸರ್ಕಾರ ಯಾವುದೇ ನಿಯಮ ರೂಪಿಸಿಲ್ಲ. ಇದೀಗ ದಿಢೀರ್ ಕಾರ್ಯಾಚರಣೆ ನಡೆಸಿ ಬೈಕ್ ಟ್ಯಾಕ್ಸಿಗಳನ್ನು ವಶಪಡಿಸಿಕೊಳ್ಳುತ್ತಿರುವುದು ಹೈಕೋರ್ಟ್‌ನ ನಿರ್ದೇಶನಕ್ಕೆ ವಿರುದ್ಧವಾದುದು ಎಂದು ಅಸೋಸಿಯೇಷನ್ ಅಧ್ಯಕ್ಷ ಮೊಹಮ್ಮದ್ ಸಲೀಂ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬಿಳಿ ನೋಂದಣಿ ಫಲಕ ಹೊಂದಿರುವ ವಾಹನಗಳನ್ನು ವಾಣಿಜ್ಯ ಸಂಚಾರಕ್ಕೆ ಬಳಸಬಾರದು. ಅವು ವೈಯಕ್ತಿಕ ಬಳಕೆಯ ವಾಹನಗಳು ಎಂಬ ನಿಯಮ ಇದೆ. ಕ್ಯಾಬ್, ಟ್ಯಾಕ್ಸಿ ಸಹಿತ ಉಳಿದ ವಾಹನಗಳಿಗೆ ಈ ನಿಯಮ ಸರಿ ಹೊಂದುತ್ತದೆ. ಯಾಕೆಂದರೆ ಅಲ್ಲಿ ಬಿಳಿ ನೋಂದಣಿ ಫಲಕದ ವಾಹನಗಳೂ ಇವೆ. ಹಳದಿ ಫಲಕದ ವಾಹನಗಳೂ ಇವೆ. ಆದರೆ, ದ್ವಿಚಕ್ರ ವಾಹನಗಳಲ್ಲಿ ಹಳದಿ ಫಲಕ ಎಂಬುದು ಕರ್ನಾಟಕದಲ್ಲಿ ಇಲ್ಲ. ಹೀಗಿರುವಾಗ ಇಲ್ಲಿ ಅನಿವಾರ್ಯವಾಗಿ ಬಿಳಿ ನೋಂದಣಿ ಫಲಕ ಹೊಂದಿರುವ ವಾಹನಗಳನ್ನೇ ಬೈಕ್ ಟ್ಯಾಕ್ಸಿಯಾಗಿ ಬಳಸಬೇಕಾಗುತ್ತದೆ. ನಮಗೂ ವಾಣಿಜ್ಯ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಅದಕ್ಕಾಗಿ ದ್ವಿಚಕ್ರ ವಾಹನಗಳಿಗೂ ಹಳದಿ ಫಲಕ (ನೋಂದಣಿ ಫಲಕ) ಮಾಡಿ. ತೆರಿಗೆ ನಿಗದಿ ಮಾಡಿ. ನಾವು ತೆರಿಗೆ ಕಟ್ಟಲು ತಯಾರಿದ್ದೇವೆ’ ಎಂಬುದು ಅವರ ವಿವರಣೆ.
‘ಈ ಸೋಂಬೇರಿ ಸರ್ಕಾರ ಯಾವುದೇ ನಿಯಮ ರೂಪಿಸುತ್ತಿಲ್ಲ. ಸಾರಿಗೆ ಇಲಾಖೆಯ ಅಧಿಕಾರಿಗಳೂ ಸ್ಪಂದಿಸುತ್ತಿಲ್ಲ. ಅಲ್ಲದೇ ಬೈಕ್ ಟ್ಯಾಕ್ಸಿಗಳನ್ನು ಹಿಡಿದಿದ್ದೇವೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹೇಳಿಕೊಳ್ಳುತ್ತಿರುವುದಷ್ಟೇ ಆಗಿದೆ. ಬಹುತೇಕ ಬೈಕ್ ಟ್ಯಾಕ್ಸಿಗಳನ್ನು ಆಟೊದವರೇ ಹಿಡಿದು ಕೊಟ್ಟಿರುವುದು. ಸಾರಿಗೆ ಅಧಿಕಾರಿಗಳು ತಮ್ಮ ಅಧಿಕಾರವನ್ನು ಆಟೊದವರಿಗೆ ಯಾವಾಗ ಬಿಟ್ಟುಕೊಟ್ಟರು’ ಎಂದು ಪ್ರಶ್ನಿಸಿದರು.
