
ಕೆಆರ್‌ಎಸ್ ಅಣೆಕಟ್ಟೆಯಲ್ಲಿ 105 ಅಡಿ ನೀರು: ಗರಿಗೆದರಿದ ಮುಂಗಾರು ಕೃಷಿ ಚಟುವಟಿಕೆ
ಶ್ರೀರಂಗಪಟ್ಟಣ: ಕೆಆರ್‌ಎಸ್ ಅಣೆಕಟ್ಟೆಯಲ್ಲಿ 105 ಅಡಿ ನೀರು ತುಂಬಿದ್ದು ತಾಲ್ಲೂಕಿನ ವಿವಿಧ ನಾಲೆಗಳ ಬಯಲಿನಲ್ಲಿ ಮುಂಗಾರು ಹಂಗಾಮು ಭತ್ತದ ಬೆಳೆಗಾಗಿ ರೈತರು ಬಿತ್ತನೆ ಕಾರ್ಯ ಶುರು ಮಾಡಿದ್ದಾರೆ.
ತಾಲ್ಲೂಕಿನ ಬೆಳಗೊಳ, ಅರಕೆರೆ, ಕೆ.ಶೆಟ್ಟಹಳ್ಳಿ ಮತ್ತು ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಮೂರು ದಿನಗಳಿಂದ ರೈತರು ಭತ್ತ ಒಟ್ಲು ಪಾತಿ ಸಿದ್ದಪಡಿಸುವ ಮತ್ತು ಬಿತ್ತನೆ ಬೀಜ ಬಿತ್ತುವ ಕೆಲಸ ಆರಂಭಿಸಿದ್ದಾರೆ. ಚಿಕ್ಕದೇವರಾಯಸಾಗರ (ಸಿಡಿಎಸ್), ವಿರಿಜಾ, ವಿಶ್ವೇಶ್ವರಯ್ಯ, ದೇವರಾಯ, ಬಂಗಾರದೊಡ್ಡಿ ನಾಲೆಗಳ ವ್ಯಾಪ್ತಿಯಲ್ಲಿ ಭತ್ತದ ಬೀಜ ಬಿತ್ತನೆ ಕಾರ್ಯ ಬಿರುಸಿನಿಂದ ನಡೆಯುತ್ತಿದೆ.
ಮುಂಗಾರು ಬೆಳೆಗಾಗಿ ನಾಲೆಗಳಿಗೆ ನೀರು ಹರಿಸುವ ಸಂಬಂಧ ಕೃಷಿ ಇಲಾಖೆ ರೈತರಿಗೆ ಇದುವರೆಗೆ ಅಧಿಕೃತ ಮಾಹಿತಿ ನೀಡಿಲ್ಲ. ರೈತರಿಗೆ ಅಗತ್ಯವಾದ ಬಿತ್ತನೆ ಬೀಜವನ್ನೂ ಮಾರಾಟ ಮಾಡುತ್ತಿಲ್ಲ. ಹಾಗಾಗಿ ರೈತರು ಖಾಸಗಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಮಾರಾಟದ ಅಂಗಡಿಗಳಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿಸುತ್ತಿದ್ದಾರೆ.
‘ಕೆಆರ್‌ಎಸ್ ಅಣೆಕಟ್ಟೆಗೆ ತಡವಾಗಿಯಾದರೂ ನೀರು ಹರಿದು ಬರುತ್ತಿದೆ. ಜಲಾಶಯದ ನೀರಿನ ಮಟ್ಟ 105 ಅಡಿ ದಾಟಿರುವುದರಿಂದ ಒಂದು ಬೆಳೆಗೆ ನೀರು ಸಿಗುತ್ತದೆ ಎಂಬ ಭರವಸೆಯಿಂದ ಭತ್ತದ ಬೆಳೆ ಬೆಳೆಯಲು ಭೂಮಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಒಟ್ಲು ಪಾತಿ ಸಿದ್ದಪಡಿಸಿ ಭತ್ತದ ಬೀಜ ಬಿತ್ತಿದ್ದೇನೆ. ಸರ್ಕಾರದಿಂದ ಬಿತ್ತನೆ ಬೀಜ ಮಾರಾಟ ಮಾಡದ ಕಾರಣ ಖಾಸಗಿ ಅಂಗಡಿಗಳಿಂದ ತಂದು ಬಿತ್ತನೆ ಮಾಡಿದ್ದೇನೆ’ ಎಂದು ಅರಕೆರೆ ಗ್ರಾಮದ ರೈತ ಸಿದ್ದರಾಜು ತಿಳಿಸಿದರು.