ಸ್ಪಂದನೆಗೆ ಸಿಗದ ಅಧಿಕಾರಿ
ಹೆಚ್ಚುವರಿ ಸಾರಿಗೆ ಆಯುಕ್ತೆ ಎಂ.ಪಿ. ಓಂಕಾರೇಶ್ವರಿ ಅವರ ಸೂಚನೆಯ ಮೇರೆಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಬೈಕ್ ಟ್ಯಾಕ್ಸಿಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹೈಕೋರ್ಟ್ ಸೂಚನೆಯ ಉಲ್ಲಂಘನೆ ಇದು ಎಂದು ಬೈಕ್ ಟ್ಯಾಕ್ಸಿ ಅಸೋಸಿಯೇಷನ್ ಆರೋಪಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕರೆ ಮಾಡಿದರೂ ಹೆಚ್ಚುವರಿ ಸಾರಿಗೆ ಆಯುಕ್ತರು ಸ್ವೀಕರಿಸಲಿಲ್ಲ.
‘ಬಡ ಸವಾರರ ಮೇಲೆ ಯಾಕೆ ಸವಾರಿ?’
ಬೈಕ್ ಟ್ಯಾಕ್ಸಿಯನ್ನು ನಂಬಿ ಬದುಕುವವರ ಸಂಖ್ಯೆ ಸುಮಾರು 1.5 ಲಕ್ಷ ಇದೆ. ಅವರು ದಿನಕ್ಕೆ ₹ 500, ₹ 600 ದುಡಿಯುತ್ತಾರೆ. ಕಾರ್ಯಾಚರಣೆಯ ಹೆಸರಲ್ಲಿ ಅವರ ಮೇಲೆ ಯಾಕೆ ಸವಾರಿ ಮಾಡುತ್ತೀರಿ’ ಎಂದು ಬೈಕ್ ಟ್ಯಾಕ್ಸಿ ಅಸೋಸಿಯೇಷನ್ ಅಧ್ಯಕ್ಷ ಮೊಹಮ್ಮದ್ ಸಲೀಂ ಪ್ರಶ್ನಿಸಿದರು.
‘ನಿಯಮ ರೂಪಿಸದೇ ಪ್ರಕರಣ ದಾಖಲಿಸುವುದೇ ತಪ್ಪು. ಒಂದು ವೇಳೆ ಪ್ರಕರಣ ದಾಖಲಿಸಬೇಕಂತಲೇ ಇದ್ದರೂ ಅಗ್ರಿಗೇಟರ್ ಕಂಪನಿಗಳ ಮೇಲೆ ದಾಖಲಿಸಲಿ. ಈ ಬಡ ಸವಾರರು ₹ 10 ಸಾವಿರ ದಂಡ ಕಟ್ಟುವುದು ಕಷ್ಟ’ ಎಂದು ಹೇಳಿದರು.
ರ‍್ಯಾಪಿಡೊ, ಉಬರ್ ಸಹಿತ ಅಗ್ರಿಗೇಟರ್ ಕಂಪನಿಗಳು ಕರ್ನಾಟಕದವುಗಳಲ್ಲ ಎಂಬುದು ಆಟೊ ಅಸೋಸಿಯೇಷನ್‌ಗಳ ಪದಾಧಿಕಾರಿಗಳ ಆರೋಪ. ಹಾಗಾದರೆ ಅವರು ಓಡಿಸುವ ಆಟೊಗಳು ಕರ್ನಾಟಕದ ಕಂಪನಿಗಳದ್ದಾ? ಬಜಾಜ್, ಪಿಯಾಜಿಯೊ ಸೇರಿದಂತೆ ಎಲ್ಲ ಕಂಪನಿಗಳು ಬೇರೆ ರಾಜ್ಯಗಳದ್ದೇ ಆಗಿವೆ. ಇಂಥ ಸಂದರ್ಭದಲ್ಲಿ ಗೊಂದಲ ಸೃಷ್ಟಿಸಲು ಕನ್ನಡ, ಕರ್ನಾಟಕ ಎಂದು ಹೇಳುತ್ತಿದ್ದಾರೆ. ಆಟೊ ಇರಲಿ, ಬೈಕ್ ಟ್ಯಾಕ್ಸಿ ಇರಲಿ ದುಡಿಯುವವರು ಮಾತ್ರ ಇಲ್ಲಿಯವರೇ ಎಂದು ತಿಳಿಸಿದರು.