‘ಕೆಆರ್‌ಎಸ್ ಅಣೆಕಟ್ಟೆಗೆ ನೀರು ಹರಿದು ಬರುತ್ತಿದ್ದು, ಕಾಲುವೆಗಳಲ್ಲೂ ನೀರು ಹರಿಯುತ್ತಿರುವುದರಿಂದ ಕಳೆದ ಮೂರು ದಿನಗಳಿಂದ ನಮ್ಮ ಅಂಗಡಿಯಲ್ಲಿ ಭತ್ತದ ಬಿತ್ತನೆ ಬೀಜ ಮತ್ತು ರಸಗೊಬ್ಬರ ಹೆಚ್ಚು ಮಾರಾಟವಾಗುತ್ತಿದೆ. ಸದ್ಯ ದಿನಕ್ಕೆ 30ರಿಂದ 40 ಎಕರೆಗೆ ಬಿತ್ತುವಷ್ಟು ಹೈಬ್ರಿಡ್ ತಳಿಯ ಭತ್ತದ ಬಿತ್ತನೆ ಬೀಜ ಬಿಕರಿಯಾಗುತ್ತಿದೆ’ ಎಂದು ಬಾಬುರಾಯಕೊಪ್ಪಲಿನ ರೈತ ಕೃಷಿ ಸೇವಾ ಕೇಂದ್ರದ ಮಾಲೀಕ ರಾಮಚಂದ್ರು ತಿಳಿಸಿದ್ದಾರೆ.
ಐಆರ್–64 ತಳಿ ಭತ್ತಕ್ಕೆ ಬೇಡಿಕೆ ಸಲ್ಲಿಕೆ
‘ಕೃಷಿ ಇಲಾಖೆಗೆ, 30 ಹೆಕ್ಟೇರ್‌ಗೆ ಆಗುವಷ್ಟು ಆರ್‌ಎನ್‌ಆರ್ ಹೈಬ್ರಿಡ್ ತಳಿಯ ಭತ್ತದ ಬಿತ್ತನೆ ಬೀಜ ಬಂದಿದೆ. ನೀರಿನ ಕೊರತೆ ಕಾರಣದಿಂದ ಈ ಬಾರಿ ಬಿತ್ತನೆ ಕಾರ್ಯ ತಡವಾಗಿ ನಡೆಯುತ್ತಿದ್ದು, ಡ್ರಂ ಸೀಡರ್ ಪದ್ಧತಿಯಲ್ಲಿ ನೇರವಾಗಿ ಬಿತ್ತನೆ ಮಾಡುವವರಿಗೆ, ಪ್ರಾತ್ಯಕ್ಷಿಕೆಗಾಗಿ ಮಾತ್ರ ಈ ಬಿತ್ತನೆ ಬೀಜವನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಬೇಗ ಕಟಾವಿಗೆ ಬರುವ ಐಆರ್–64 ತಳಿಯ ಭತ್ತದ ಬಿತ್ತನೆ ಬೀಜಕ್ಕೆ ಬೇಡಿಕೆ ಸಲ್ಲಿಸಲಾಗುವುದು’ ಎಂದು ಕೆ.ಶೆಟ್ಟಹಳ್ಳಿ ಹೋಬಳಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಗೀತಾ ಹೇಳಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260807-40-876684323